ಕಬ್ಬು ದರ ನಿಗದಿ | ಕೇಂದ್ರ-ರಾಜ್ಯ ಸರ್ಕಾರಗಳ ಶವಯಾತ್ರೆ; ಪ್ರತಿಭಟನಾಕಾರರು ಪೊಲೀಸ್‌ ವಶಕ್ಕೆ

ಕೇಂದ್ರ-ರಾಜ್ಯ ಸರ್ಕಾರಗಳ ಶವಯಾತ್ರೆ
  • ಸ್ವಾಮಿನಾಥನ್ ವರದಿ ಜಾರಿಗೆ ಕಬ್ಬು ಬೆಳೆಗಾರರ ಆಗ್ರಹ
  • ಅಣಕು ಶವಯಾತ್ರೆ; ಧರಣಿನಿರತ ಕಬ್ಬು ಬೆಳೆಗಾರರು ವಶಕ್ಕೆ

ಕಬ್ಬು ದರ ನಿಗದಿಗೆ ಆಗ್ರಹಿಸಿ ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು ಶನಿವಾರ ಸರ್ಕಾರದ ಅಣಕು ಶವಯಾತ್ರೆ ನಡೆಸಿದರು. ಈ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಶನಿವಾರ ರೈತರು, ಕೇಂದ್ರ-ರಾಜ್ಯ ಸರ್ಕಾರಗಳ ಅಣಕು ಶವಯಾತ್ರೆ ನಡೆಸಿದರು. 

Eedina App

"ಕಳೆದ ಹಲವು ತಿಂಗಳುಗಳಿಂದ ರಾಜ್ಯದ ಹಲವೆಡೆ ಕಬ್ಬು ಬೆಳೆಗಾರರು ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಬೇಸತ್ತು ಕಬ್ಬು ಬೆಳೆಗಾರರ ಸಂಘ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದು, ಸರ್ಕಾರದ ಯಾವುದೇ ಸಚಿವರು ರೈತರ ಸಂಕಷ್ಟ ಕೇಳಲು ಬಂದಿಲ್ಲ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಅಣಕು ಶವಯಾತ್ರೆ ನಡೆಸಿದ್ದೇವೆ" ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಕುರುಬೂರು ಶಾಂತಕುಮಾರ್‌, "ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಕೃಷಿ ಕ್ಷೇತ್ರದಿಂದ ಒಕ್ಕಲೆಬ್ಬಿಸಲು, ಮುಂದಾಗಿವೆ. ದೆಹಲಿ ರೈತರ ಯಶಸ್ವಿ ಹೋರಾಟಕ್ಕೆ ತಲೆಬಾಗಿದ ಪ್ರಧಾನಿ ಮೋದಿ ಅವರು ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಿ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಶಾಸನ ರೂಪಿಸುತ್ತೇವೆಂದು ಕಳೆದ ವರ್ಷ ಲಿಖಿತ ಭರವಸೆ ನೀಡಿದ್ದರು. ಆದರೆ ಅದು ಪತ್ರಕ್ಕೆ ಸೀಮಿತವಾಗಿದ್ದು, ಇದುವರೆಗೂ ಸ್ವಾಮಿನಾಥನ್ ವರದಿ ಜಾರಿಯಾಗಿಲ್ಲ. ರೈತರ ಆದಾಯ ದ್ವಿಗುಣ ಭರವಸೆ ಈಡೇರಿಸಿಲ್ಲ, ಕೃಷಿ ಉತ್ಪನ್ನಗಳಿಗೆ ಜಿಎಸ್‌ಟಿ ತೆರಿಗೆ ಹಾಕಿ ಮತ್ತಷ್ಟು ಹೊರೆ ಮಾಡಿದ್ದಾರೆ" ಎಂದು ಆರೋಪಿಸಿದ್ದಾರೆ.

AV Eye Hospital ad

ಈ ಸುದ್ದಿ ಓದಿದ್ದೀರಾ? ದೆಹಲಿ ರೈತ ಹೋರಾಟ | ಎರಡನೇ ವರ್ಷದ ನೆನಪಿನಲ್ಲಿ ರೈತ ಚಳವಳಿಯಿಂದ ಕಲಿಯಬೇಕಾದ ಪಾಠಗಳು

"ಅಣಕು ಶವಯಾತ್ರೆಗೆ ಅನುಮತಿ ನೀಡಿಲ್ಲ ಎಂದು ಪೊಲೀಸರು ಹೋರಾಟಕ್ಕೆ ಅಡ್ಡಿ ಮಾಡಿದರು. ಅಂತಿಮವಾಗಿ ನಿಜ ರೈತರನ್ನೇ ಶವದ ರೀತಿ ಮಲಗಿಸಿ ಮೆರವಣಿಗೆ ಮಾಡಲು ಮುಂದಾಗಿದ್ದಕ್ಕೆ ದಬ್ಬಾಳಿಕೆ ನಡೆಸಿ ಬಂಧಿಸುತ್ತಿದ್ದಾರೆ. ಸರ್ಕಾರ ಪೊಲೀಸ್ ಬಲದ ಮೂಲಕ ಹೋರಾಟಗಾರರ ಹಕ್ಕನ್ನು ದಮನಗೊಳಿಸಲು ಮುಂದಾಗಿದೆ. ಅತ್ತ ರೈತರ ಹಿತ ಕಾಯಲು ಸಕ್ಕರೆ ಕಾರ್ಖಾನೆ ಮಾಲೀಕರನ್ನು ಮಣಿಸುವ ಬದಲು ಚುನಾವಣಾ ಉಡುಗೊರೆಗಾಗಿ ರೈತರನ್ನು ಶೋಷಿಸಲು ಅವಕಾಶ ನೀಡಲಾಗಿದೆ. ರೈತರು ಇನ್ನೂ ಸುಮ್ಮನಿದ್ದರೆ ಬೀದಿಗೆ ತಳ್ಳುತ್ತಾರೆ. ಧರಣಿ ಕುಳಿತಿರುವ ರೈತರ ಸಮಸ್ಯೆ ಬಗೆಯರಿಸದೆ ಬಗ್ಗು ಬಡಿಯುವ ವಾಮ ಮಾರ್ಗ ಅನುಸರಿಸುತ್ತಿರುವುದು ಖಂಡನೀಯ. ರೈತರು ಕುಗ್ಗಬಾರದು, ಉಗ್ರ ಹೋರಾಟಕ್ಕೆ ಅಣಿಯಾಗಬೇಕು" ರೈತರಿಗೆ ಕರೆ ನೀಡಿದರು. 

ಈ ವೇಳೆ ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯಧ್ಯಕ್ಷ ವೀರನಗೌಡ ಪಾಟೀಲ್, ರಾಜ್ಯ ಉಪಾಧ್ಯಕ್ಷ ಸುರೇಶ್ ಮಾ ಪಾಟೀಲ್, ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಪಿ ಸೋಮಶೇಖರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಬರಡನಪುರ ನಾಗರಾಜ್, ಮಹದೇವಸ್ವಾಮಿ,
ಗೋವಿಂದರಾಜು ಸೇರಿದಂತೆ ಹಲವರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app