
- ಕಬ್ಬು ಬೆಳೆಗೆ ₹500 ಪ್ರೋತ್ಸಾಹ ಧನ ಕೊಡುವಂತೆ ಶಾಸಕರಿಂದ ಸಿಎಂ ಭೇಟಿ
- ರೈತರ ಸಂಕಷ್ಟ ವಿವರಿಸಿ ಕಬ್ಬಿಗೆ ಲಾಭದಾಯಕ ದರ ಕೊಡುವಂತೆ ಮನವಿ
ರೈತರು ಕಬ್ಬಿಗೆ ನ್ಯಾಯಯುತ ಹಾಗೂ ಲಾಭದಾಯಕ ದರ ಕೇಳುತ್ತಾ ರಾಜ್ಯದ ಹಲವೆಡೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕೆಂದು ಜನಪ್ರತಿನಿಧಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಮತ್ತು ಶಾಸಕ ಮಧು ಜಿ ಮಾದೇಗೌಡ ಶನಿವಾರ ಬೆಂಗಳೂರಿನಲ್ಲಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ರೈತರ ಕಬ್ಬು ಬೆಳೆಗೆ ₹500 ಪ್ರೋತ್ಸಾಹ ಧನ ಮತ್ತು ನ್ಯಾಯೋಚಿತ ದರ ನಿಗದಿ ಮಾಡಿ ಎಂದು ಕೇಳಿದ್ದಾರೆ.
"ರೈತರು ಬೆಳೆಯುವ ಕಬ್ಬಿನ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಯೂರಿಯಾ, ಕೂಲಿ, ಯಂತ್ರಗಳ ಬಾಡಿಗೆ, ಉತ್ಪಾದನಾ ವೆಚ್ಚ, ಕಟಾವು ಹಾಗೂ ಸಾಗಾಣಿಕೆ ಎಲ್ಲದರ ವೆಚ್ಚವೂ ಏರಿಕೆಯಾಗಿದೆ. ಹಾಗಾಗಿ ರೈತರಿಗೆ ಕಾರ್ಖಾನೆಗಳು ಕೊಡುತ್ತಿರುವ ದರ ಲಾಭದಾಯಕವಾಗಿಲ್ಲ. ಅಲ್ಲದೆ, ರಾಜ್ಯದಲ್ಲಿ ಕಬ್ಬು ಬೆಳೆಗೆ ನ್ಯಾಯಯುತ ದರ ನಿಗದಿಯಾಗಿಲ್ಲ ಹಾಗಾಗಿ ಅವರ ಬದುಕೇ ದುಸ್ತರವಾಗಿದೆ" ಎಂದು ಬೊಮ್ಮಾಯಿ ಅವರಿಗೆ ಶಾಸಕರು ಮನವರಿಕೆ ಮಾಡಿಕೊಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಬ್ಬು ಬೆಳೆಗೆ ದರ ನಿಗದಿ -2 | ಎಸ್ಎಪಿ, ಎಫ್ಆರ್ಪಿ ಎಂದರೇನು? ರೈತರಿಗೆ ಆಗುತ್ತಿರುವ ದ್ರೋಹವೇನು?
"ಸರ್ಕಾರ ದಸರಾ ಹಬ್ಬದ ಸಂದರ್ಭದಲ್ಲೇ ಕಬ್ಬು ಬೆಳೆಯುವ ರೈತರ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳ ಸಭೆ ಕರೆಯುವುದಾಗಿ ಹೇಳಿದ್ದರೂ ಇದುವರೆಗೂ ಸಭೆ ನಡೆಸಿಲ್ಲ. ಹಲವೆಡೆ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಸರ್ಕಾರ ಎಚ್ಚೆತ್ತು ರೈತರ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಬೇಸತ್ತ ರೈತರು ಬೀದಿಗಿಳಿದರೆ ಕಾನೂನು ಸುವ್ಯವಸ್ಥೆ ಹದಗೆಡುವ, ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುವ ಹಾಗೂ ಅನ್ನದಾತ ವ್ಯವಸಾಯದಿಂದ ವಿಮುಖರಾಗುವ ಆತಂಕವಿದೆ" ಎಂದು ಶಾಸಕರು ಎಚ್ಚರಿಸಿದ್ದಾರೆ.