ಪ್ರಧಾನಿ ಮೋದಿಗೆ ನೆಲದ ಕಾನೂನಿನ ಅರಿವಿಲ್ಲ: ಮಾಜಿ ಸಂಸದ ವಿ ಎಸ್ ಉಗ್ರಪ್ಪ ಕಿಡಿ

V S Ugrappa
  • ಹೈಕೋರ್ಟ್ ವಜಾಗೋಳಿಸಿದ ಪ್ರಕರಣವನ್ನು ಇಡಿ ಹೇಗೆ ತನಿಖೆ ನಡೆಸುತ್ತದೆ: ಪ್ರಶ್ನೆ
  • ಬಿಜೆಪಿ ಕಾಂಗ್ರೆಸ್‌ ಬಗ್ಗೆ ಭಯದಿಂದ ಸೇಡಿನ ರಾಜಕಾರಣ ಮಾಡುತ್ತಿದೆ: ಆರೋಪ

ನೆಲದ ಕಾನೂನು ಮತ್ತು ಅದರ ವಿಧಿ ವಿಧಾನಗಳು, ದೇಶದ ಸಂವಿಧಾನ ಹಾಗೂ ಸ್ವಾತಂತ್ರ್ಯ ಚಳವಳಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರಿವಿದ್ದಿದ್ದರೆ, ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜೊತೆಗೆ ಕಾಂಗ್ರೆಸ್ ನಾಯಕರ ಮೇಲೆ ಸೇಡಿನ ರಾಜಕಾರಣ ಮಾಡುತ್ತಿರಲಿಲ್ಲ ಎಂದು ಮಾಜಿ ಸಂಸದ ವಿ ಎಸ್ ಉಗಪ್ಪ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಖುಲಾಸೆಯಾದ ಪ್ರಕರಣವನ್ನು ಮತ್ತೆ ಆರಂಭಿಸಿದ್ದಾರೆ. ದೆಹಲಿ ಹೈಕೋರ್ಟ್ ವಜಾಗೊಳಿಸಿದ ಪ್ರಕರಣವನ್ನು ಇಡಿ ಅವರು ಹೇಗೆ ಪ್ರಕರಣ ನಡೆಸುತ್ತಿದ್ದಾರೆ? ಇದು ರಾಜಕೀಯ ಷಢ್ಯಂತ್ರವಲ್ಲದೇ ಮತ್ತೇನು,” ಎಂದು ಪ್ರಶ್ನಿಸಿದರು.

“2014ರಲ್ಲಿ ಮೋದಿ ಅವರು ಪ್ರಧಾನಿಯಾದ ನಂತರ ಇದೇ ಸುಬ್ರಮಣಿಯನ್ ಸ್ವಾಮಿ ಅವರು ಈ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಯಿಂದ ತನಿಖೆ ಮಾಡಿಸಲು ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆಯುತ್ತಾರೆ. ನಂತರ ಸುಪ್ರೀಂಕೋರ್ಟ್ ಮೆಟ್ಟಿಲೇರಿದಾಗ ಇದು ಕಾನೂನು ಚೌಕಟ್ಟಿನಲ್ಲಿ ಇತ್ಯರ್ಥವಾಗಲಿ ಎಂದು ಹೇಳಿದಾಗ 2015ರಲ್ಲಿ ಪ್ರಕರಣ ಖುಲಾಸೆಯಾಗುತ್ತದೆ,” ಎಂದು ವಿವರಿಸಿದರು.

“ಯಂಗ್ ಇಂಡಿಯಾ ಸಂಸ್ಥೆ ಚಾರಿಟಬಲ್ ಹಾಗೂ ಆದಾಯೇತರ ಸಂಸ್ಥೆಯಾಗಿದೆ. ಈ ಆಸ್ತಿ ವರ್ಗಾವಣೆಯಾದ ನಂತರ ಒಂದಿಂಚು ಜಮೀನು ಅಥವಾ ಆಸ್ತಿಯನ್ನು ಯಾರಿಗೂ ಮಾರಾಟ ಮಾಡಿಲ್ಲ. ಅದರ ಹಣವನ್ನು ಯಾರೂ ಲಪಟಾಯಿಸಿಲ್ಲ. ಆದರೂ ಇಡಿಯವರು ಯಾಕೆ ವಿಚಾರಣೆ ಮಾಡಿ ಕಿರುಕುಳ ನೀಡುತ್ತಿದ್ದಾರೆ,” ಎಂದರು.

ಈ ಸುದ್ದಿ ಓದಿದ್ದೀರಾ? ಪ್ರಧಾನಿ ಮೋದಿ ಆಡುವುದೇ ಒಂದು, ಮಾಡುವುದೇ ಇನ್ನೊಂದು: ದಿನೇಶ್‌ ಗುಂಡೂರಾವ್‌ ಟೀಕೆ

ರಾಹುಲ್‌ ಬಗ್ಗೆ ಬಿಜೆಪಿಗೆ ಭಯ

“ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಇಡುತ್ತಿರುವ ರಾಹುಲ್ ಗಾಂಧಿ ಅವರ ಖ್ಯಾತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಭಯಭೀತರಾಗಿದ್ದು, ಈ ರೀತಿಯ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 40 ವರ್ಷಗಳಿಂದ ನಾನು ಕಾನೂನು ಅಭ್ಯಾಸ ಮಾಡುತ್ತಿದ್ದು, ನನ್ನ ಜೀವನದಲ್ಲಿ ನಾನು ಈ ರೀತಿ ಇಡಿಯವರು ಸಂಸದರೋಬ್ಬರನ್ನು ಕಿರುಕುಳ ನೀಡಲು ವಿಚಾರಣೆ ಮಾಡುತ್ತಿರುವುದನ್ನು ನೋಡಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“50 ಲಕ್ಷಕ್ಕೆ ನ್ಯಾಷನಲ್ ಹೆರಾಲ್ಡ್ ಆಸ್ತಿ ವರ್ಗಾವಣೆಯಾಗಿರುವುದು ಅಕ್ರಮವಾದರೆ, ಚಾಲುಕ್ಯ ವಿವಿಗೆ ರಾಜ್ಯ ಸರ್ಕಾರ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 116,16 ಎಕರೆ ಜಾಗವನ್ನು ಕಡಿಮೆ ಬೆಲೆಗೆ ನೀಡಿರುವುದು ಕೂಡ ಅಕ್ರಮವಾಗುತ್ತದೆ,” ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್