ಚಿಕ್ಕಬಳ್ಳಾಪುರ | ರಾಜ್ಯದಲ್ಲಿ ಸರ್ಕಾರ ಇದ್ದು, ಇಲ್ಲದಂತಾಗಿದೆ: ಬಿಜೆಪಿ ವಿರುದ್ಧ ಎಚ್‌ಡಿಕೆ ಕಿಡಿ

  • ಮೂಲಭೂತ ಸೌಲಭ್ಯಗಳಿಲ್ಲದೆ ಖಾಸಗಿ ಶಾಲೆ ಸೇರಿದ 1.62 ಲಕ್ಷ ಮಕ್ಕಳು  
  • ಅಧಿಕಾರಕ್ಕೆ ಬಂದರೆ ಎಲ್ಲ ಸ್ತ್ರೀಶಕ್ತಿ ಸಂಘಗಳ ಸಂಪೂರ್ಣ ಸಾಲ ಮನ್ನಾ 

ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಇದ್ದು ಇಲ್ಲದಂತಿದೆ. ಯಾರಿಗೂ ಯಾವುದಕ್ಕೂ ಸ್ಪಂದನೆಯೇ ಇಲ್ಲವಾಗಿದೆ. ಕನಿಷ್ಠ ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ 1.62 ಲಕ್ಷ ಮಕ್ಕಳು ಖಾಸಗಿ ಶಾಲೆಗಳಿಗೆ ಸೇರಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ, ಎಲ್ಲ ಸಮುದಾಯದ ಮಕ್ಕಳಿಗೂ ಒಂದೇ ಸೂರಿನಡಿ ಹೈಟೆಕ್ ಶಿಕ್ಷಣವನ್ನು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಚಿಂತಾಮಣಿ ತಾಲೂಕಿನ ಕೈವಾರ ಗ್ರಾಮಕ್ಕೆ ಆಗಮಿಸಿದ ಪಂಚರತ್ನ ರಥಯಾತ್ರೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, "ಚಿಂತಾಮಣಿ ತಾಲೂಕಿನ ಜನತೆ ರಾಜಕೀಯ ಬದಲಾವಣೆಗೆ ನಾಂದಿ ಹಾಡಿದ ಬುದ್ದಿವಂತ ಜನ. ಜೆ.ಕೆ ಕೃಷ್ಣಾರೆಡ್ಡಿ ಎಂಬ ಸಂಭಾವಿತ ಜನಸೇವಕನನ್ನು ಸತತ ಎರಡು ಬಾರಿ ಆರಿಸಿ ಕಳಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸಿದ್ದೀರಿ. 2023ರ ಚುನಾವಣೆಯಲ್ಲಿಯೂ ಮತ್ತೊಮ್ಮೆ ಅವರನ್ನು ಆರಿಸಿ ಕಳಿಸಿದರೆ ಖಂಡಿತ ಮಂತ್ರಿಯಾಗುವ ಮೂಲಕ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಶಕ್ತಿ ಬರಲಿದೆ" ಎಂದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೊಳಚೆ ನೀರನ್ನು ನಿಲ್ಲಿಸಿ ಶುದ್ಧ ನದಿ ನೀರನ್ನು ಕೊಡುತ್ತೇನೆ. 24 ಗಂಟೆಯೊಳಗೆ ಎಲ್ಲ ಸ್ತ್ರೀಶಕ್ತಿ ಸಂಘಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡುವೆ. ವಿಧವಾ ವೇತನ, ವಿಕಲಚೇತನರಿಗೆ 2,500, ಹಿರಿಯ ನಾಗರೀಕರಿಗೆ 5 ಸಾವಿರ ರೂ. ಪ್ರತೀ ತಿಂಗಳು ಅವರ ಖಾತೆಗೆ ಸೇರುವ ವ್ಯವಸ್ಥೆ ಮಾಡುವೆ. ಪಂಚರತ್ನದ ಉದೇಶವೇ 6 ಕೋಟಿ ಜನತೆಗೆ ಉತ್ತಮ ಬದುಕು ನೀಡುವುದಾಗಿದೆ. ಇಲ್ಲವಾದರೆ ಪಕ್ಷವನ್ನೇ ವಿಸರ್ಜನೆ ಮಾಡುವೆ" ಎಂದರು.

ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮಾತನಾಡಿ, "ಕುಮಾರಸ್ವಾಮಿ ಅವರು ಪೂರ್ಣಾವಧಿ ಮುಖ್ಯಮಂತ್ರಿ ಆಗಬೇಕು ಎಂಬುದು ರಾಜ್ಯದ ಜನರ ಬಯಕೆಯಾಗಿದೆ. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಪಕ್ಷಗಳ ಜನವಿರೋಧಿ ನಿಲುವು, ಭ್ರಷ್ಟಾಚಾರ, ಜನವಿರೋಧಿ ಧೋರಣೆಗಳು ನಮಗೆ ವರವಾಗುತ್ತವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ ಜೆಡಿಎಸ್‌ಅನ್ನು ಬೆಂಬಲಿಸಿ ಮತ ನೀಡಿದರೆ ಪಂಚರತ್ನ ಯೋಜನೆಗಳು ಜಾರಿಯಾಗಲಿವೆ" ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180