
- ʼಗುಂಬಜ್ ಕೆಡವಲು ಅವನ್ಯಾವನ್ರೀ. ಸಂಸದನಾಗಿ ಸಾಮಾನ್ಯ ಜ್ಞಾನ ಬೇಡವೇ?ʼ
- ʼಶಿವಕುಮಾರ್, ನಾನು ಪ್ರತ್ಯೇಕ ತಂಡವಾಗಿ ರಾಜ್ಯಾದ್ಯಂತ ಚುನಾವಣೆ ಪ್ರಚಾರʼ
"ಮುಂಬರುವ ಚುನಾವಣೆಯಲ್ಲಿ ಹಿಂದೂ ಮತಗಳ ಕ್ರೋಡೀಕರಣಕ್ಕಾಗಿ ಸಂಸದ ಪ್ರತಾಪ ಸಿಂಹ ಅಶಾಂತಿ ಉಂಟು ಮಾಡುವ ಹೇಳಿಕೆ ನೀಡುತ್ತಿದ್ದಾನೆ" ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.
ಮೈಸೂರು ನಗರದ ಬಸ್ ನಿಲ್ದಾಣದ ಮೇಲಿನ ಗುಂಬಜ್ ಕೆಡುವುದಾಗಿ ಪ್ರತಾಪ ಸಿಂಹ ನೀಡಿರುವ ಹೇಳಿಕೆ ವಿಚಾರವಾಗಿ ಮಂಗಳವಾರ ಅವರು ಪ್ರತಿಕ್ರಿಯಿಸಿ, “ಗುಂಬಜ್ ಕೆಡವಲು ಅವನ್ಯಾವನ್ರೀ. ಸಂಸದನಾಗಿ ಸಾಮಾನ್ಯ ಜ್ಞಾನ ಬೇಡವೇ. ಅವರ ಮನೆ ದುಡ್ಡು ಹಾಕಿ ನಿಲ್ದಾಣ ಕಟ್ಟಿಸಿದ್ದಾನಾ? ಅಧಿಕಾರಿಗಳು ವಿನ್ಯಾಸ ಕೊಟ್ವಾಗ ಏನು ಮಾಡುತ್ತಿದ್ದರು?” ಎಂದು ಟೀಕಿಸಿದರು.
“ವಿನ್ಯಾಸ ಹೀಗೆಯೇ ಇರಬೇಕು ಎಂಬ ನಿಯಮ ಎಲ್ಲಿದೆ? ಗುಂಬಜ್ ರೀತಿ ಇರುವುದನ್ನೆಲ್ಲ ಒಡೆಯುತ್ತೀರಾ? ಬಿಜೆಪಿಯ ಈ ಕುತಂತ್ರ ವರ್ಕ್ ಆಗುವುದಿಲ್ಲ. ದೇಶದ ಜನರು ಜ್ಯಾತ್ಯತೀತರು. ಜಾತಿ–ಧರ್ಮದ ವಿಚಾರ ಒಪ್ಪುವುದಿಲ್ಲ. ಮೊಘಲರು ನಮ್ಮ ದೇಶ ಆಳುತ್ತಿದ್ದಾಗ ಇವರೆಲ್ಲ ಎಲ್ಲಿದ್ದರು? ಎಂದು ಜರಿದರು.
ಬಲವಂತದ ಮತಾಂತರಕ್ಕೆ ನನ್ನ ವಿರೋಧ
“ಯಾರು ಯಾವ ಧರ್ಮ ಬೇಕಾದರೂ ಅನುಸರಿಸಬಹುದು. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಪರವಾಗಿದ್ದೇವೆ. ಬಲವಂತದ ಮತಾಂತರಕ್ಕೆ ನನ್ನ ವಿರೋಧವಿದೆ” ಎಂದರು.
ಬಸ್ ಯಾತ್ರೆಗೆ ದಿನಾಂಕ ನಿಗದಿಯಾಗಿಲ್ಲ
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದಿಂದ ಕೈಗೊಳ್ಳಲಿರುವ ಬಸ್ ಯಾತ್ರೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಪೂರ್ಣಪ್ರಮಾಣದಲ್ಲಿ ಬಸ್ ತಯಾರಾಗುತ್ತಿದ್ದು, ಕೋಲಾರಕ್ಕೆ ಹೋಗಿ ಬಸ್ ಪರೀಕ್ಷೆ ನಡೆಸಿದ್ದೇನೆ. ಡಿ.ಕೆ.ಶಿವಕುಮಾರ್ ಮತ್ತು ನಾನು ಒಂದೊಂದು ತಂಡವಾಗಿ ರಾಜ್ಯಾದ್ಯಂತ ಪ್ರಚಾರ ಮಾಡುತ್ತೇವೆ’ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ
ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ ಮಾಡಲಿದ್ದೇವೆ” ಎಂದು ತಿಳಿಸಿದರು.