ಪಿರಿಯಾಪಟ್ಟಣ | 'ಜಾಗ ಕೊಡಿಸ್ತೀವಿ ಓಟಾಕಿ ಅಂದ್ರು, ಈಗ ಹಕ್ಕುಪತ್ರ ಕೊಡ್ತಿಲ್ಲ': ಆದಿವಾಸಿಗಳ ಅಳಲು

"ನಮ್ಮ ಹೋರಾಟಕ್ಕೆ ಬೆಲೆ ಇಲ್ಲ. ಅಧಿಕಾರಿಗಳು ನಮ್ಮ ಸಮಸ್ಯೆ ಕಂಡು ಕಣ್ಮುಚ್ಚಿ ಕೂತ್ಕಂಡವ್ರೆ. ನಮ್ಗೆ ಜಾಗ ಕೊಡಲ್ಲ ಅಂತಾವ್ರೆ. ಹಾಗಾದ್ರೆ ಸೂರಿಗಾಗಿ ನಾವ್‌ ಎಲ್ಲಿಗೆ ಹೋಗೋದು. ತಂದೆ ತಾಯಿ ಆಸ್ತಿ ನಮಗಿಲ್ಲ. ಕಾಡೇ ನಮ್ಮ ಆಸ್ತಿ, ಅಲ್ಲಿಗೆ ಹೋಗಿ ಗುಡುಸ್ಲಾಕ್ತಿವಿ ಅಷ್ಟೇ...- ಇದು ಪಿರಿಯಾಪಟ್ಟಣ ತಾಲೂಕಿನ ನಾಗರಹೊಳೆ ಕಾಡಿನ ರಸ್ತೆ ಬಳಿ ಹೋರಾಟ ನಿರತರಾಗಿರುವ ಸೂರಿಲ್ಲದ ಆದಿವಾಸಿಗಳ ಅಳಲು ಮತ್ತು ಆಕ್ರೋಶ.

"ಇವತ್ತಿಗೆ ನಾಲ್ಕ್‌ ದಿವ್ಸ ಆಗಿದೆ ನಾವ್‌ ಧರಣಿಗೆ ಕೂತ್ಕಂಡು, ಇಲ್ಲಿ ತನ್ಕ ಗೆದ್ದಿರೋರು ಬಂದಿಲ್ಲ, ಯಾವ ಇಲಾಖೆ ಅಧಿಕಾರಿಗಳೂ ಬಂದಿಲ್ಲ. ನೆನ್ನೆ ಬಂದ್ರು. ಅದು ಇದು ಮಾಡ್ತೀವಿ ಅಂತ ಹೋದ್ರು, ನಾನ್‌ ಮಾತ್ರವ ಧರಣಿ ಕೈಬಿಡೋದಿಲ್ಲ. ಸರ್ವೆ ಫಾರಂ ಆಗ್ಬೇಕು, ನಮ್ಗೆ ಜಾಗ ತೋರ್ಸಿ ಹಕ್ಕುಪತ್ರ ಕೈಗೆ ಕೊಡ್ಬೇಕು. ಆಗ್ಲೆ ಈ ಹೋರಾಟ ಕೈ ಬಿಡೋದು. ಓಟಾಕಿ ಕೆಲ್ಸ ಮಾಡ್ತಿವಿ ಅಂದು ಓಟು ತಕ್ಕಂಡವ್ರು ಯಾರೂ ಬಂದಿಲ್ಲ. ಈ ಮಳೆಲೀ ಒಂದು ತಿಂಗಳಾದ್ರೂ ಸರಿ ನಾನ್‌ ಮಾತ್ರ ಈ ಜಾಗ ಬಿಡಂಗಿಲ್ಲ" ಎಂದು ಆದಿವಾಸಿ ಮಹಿಳೆ ಜಾನಕಮ್ಮನ ಆಕ್ರೋಶದ ಮಾತುಗಳಿವು.

