
- ʼಸುಳ್ಳನ್ನೇ ತೀರ್ಥ ಪ್ರಸಾದದಂತೆ ಹಂಚುತ್ತಾ ತಿರುಗುವುದನ್ನು ನಿಲ್ಲಿಸಬೇಕುʼ
- ʼಯಾವ ಪ್ರಕರಣ ಹಿಂಪಡೆದಿದ್ದೇವೆ ಎಂಬುದನ್ನು ಬಿಜೆಪಿ ಉತ್ತರಿಸಲಿʼ
“ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರು, ಕಾರ್ಮಿಕರು, ದಲಿತರು, ಪೌರ ಕಾರ್ಮಿಕರು, ಕಬ್ಬು ಬೆಳೆಗಾರರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವುದೇ ಹೆಚ್ಚು. ಕೆಲವೊಂದು ಪ್ರಕರಣಗಳಲ್ಲಿ ಆರೋಪಿಗಳು ಮುಸ್ಲಿಮರಾಗಿದ್ದಾರೆ. ಅವರೆಲ್ಲರನ್ನೂ ಪಿಎಫ್ಐ ಎಂದು ಬಿಂಬಿಸಿ ತಮ್ಮ ಸುಳ್ಳಿನ ಭಜನೆ ಮಾಡಿದರೆ ಜನ ನಂಬುವುದಿಲ್ಲ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ನನ್ನ ಪ್ರಶ್ನೆಗಳಿಗೆ ಬಿಜೆಪಿ ಸರ್ಕಾರವೇ ನೀಡಿರುವ ಉತ್ತರದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾವುದೇ ಪಿಎಫ್ಐ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣ ಹಿಂದಕ್ಕೆ ಪಡೆದಿರುವುದರ ಬಗ್ಗೆ ಉಲ್ಲೇಖಗಳೇ ಇಲ್ಲ. ಬದಲಿಗೆ ನಾನು ಮುಖ್ಯಮಂತ್ರಿ ಆಗಿದ್ದ ಸರ್ಕಾರದ ಅವಧಿಯಲ್ಲಿ ರೈತ, ದಲಿತ, ಕಾರ್ಮಿಕ, ಕಮ್ಯುನಿಸ್ಟ್ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರುಗಳ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿತ್ತು ಎನ್ನುವ ಬಗ್ಗೆ ಬಿಜೆಪಿ ಸರ್ಕಾರವೇ ಉತ್ತರಿಸಿದೆ” ಎಂದಿದ್ದಾರೆ.
“ಹಿಂದಕ್ಕೆ ಪಡೆಯಲಾದ ಈ ಪ್ರಕರಣಗಳಲ್ಲಿ ಪಿಎಫ್ಐ ಕಾರ್ಯಕರ್ತರು ಆರೋಪಿಗಳಾಗಿದ್ದರು ಎನ್ನುವುದರ ಬಗ್ಗೆ ಬಿಜೆಪಿ ಸರ್ಕಾರ ಕೊಟ್ಟ ಉತ್ತರದಲ್ಲಿ ಯಾವುದೇ ಉಲ್ಲೇಖಗಳಿಲ್ಲ. ಹೀಗಾಗಿ ಬಿಜೆಪಿ ಮತ್ತು ಪರಿವಾರದ ಮಂದಿ ಸಾರ್ವಜನಿಕವಾಗಿ ಸುಳ್ಳನ್ನೇ ಆರಾಧಿಸುತ್ತಾ, ಸುಳ್ಳನ್ನೇ ಭಜಿಸುತ್ತಾ, ಸುಳ್ಳನ್ನೇ ತೀರ್ಥ ಪ್ರಸಾದದಂತೆ ಹಂಚುತ್ತಾ ತಿರುಗುವುದನ್ನು ನಿಲ್ಲಿಸಬೇಕು. ಯಾವ ಪಿಎಫ್ಐ ಕಾರ್ಯಕರ್ತರ ಮೇಲಿನ ಯಾವ ಪ್ರಕರಣವನ್ನು ಕಾಂಗ್ರೆಸ್ ಅವಧಿಯಲ್ಲಿ ಹಿಂದಕ್ಕೆ ಪಡೆಯಲಾಗಿತ್ತು ಎನ್ನುವುದನ್ನು ಬಿಜೆಪಿ ಹೇಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬ್ಯಾನರ್ ಹರಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಾವೂ ರಾಜಕಾರಣ ಮಾಡ್ತೀವಿ: ಡಿ ಕೆ ಶಿವಕುಮಾರ್
“ಸಂಘ ಪರಿವಾರದ ಅಂಗಳದಲ್ಲೇ ಇರುವ ಪ್ರಮೋದ್ ಮುತಾಲಿಕ್ ಅವರೇ ಕೆಲವು ದಿನಗಳ ಹಿಂದಷ್ಟೇ, ʼಪಿಎಫ್ಐ ಮತ್ತು ಎಸ್ಡಿಪಿಐ ಎರಡಕ್ಕೂ ಬಿಜೆಪಿಯೇ ಪೋಷಕ. ಬಿಜೆಪಿಯಿಂದಲೇ ಈ ಎರಡೂ ಬೆಳೆದಿವೆʼ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಇದುವರೆಗೂ ಬಿಜೆಪಿಯವರಾಗಲೀ, ಸಂಘ ಪರಿವಾರವಾಗಲೀ ಅಲ್ಲಗಳೆದಿಲ್ಲ ಏಕೆ? ಹಾಗಾದರೆ ಪ್ರಮೋದ್ ಮುತಾಲಿಕ್ ಅವರ ಮಾತು ನಿಜ ತಾನೆ? ಸತ್ಯಜಿತ್ ಸೂರತ್ಕಲ್ ಅವರು, ಪಿಎಫ್ಐ ಮತ್ತು ಎಸ್ಡಿಪಿಐ ಎರಡೂ ಬಿಜೆಪಿಯ ಬಿ ಟೀಮ್ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಬಿಜೆಪಿ ಮತ್ತು ಸಂಘ ಪರಿವಾರ ಅಲ್ಲಗಳೆದಿಲ್ಲ” ಎಂದು ಕುಟುಕಿದ್ದಾರೆ.