ಪ್ರಧಾನಿ ಮೋದಿ ದೃಷ್ಟಿಯಲ್ಲಿ ಬಡವರ ಹೊಟ್ಟೆಗೆ ಒದೆಯುವುದೇ ʼಅಚ್ಛೇದಿನ್ʼ: ಸಿದ್ದರಾಮಯ್ಯ ಟೀಕೆ

Siddaramaiah
  • ʼ#GabbarSinghTaxʼ ಹ್ಯಾಷ್‌ಟ್ಯಾಗ್‌ ನಡಿ ಸರಣಿ ಟ್ವೀಟ್‌ ಮಾಡಿ, ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ
  • ತಮ್ಮದು ಸೂಟ್ ಬೂಟ್ ಸರ್ಕಾರ ಎನ್ನುವುದನ್ನು ಮತ್ತೆ ಮತ್ತೆ ಮೋದಿ ಸಾಬೀತುಪಡಿಸುತ್ತಿದ್ದಾರೆ: ಟೀಕೆ

ಬಡವರ ಹೊಟ್ಟೆಗೆ ಒದೆಯುವುದೇ ಅಚ್ಛೇದಿನ್ ಎಂದು ತಿಳಿದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಊಟದ ತಟ್ಟೆಯಲ್ಲಿನ ಅಕ್ಕಿ, ಗೋಧಿ, ಹಾಲು, ಮೊಸರು, ಮಜ್ಜಿಗೆ, ಮೀನು, ಮಾಂಸ, ಮಂಡಕ್ಕಿ ಎಲ್ಲವನ್ನೂ ಕಿತ್ತುಕೊಳ್ಳಲು ಹೊರಟಿರುವುದು ಬಡವರ ಹತ್ಯೆಗೆ ಸಮನಾದ ಪಾಪ ಕರ್ಮ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ʼ#GabbarSinghTaxʼ ಹ್ಯಾಷ್‌ಟ್ಯಾಗ್‌ ನಡಿ ಸೋಮವಾರ ಸರಣಿ ಟ್ವೀಟ್‌ ಮಾಡಿರುವ ಅವರು, “ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳದಿಂದ ತರಕಾರಿ ಮತ್ತಿತರ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ನಿರುದ್ಯೋಗದಿಂದಾಗಿ ಕುಟುಂಬದ ಆದಾಯ ಕುಸಿದಿದೆ. ಈ ಹೊತ್ತಿನಲ್ಲಿ ಬಡವರ ನೆರವಿಗೆ ಬರಬೇಕಾಗಿರುವ ಸರ್ಕಾರ ಅವರನ್ನು ಉಪವಾಸ ಬೀಳಿಸಿ ಸಾಯಿಸಲು ಹೊರಟಿದೆ. ಇಂತಹ ಕ್ರೌರ್ಯ ಫ್ಯಾಸಿಸ್ಟ್ ಮನಸ್ಸುಗಳಿಂದ ಮಾತ್ರ ಸಾಧ್ಯ” ಎಂದು ಕುಟುಕಿದ್ದಾರೆ.

“ಬ್ರ್ಯಾಂಡೆಡ್ ಅಲ್ಲದ ಪ್ಯಾಕ್ ಮಾಡಲಾಗಿರುವ ಅಕ್ಕಿ, ಗೋಧಿ, ಹಾಲು, ಮೊಸರು, ಮಜ್ಜಿಗೆಯಂತಹ ದಿನಬಳಕೆಯ ವಸ್ತುಗಳ ಮೇಲೆ ನರೇಂದ್ರ ಮೋದಿ ಸರ್ಕಾರ ಜಿಎಸ್‌ಟಿ ಹೇರಿರುವುದು ಬ್ರ್ಯಾಂಡೆಡ್ ವಸ್ತುಗಳ ಕಂಪೆನಿಗಳ ಒತ್ತಡಕ್ಕೆ ಮಣಿದಿದೆ ಎನ್ನುವುದು ಸ್ಪಷ್ಟ. ತಮ್ಮದು ಸೂಟ್ ಬೂಟ್ ಸರ್ಕಾರ ಎನ್ನುವುದನ್ನು ಮತ್ತೆ ಮತ್ತೆ ಅವರು ಸಾಬೀತುಪಡಿಸುತ್ತಿದ್ದಾರೆ” ಎಂದಿದ್ದಾರೆ.

