
- ʼಶವ ರಾಜಕೀಯ ಮಾಡುವ ಬಿಜೆಪಿ ನಾಯಕರು ಜನರ ಕ್ಷಮೆ ಯಾಚಿಸಲಿʼ
- ಶೋಭಾ ಕರಂದ್ಲಾಜೆ, ಅನಂತಕುಮಾರ್ ಹೆಗಡೆ, ಸಿ ಟಿ ರವಿ, ಕಟೀಲು ವಿರುದ್ಧ ಟೀಕೆ
“ಪರೇಶ್ ಮೇಸ್ತಾ ಸಾವನ್ನು ಹಿಂದೂಗಳ ಹತ್ಯೆ ಎಂದು ಬೀದಿಯಲ್ಲಿ ಮತ್ತು ಮಾಧ್ಯಮಗಳಲ್ಲಿ ಅರಚಾಡಿದ್ದ ಬಿಜೆಪಿಗರು, ಈಗ ಏನು ಹೇಳುತ್ತಾರೆ?" ಎಂದು ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
'ಸಂಘಪರಿವಾರದ ಕಾರ್ಯಕರ್ತ' ಎಂದು ಬಿಂಬಿತವಾಗಿ ರಾಜ್ಯಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತಾ ಸಾವು ಪ್ರಕರಣವು ತಿರುವು ಪಡೆದುಕೊಂಡಿದೆ. 'ಪರೇಶ್ ಮೇಸ್ತಾ ಸಾವು ಆಕಸ್ಮಿಕ' ಎಂದು ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಇದೀಗ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಈ ಕುರಿತು ಮಹದೇವಪ್ಪ ಟ್ವೀಟ್ ಮಾಡಿದ್ದಾರೆ.
“ಇದರ ಜೊತೆಗೆ ಇತ್ತೀಚೆಗೆ ಪರೇಶ್ ಮೇಸ್ತಾ ಕೊಲೆ ಆರೋಪಿ ಎನ್ನಲಾದ ವ್ಯಕ್ತಿಯೋರ್ವನಿಗೆ ಸರ್ಕಾರದ ಒಳಗೆ ಸ್ಥಾನ ಕೊಟ್ಟ ಸುದ್ದಿ ಕೇಳಿದ್ದ ನನಗೆ, ಕೇಂದ್ರ ಸರ್ಕಾರದ ಕಪಿಮುಷ್ಠಿಗೆ ಸಿಲುಕಿರುವ ಸಿಬಿಐನ ತನಿಖೆ ಸರಿಯಾಗಿ ನಡೆದಿದೆಯೋ ಇಲ್ಲವೋ ಎಂಬ ಅನುಮಾನವೂ ಕೂಡಾ ದಟ್ಟವಾಗಿದೆ” ಎಂದಿದ್ದಾರೆ.
ಪರೇಶ್ ಮೇಸ್ತಾ ಸಾವನ್ನು ಹಿಂದೂಗಳ ಹತ್ಯೆ ಎಂದು ಮಾಧ್ಯಮಗಳ ಮೂಲಕ ಅರಚಾಡಿದ್ದ @BJP4Karnataka ಯವರು ಈಗ ಏನು ಹೇಳುತ್ತಾರೆ?
ಇದರ ಜೊತೆಗೆ ಇತ್ತೀಚೆಗೆ ಪರೇಶ್ ಮೇಸ್ತಾ ಕೊಲೆ ಆರೋಪಿ ಎನ್ನಲಾದ ವ್ಯಕ್ತಿಯೋರ್ವನಿಗೆ ಸರ್ಕಾರದ ಒಳಗೆ ಸ್ಥಾನ ಕೊಟ್ಟ ಸುದ್ದಿ ವರದಿಯಾಗಿರುವುದು ಸಿಬಿಐ ನೀಡಿರುವ ರಿಪೋರ್ಟ್ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ ಎಂದೂ ಅವರು ಹೇಳಿದ್ದಾರೆ.
— Dr H.C.Mahadevappa (@CMahadevappa) October 4, 2022
1/2 pic.twitter.com/Uuomci0dAU
“ಈ ಸಂಗತಿಯ ಆಚೆಗೆ ಹಿಂದೂಗಳ ಹತ್ಯೆ ಎನ್ನುತ್ತಾ ಶವ ರಾಜಕೀಯ ಮಾಡುವ ಶೋಭಾ ಕರಂದ್ಲಾಜೆ, ಅನಂತಕುಮಾರ್ ಹೆಗಡೆ, ಸಿ ಟಿ ರವಿ, ನಳೀನ್ ಕುಮಾರ್ ಅವರು ಈಗ ರಾಜ್ಯದ ಜನರ ಮುಂದೆ ಬಹಿರಂಗವಾಗಿ ಕ್ಷಮೆ ಯಾಚಿಸಲಿ!” ಎಂದು ಆಗ್ರಹಿಸಿದ್ದಾರೆ.
ಬಿಜೆಪಿಗರು ರಾಜ್ಯದ ಜನತೆಯ ಕ್ಷಮೆ ಯಾಚಿಸಲಿ : ಖಾದರ್
ಪರೇಶ್ ಮೇಸ್ತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಗರು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.
ಮಂಗಳೂರು ನಗರದ ಸರ್ಕ್ಯೂಟ್ ಹೌಸ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಬಿಜೆಪಿ ಸಾವಿನ ಮನೆಯಲ್ಲಿ ರಾಜಕೀಯ ಮಾಡುತ್ತಿರುವುದಕ್ಕೆ ಪರೇಶ್ ಮೇಸ್ತ ಸಾವಿನ ಪ್ರಕರಣವೇ ಸಾಕ್ಷಿಯಾಗಿದೆ" ಎಂದರು.
"ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಬಿಜೆಪಿ ರಾಜಕೀಯ ಮಾಡುತ್ತಲೇ ಬಂದಿದೆ. ಅಂದು ರಾಜಕೀಯ ಲಾಭಕ್ಕಾಗಿ ಮಾತನಾಡಿದ್ದ ಸಂಸದ ಅನಂತಕುಮಾರ್ ಹೆಗಡೆ, ಸಚಿವೆ ಶೋಭಾ ಕರಂದ್ಲಾಜೆ ಆ ಬಳಿಕ ಸುಮ್ಮನಾಗಿದ್ದರು. ಇದೀಗ ಪರೇಶ್ ಮೇಸ್ತ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ "ಬಿ" ರಿಪೋರ್ಟ್ ಸಲ್ಲಿಸಿದ್ದು, ಬಿಜೆಪಿ ಮುಖಂಡರು ಮೌನ ವಹಿಸುವ ಬದಲು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು" ಎಂದು ಯು.ಟಿ.ಖಾದರ್ ಆಗ್ರಹಿಸಿದರು.
"ಐದಾರು ತಿಂಗಳಲ್ಲಿ ಚುನಾವಣೆ ಎದುರಾಗಲಿದೆ. ಬಿಜೆಪಿ ಸಾವಿನ ಮನೆಯಲ್ಲಿ ರಾಜಕೀಯ ಮಾಡುವ ಸಾಧ್ಯತೆ ಇದೆ. ಹಾಗಾಗಿ ರಾಜ್ಯದ ಜನತೆ ಬಿಜೆಪಿಯ ರಾಜಕೀಯವನ್ನು ಅರ್ಥಮಾಡಿಕೊಳ್ಳಬೇಕು" ಎಂದು ಯು.ಟಿ.ಖಾದರ್ ಮನವಿ ಮಾಡಿದರು.