"ಬೆಂಗಳೂರು, ಮೈಸೂರು, ಹುಣಸೂರು, ಪಿರಿಯಾಪಟ್ಟಣ, ಪಂಚಳ್ಳಿ ಗ್ರಾಮ ಪಂಚಾಯ್ತಿ ಎಲ್ಲ ಆಗಿ ಈಗ ನಾವ್‌ ಇಲ್ಲಿ ಧರಣಿ ಕೂತಿದ್ದೀವಿ. ನಾವು ಕಾಡಿನ ಜನ ಆದ್ರೆ ಇವ್ರು ನಮ್ಮ ಗುಡಿಸಲನ್ನ ಆನೆ ಕೈಲಿ ತಳ್ಸಿ ಬೆಂಕಿ ಹಾಕಿ ಹೊರ್ಗೆ ಹಾಕಿದ್ರು, ಮಕ್ಳು ಮರಿಗೆಲ್ಲ ಹಿಂಸೆ ಕೊಟ್ರು. ಎಲ್ಲೊ ತೋರ್ಸಿದ ಜಾಗದಲ್ಲಿ ಗುಡಿಸಲಾಕಿದೀವಿ. ಅದಿಕ್ಕೆ ನಮ್ಗೆ ಅಂತ ವಸಿ ಜಾಗ ಕೊಡಿ, ಕೂಲಿ ಗಿಲಿ ಮಾಡಿ ಮಕ್ಳು ಸಾಕಂತಿವಿ ಅಂತಿದ್ದೀವಿ. ಗೌಡ್ರುಗಳೆಲ್ಲ 10 ಎಕ್ರೆ, 50 ಎಕ್ರೆ ಮಾಡ್ಕಂಡವ್ರೆ, ನಮ್ಗೆ ಈ ಹುಷಾರ್‌ ಮೊದ್ಲೆ ಇದ್ದಿದ್ರೆ ನಾವೂ ನೂರ್‌ ಎಕ್ರೆ ಜಾಗ ಮಾಡ್ತಿದ್ವಿ. ನಮ್ನ ಓಡಿಸಿಬಿಟ್ರು. ಕಾಡು ನಮ್ಮಜ್ಜ, ತಾತ ತೋರ್ಸಿದ ಸೊತ್ತು, ನಾವ್‌ ಸಾಯ್ತಿವಿ, ಆದ್ರೆ ನಮ್ಮ್‌ ಹೊಟ್ಟೆಲೀ ಹುಟ್ಟಿದ್ದ ಮಕ್ಳಾದ್ರೂ ಚಂದಾಗಿ ಬದುಕ್ಲಿ, ನೋಡಿ ಸಾಯ್ತೀವಿ, ನಮ್ಗೆ ಇಷ್ಟು ಜಾಗ ಕೊಡಿ ಅಂತ ಧರಣಿ ಮಾಡಿ ಕೇಳ್ತಿದೀವಿ. ನಮ್ನ ನಾಯಿಗಿಂತ ಕೀಳಾಗಿ ಕಾಣ್ತವ್ರೆ, ಈ ಸಲ ಸುಮ್ನೆ ಇರಲ್ಲ. ಜಾಗ ಕೊಡ್ಲಿಲ್ಲಾಂದ್ರೆ ಕತ್ತಿ ತಗಂಡು ಕಾಡಿಗೆ ಹೋಗ್ತಿವಿ, ಅಲ್ಲೇ ಗುಡಿಸಲಾಕ್ತಿವೀ..." ಇವು ಆದಿವಾಸಿ ಮಹಿಳೆ ಕಮಲಮ್ಮನ ಆಕ್ರೋಶದ ನುಡಿಗಳು.

ಅರಣ್ಯ ಹಕ್ಕು ಕಾಯ್ದೆಯಡಿ ಈಗಾಗಲೇ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಿ ಆದಿವಾಸಿಗಳಿಗೆ ಪುನರ್ವಸತಿ ಕಲಿಸಬೇಕೆಂದು ಆಗ್ರಹಿಸಿ ಪಿರಿಯಾಪಟ್ಟಣ ತಾಲೂಕಿನ ಆದಿವಾಸಿ ಕುಟುಂಬಗಳು ಪ್ರತಿಭಟನೆ ಮಾಡುತ್ತಿದ್ದು, ಹೋರಾಟ 4ನೇ ದಿನಕ್ಕೆ ಕಾಲಿಟ್ಟಿದೆ.

ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ, ನಮಗಾಗಿರುವ ಅನ್ಯಾಯ ಸರಿಪಡಿಸಿ ಎಂದು ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದಿಂದ ತಾಲೂಕಿನ ಬೋರನಕಟ್ಟೆ, ಉತ್ತೇನಹಳ್ಳಿ, ಮಾಲಂಗಿ ಗೋಮಾಳ, ಹೊಸೂರು, ಕರಮಾಳ, ಚೌಕೂರು ಹಾಡಿಯ 200ಕ್ಕೂ ಹೆಚ್ಚು ಗಿರಿಜನ ಹಾಡಿಗಳ ನಿವಾಸಿಗಳು ಪಂಚವಟಿ-ಗೋಣಿಕೊಪ್ಪ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

Image

ಈ ಬಗ್ಗೆ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಅಧ್ಯಕ್ಷ ಶೈಲೇಂದ್ರ ಈ ದಿನ.ಕಾಮ್‌ನೊಂದಿಗೆ ಮಾತನಾಡಿದ್ದಾರೆ.

"2005ಕ್ಕಿಂತ ಮುಂಚೆ ಕಾಡಿನಿಂದ ನಿಯಮಬಾಹಿರವಾಗಿ ಆಚೆ ತಳ್ಳಲ್ಪಟ್ಟವರಿಗೆ ಪುನರ್ವಸತಿ ಕಲ್ಪಿಸಬೇಕೆಂಬ ನಿಯಮವಿದೆ. ಆದರೆ ಅಧಿಕಾರಿ, ಜನಪ್ರತಿನಿಧಿಗಳು ಆ ನಿಯಮ ಕುರಿತು ಮಾತನಾಡುವುದಿಲ್ಲ. ಮೂಲ ನಿವಾಸಿಗಳು ಎಂಬುದಕ್ಕೆ ದಾಖಲೆ ನೀಡಿ ಎನ್ನುತ್ತಿದ್ದಾರೆ. ಆದರೆ ಮುಗ್ಧ ಆದಿವಾಸಿಗಳಿಗೆ ವಸತಿ, ಕೃಷಿ ಭೂಮಿ ಕೊಡುವುದಾಗಿ ಆಮಿಷವೊಡ್ಡಿ ಒಕ್ಕಲೆಬ್ಬಿಸಲಾಗಿದೆ" ಎಂದು ಆದಿವಾಸಿಗಳಿಗೆ ಆಗಿರುವ ಅನ್ಯಾಯದ ಬಗ್ಗೆ ವಿವರಿಸಿದರು.

"ಮೌಖಿಕವಾಗಿ ಹೇಳಿರುವುದರಿಂದ ಅದನ್ನು ಸಾಬೀತು ಮಾಡಲು ಆದಿವಾಸಿಗಳ ಬಳಿ ದಾಖಲೆಗಳಿಲ್ಲ. ಹಾಗಾಗಿ ಐತಿಹಾಸಿಕವಾಗಿ ಸ್ಥಳಾಂತರ ಮಾಡದ ಆದಿವಾಸಿಗಳಿಗೆ ನ್ಯಾಯ ಎಂಬ ಪ್ರೊ. ಮುಝಫ್ಫರ್‌ ಅಸ್ಸಾದಿ ಅವರು ಬರೆದಿರುವ ದಾಖಲೆಯನ್ನು ಪರಿಗಣಿಸಿ ನೈಸರ್ಗಿಕವಾಗಿ ನ್ಯಾಯ ಕೊಡುವಂತೆ ಕೇಳುತ್ತಿದ್ದೇವೆ. ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಕಾಡಿನಲ್ಲಿ ಭೂಮಿ ಹಕ್ಕು ನೀಡಲಾಗದಿದ್ದರೆ ಪರ್ಯಾಯ ಭೂಮಿ ಕೊಡಲು ಅವಕಾಶವಿದೆ. ಆದರೆ ಕಾನೂನಿನಲ್ಲಿರುವ ಎಲ್ಲ ಅವಕಾಶಗಳನ್ನು ತಿರುಚುತ್ತಿದ್ದಾರೆ. 16 ವರ್ಷದಿಂದ ನಿರಂತರ ಹೋರಾಟ ಮಾಡುತ್ತಾ ಬಂದಿರುವ ನಮಗೆ ನ್ಯಾಯ ನೀಡದಿದ್ದಲ್ಲಿ ಕಾಡಿಗೆ ತೆರಳಿ ಗುಡಿಸಲು ನಿರ್ಮಿಸುವುದು ಶತಸಿದ್ಧ" ಎಂದು ಶೈಲೇಂದ್ರ ಎಚ್ಚರಿಕೆ ನೀಡಿದರು.

ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಅಶೋಕ್‌ ಕುಂದಾಪುರ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, "2008 ವನ್ಯಜೀವಿ ಕಾಯ್ದೆ ಬಂದಾಗ ಕಾಡಿನ ಮೂಲ ನಿವಾಸಿಗಳ ಗುಡಿಸಲುಗಳನ್ನು ನಾಶಪಡಿಸಿ, ಬಲವಂತವಾಗಿ ಹೊರಹಾಕಿದರು. ಈಗ ಅವರ ಜೀವನ ನಿರ್ವಹಣೆಗೆ ತುಂಬಾ ಕಷ್ಟಪಡುತ್ತಿದ್ದಾರೆ. ಕಾಡಿನೊಳಗೆ ಹೋಗುವ ಅವಕಾಶವಿಲ್ಲ, ಹೊರಗೆ ಭೂಮಿ ಹಕ್ಕು, ವಸತಿ ಸೌಲಭ್ಯ ಇಲ್ಲ. ರಸ್ತೆಬದಿಯಲ್ಲೇ ಟೆಂಟ್‌ ಹಾಕಿ, ಕೂಲಿ ಮಾಡಿದರಷ್ಟೇ ಊಟ ಎಂಬ ಶೋಚನೀಯ ಸ್ಥಿತಿಯಲ್ಲಿದ್ದಾರೆ" ಎಂದು ಹೋರಾಟ ನಿರತ ಆದಿವಾಸಿಗಳ ಸ್ಥಿತಿಗತಿಯನ್ನು ವಿವರಿಸಿದರು.

"ಪಿರಿಯಾಪಟ್ಟಣದ 19 ಹಾಡಿ ಜನರಿಗೆ ಹೋರಾಟ ಮಾಡಿದ್ದರಿಂದ ಸಮುದಾಯದ ಹಕ್ಕು ಪತ್ರವನ್ನಷ್ಟೇ ನೀಡಿದ್ದಾರೆ. ಅಂದರೆ, ಕಾಡಿನ ಒಳಗೆ ಜೇನು, ಮೇಣ ಸಂಗ್ರಹ, ಸಾಂಸ್ಕೃತಿಕ ಆಚರಣೆ ಹಕ್ಕು ಹಾಗೂ ಅಭಿವೃದ್ಧಿ ಸೌಲಭ್ಯಗಳ ಹಕ್ಕೆಂದು ನೀಡಿರುವುದು. ವೈಯಕ್ತಿಕ ಅರಣ್ಯ ಹಕ್ಕು ಪತ್ರ ಕೊಡಲು ಮೀನಾಮೇಷ ನೋಡ್ತಿದ್ದಾರೆ. ನೀವು ಕಾಡಲ್ಲಿ ಇಲ್ಲ. ಹಾಗಾಗಿ ಹಕ್ಕುಪತ್ರ ಸಾಧ್ಯವಿಲ್ಲವೆಂಬ ಕಾರಣ ನೀಡಿ ವಂಚಿಸುತ್ತಿದ್ದಾರೆ" ಎಂದವರು ಆರೋಪಿಸಿದರು.

 

ನಿಮಗೆ ಏನು ಅನ್ನಿಸ್ತು?
2 ವೋಟ್