“ತೆರಿಗೆ ವಂಚನೆ ಮಾಡಿ, ಬ್ಯಾಂಕ್ ಮುಳುಗಿಸಿ ಓಡಿಹೋಗಿರುವ ಮೋದಿ, ಮಲ್ಯಗಳು ವಿದೇಶದಲ್ಲಿ ಮಜಾ ಮಾಡುತ್ತಿದ್ದಾರೆ. ಅವರನ್ನು ಎಳೆದುಕೊಂಡು ಬಂದು, ವಂಚಿಸಿದ್ದ ತೆರಿಗೆ ಹಣವನ್ನು ಕಕ್ಕಿಸಲು ಆಗದ 56 ಇಂಚು ಎದೆಯಳತೆಯ ಮೋದಿ ಬಡವರ ಹೊಟ್ಟೆ ಬಗೆಯಲು ಹೊರಟಿರುವುದು ದುರಂತ” ಎಂದು ಹೇಳಿದ್ದಾರೆ.

“ಕೇಂದ್ರ ಸರ್ಕಾರದ ಈ ‘ತೆರಿಗೆ ಭಯೋತ್ಪಾದನೆಗೆ ಬಲಿಯಾಗಿರುವುದು ವಿರೋಧಪಕ್ಷಗಳ ಮತದಾರರು ಮಾತ್ರವಲ್ಲ, ಅಚ್ಛೇದಿನಗಳ ನಿರೀಕ್ಷೆಯಿಟ್ಟುಕೊಂಡು ಬಿಜೆಪಿಯನ್ನು ಗೆಲ್ಲಿಸಿದ್ದ ಬಿಜೆಪಿಯ ಮತದಾರರಿಗೂ ಇದರಲ್ಲಿ ರಿಯಾಯಿತಿ-ವಿನಾಯಿತಿ ಏನಿಲ್ಲ. ಅವರು ಕೂಡಾ ಇದಕ್ಕೆ ಬಲಿಯಾಗಿದ್ದಾರೆ. ಬಡತನ ಜಾತಿ, ಧರ್ಮ, ಪಕ್ಷಗಳೆಲ್ಲವನ್ನೂ ಮೀರಿದ್ದು” ಎಂದು ವಿವರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ; ಇದೇ ನನ್ನ ಕೊನೇ ಚುನಾವಣೆ: ಸಿದ್ದರಾಮಯ್ಯ

“ಬ್ರ್ಯಾಂಡ್ ಗಳ ಬೆನ್ನತ್ತಿ ಹೋಗುತ್ತಿರುವ ಉಳ್ಳವರು, ಶ್ರೀಮಂತರು ಖರೀದಿಸುವ ವಸ್ತುಗಳ ಮೇಲೆ ತೆರಿಗೆ ಹೇರಿಕೆಗೆ ಕನಿಷ್ಠ ಸಮರ್ಥನೆ ಇದೆ. ಆದರೆ ಗುಡಿಕೈಗಾರಿಕೆಗಳ ರೂಪದಲ್ಲಿ ಅಕ್ಕಿ, ಗೋಧಿ, ಹಾಲು, ಮೊಸರು ಮತ್ತಿತರ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡುತ್ತಿರುವ ಲಕ್ಷಾಂತರ ಕಿರು ಉದ್ಯಮಿಗಳಿಗೂ ಕೂಡಾ ಇದೊಂದು ದೊಡ್ಡ ಹೊಡೆತ” ಎಂದು ವಿಶ್ಲೇಷಿಸಿದ್ದಾರೆ. 

“ಕೇಂದ್ರ ಸರ್ಕಾರವು ಸಾವು-ಬದುಕಿನ ಪ್ರಶ್ನೆಯನ್ನು ದೇಶದ ಜನರ ಮುಂದಿಟ್ಟಿದೆ. ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಅನಾಚಾರಗಳನ್ನೆಲ್ಲ ಸಹಿಸಿಕೊಂಡು ಇನ್ನೂ ಅಚ್ಛೇದಿನಗಳ ಕನಸು ಕಂಡರೆ ಬದುಕಿನ ನಾಶ ಖಂಡಿತ. ಕಾಲ ಮಿರಿಹೋಗುತ್ತಿದೆ, ಎಚ್ಚೆತ್ತುಕೊಳ್ಳಲು ಇದು ಸಕಾಲ” ಎಂದು ಎಚ್ಚರಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್