'ನಿಸರ್ಗ ಪ್ರಿಯ' ಖ್ಯಾತಿಯ ನಾಟಕಕಾರ, ನಾಟಕ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಬಿ ಸಿದ್ಧಗಂಗಯ್ಯ ಕಂಬಾಳು ಇನ್ನಿಲ್ಲ

b-siddagangayya-kambalu

'ನಿಸರ್ಗ ಪ್ರಿಯ' ಕಾವ್ಯನಾಮದ ನಾಟಕಕಾರ, ಕಾದಂಬರಿಕಾರ, ಸಂಶೋಧಕ, ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಬಿ ಸಿದ್ಧಗಂಗಯ್ಯ ಕಂಬಾಳು ಅವರು ಶುಕ್ರವಾರ ನಿಧನರಾಗಿದ್ದಾರೆ.

ಸಾಹಿತ್ಯ, ನಾಟಕ ರಂಗಭೂಮಿ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರಿಯರನ್ನಾಗಿ ತೊಡಗಿಸಿಕೊಂಡಿದ್ದವರು ಬಿ. ಸಿದ್ಧಲಿಂಗಯ್ಯ ಕಂಬಾಳು, ಬೆಂಗಳೂರು ಗ್ರಾಮಾಂತರದ ಕಂಬಾಳು ಗ್ರಾಮದಲ್ಲಿ ಜನಿಸಿದವರು. ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ. ನಂತರ ಕೆಲ ವರ್ಷ ಗುಜ ಕಂಪನಿಯಲ್ಲಿ ಅಭಿನಯಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ನಾಟಕ ರಚನೆ ಪ್ರಾರಂಭಿಸಿದರು. ಕಾದಂಬರಿ, ಮಹಾಕಾವ್ಯ, ಜನಪದ ಗ್ರಂಥ ಸಂಪಾದನೆ, ಸಂಶೋಧನೆ(ಇತಿಹಾಸ) ಮುಂತಾದ ಪ್ರಕಾರಗಳಲ್ಲಿ ರಚನೆ ಮಾಡಿದ್ದರು.

ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾಗಿ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ, ನಾಟಕ ಅಕಾಡೆಮಿಯ ರಿಜಿಸ್ಟಾರ್ ಮುಂತಾಗಿ ಗೌರವಯುತ ಹುದ್ದೆಗಳನ್ನು ಅಲಂಕರಿಸಿ ಕಾರ್ಯ ನಿರ್ವಹಣೆ ಮಾಡಿದವರು.

ಬೆನಕನಕೆರೆ, ಸ್ವರ್ಗಸ್ಥ ('ಸ್ವರ್ಗಸ್ಥ' ಕೃತಿಗೆ ರಾಜ್ಯ ಸಾಹಿತಿ ಅಕಾಡೆಮಿಯ ಬಹುಮಾನ ಲಭಿಸಿದೆ), ವ್ಯವಸ್ಥೆ, ಯಶೋಧರ, ತಿರುಕರಾಜ, ರುರ್ದ ಚೋರಪುರಾಣ (ಪ್ರಹಸನ ಕರ್ನಾಟಕ ನಾಟಕ ಅಕಾಡೆಮಿ ಏರ್ಪಡಿಸಿದ್ದ ನಾಟಕ ರಚನಾ ಸ್ಪರ್ಧೆ ಬಹುಮಾನ) ಮುಂತಾದ ಕೃತಿಗಳನ್ನು ರಚಿಸಿರುವ ಇವರಿಗೆ ಕಂಬಾಳರು ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ನಾಟಕ ಅಕಾಡೆಮಿಗಳಿಂದ ಪುರಸ್ಕೃತರಾಗಿದ್ದರು.

Image
B.Siddhagangaiah Kambalu

ತೊಂಭತ್ತರ ದಶಕದಲ್ಲಿ (1990) ಬೆಂಗಳೂರು ದೂರದರ್ಶನದಿಂದ ಪ್ರತಿ ಶನಿವಾರ ಪ್ರಸಾರವಾಗುತ್ತಿದ್ದ 'ಸಿರಿಗಂಧ' ಜಾನಪದ ಚಿತ್ರಮಾಲಿಕೆಗೆ ಸಂಶೋಧನಾ ಸಾಹಿತ್ಯ ಹಾಗೂ ನಿರೂಪಣಾ ಸಾಹಿತ್ಯ ರಚಿಸಿದ್ದ ಇವರು ಕನ್ನಡ ಚಿತ್ರ ನಿರ್ದೇಶಕರ ಒತ್ತಾಸೆಯ ಮೇರೆಗೆ, 'ಅಲ್ಲಮ', 'ರಾಮಾ ರಾಮಾ ರೇ' ಚಲನಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು. ರಾಮಾ ರಾಮಾ ರೇ... ಚಿತ್ರಕ್ಕಾಗಿ 'ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ ಸಂದಿದ್ದು ಇವರ ನವಿರು ಸಾಹಿತ್ಯಕ ಘಮಲಿಗೆ ಸಾಕ್ಷಿಯಾಗಿತ್ತು.

ನಾಟಕಕಾರ, ಕಾದಂಬರಿಕಾರರಾಗಿ, ಸಂಶೋಧಕರಾಗಿ, ಭಾಷಾಂತರಕಾರರಾಗಿ, ಜನಪದ ಹಾಗೂ ಜನಾಂಗೀಯ ಅಧ್ಯಯನಕಾರ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ಹಿರಿಮೆ ಇವರದು. ತಮ್ಮ ಜೀವನರಂಗದ ಪರದೆ ಎಳೆದು ನೇಪತ್ಯ ಸೇರಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್