ಲೋಕಾಯುಕ್ತರ ನೇಮಕಾತಿಗೆ ಪ್ರಕ್ರಿಯೆ ಪೂರ್ಣ; ಶೀಘ್ರದಲ್ಲೇ ಘೋಷಿಸುತ್ತೇವೆ ಎಂದ ಸಿಎಂ ಬೊಮ್ಮಾಯಿ

Basavaraja Bommai
  • ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ; ಮೈವಿ ರವಿಶಂಕರ ಪರ ಮತಯಾಚನೆ
  • ಮೈಸೂರಿಗೆ ಪ್ರಧಾನಿ ಆಗಮನ; ಪೂರ್ವ ಸಿದ್ಧತಾ ಸಭೆ ನಡೆಸಿದ ಸಿಎಂ

ಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದ ಪ್ರಕ್ರಿಯೆಗಳು ಮುಗಿದು ಕೊನೆಯ ಹಂತದಲ್ಲಿದ್ದು, ಆದಷ್ಟು ಶೀಘ್ರದಲ್ಲೇ ಈ ಬಗ್ಗೆ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಾನಾ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಬುಧವಾರ ಬಂದಿಳಿದ ಬಳಿಕ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿ ಹೈಕೋರ್ಟ್ ‌ನೀಡಿರುವ ಸೂಚನೆಯಂತೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಯಾರಿಗೂ ಆಫರ್ ಕೊಟ್ಟಿಲ್ಲ. ಅಭ್ಯರ್ಥಿಗಳ ಗೆಲುವಿಗೆ ಬೇಕಾದಷ್ಟು ಮತಗಳು ನಮ್ಮ ಬಳಿ ಇವೆ. ಕಾಂಗ್ರೆಸ್ ಅಥವಾ ಜೆಡಿಎಸ್‌ ನಡುವೆ ಏನೋ ನಡೆದಿದೆ. ಆದರೆ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಪ್ರತಿಕ್ರಿಯಿಸಿದರು.

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾವೇರಿ ನೀರಾವರಿ ಪ್ರಾಧಿಕಾರದ ತೀರ್ಪು ಅಂತಿಮವಾಗಿದೆ.‌ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಪ್ರಾಧಿಕಾರ ರಚನೆ ಆಗಿರುವುದರಿಂದ ಮಧ್ಯಪ್ರವೇಶ ಮಾಡಲಾಗದು. ಏನೇ ನಿರ್ಧಾರವಿದ್ದರೂ ಪ್ರಾಧಿಕಾರವೇ ಮಾಡುತ್ತದೆ ಎಂದರು.

ಮೈಸೂರಿನಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ದಕ್ಷಿಣ ಪದವಿಧರರ ಮತಕ್ಷೇತ್ರದ ಮತದಾರರ ಸಭೆಯಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಭ್ಯರ್ಥಿ ಮೈವಿ ರವಿಶಂಕರ ಪರ ಮತ ಯಾಚಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್ ಎ ರಾಮದಾಸ್, ಎಲ್ ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ ಈ ವೇಳೆ ಉಪಸ್ಥಿತರಿದ್ದರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ಆಗಮನ ಹಿನ್ನೆಲೆ: ಬೆಂಗಳೂರಿನಲ್ಲಿ ಸಭೆ ನಡೆಸಿದ ಸಿಎಂ

ಮೈಸೂರಿನಲ್ಲಿ ಜೂನ್ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದು, ಮೈಸೂರು ಅರಮನೆ ಎದುರು 15 ಸಾವಿರ ಜನರು ಯೋಗ ಮಾಡಲಿದ್ದಾರೆ. ಈ ಕುರಿತು ಕೈಗೊಂಡಿರುವ ಪೂರ್ವ ಸಿದ್ಧತೆಗಳ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 15 ಸಾವಿರ ಯೋಗಪಟುಗಳ ಆಯ್ಕೆ ಪ್ರಕ್ರಿಯೆಯನ್ನು ಜೂನ್ 13ರೊಳಗೆ ಪೂರ್ಣಗೊಳಿಸುವಂತೆ ಮಂಗಳವಾರ ಸಂಜೆ ನಡೆದ ವಿಡಿಯೋ ಕಾನ್ಫರೆನ್ಸ್‌ ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಈ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಧಾನ ಮಂತ್ರಿಗಳ ಕಚೇರಿ ಸೂಚಿಸಿದಂತೆ ಸಮಾಜದ ಎಲ್ಲ ವರ್ಗಗಳ ಜನರನ್ನೂ ಸೇರ್ಪಡೆಗೊಳಿಸುವಂತೆ ತಿಳಿಸಿದರು.

ಯೋಗ ದಿನಾಚರಣೆಯಲ್ಲಿ ಭಾಗವಹಿಸುವವರಿಗೆ ಸಾರಿಗೆ ಸೌಲಭ್ಯ, ಲಘು ಉಪಾಹಾರ, ಕುಡಿಯುವ ನೀರು ಮತ್ತಿತರ ವ್ಯವಸ್ಥೆಗಳನ್ನು ಯಾವುದೇ ಲೋಪವಿಲ್ಲದಂತೆ ನಿರ್ವಹಿಸಬೇಕು. ಈ ಕುರಿತು ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ವಹಿಸುವಂತೆ ತಿಳಿಸಿದರು. ಇದರೊಂದಿಗೆ ಕೇಂದ್ರ ಆಯುಷ್ ಸಚಿವಾಲಯವು ಯೋಗಕ್ಕೆ ಸಂಬಂಧಿಸಿದಂತೆ ವಸ್ತು ಪ್ರದರ್ಶನವನ್ನು ಸಹ ಏರ್ಪಡಿಸಿದೆ. ಇದಕ್ಕೆ ಅಗತ್ಯ ಸಹಕಾರವನ್ನು ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಈ ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಕೋರ್ ಕಮಿಟಿ ಸೇರಿದಂತೆ ಒಟ್ಟು 14 ಸಮಿತಿಗಳನ್ನು ರಚಿಸಲಾಗಿದ್ದು, ಈ ಸಮಿತಿಗಳು ತಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಸೂಚಿಸಿದರು. ಪ್ರಧಾನಿಯವರ ಭೇಟಿ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಯಲ್ಲಿ ಲೋಪವಾಗದಂತೆ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶದ 75 ಪಾರಂಪರಿಕ ತಾಣಗಳಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದ 5 ತಾಣಗಳಾದ ಮೈಸೂರು, ಹಳೇಬೀಡು, ಹಂಪಿ, ಪಟ್ಟದಕಲ್ಲು ಹಾಗೂ ವಿಜಯಪುರದ ಗೋಲಗುಂಬಝ್‌ಗಳಲ್ಲಿ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಹಳೇಬೀಡಿನಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಹಂಪಿಯಲ್ಲಿ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ್ ಜೋಷಿ, ಪಟ್ಟದಕಲ್ಲಿನಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ವಿಜಯಪುರದ ಗೋಲಗುಂಬಝ್‌ನಲ್ಲಿ ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಪಾಲ್ಗೊಳ್ಳಲಿದ್ದಾರೆ. ಇದಲ್ಲದೆ ರಾಜ್ಯ ಮಟ್ಟದಲ್ಲಿ ರಾಜ್ಯದ 75 ಐತಿಹಾಸಿಕ ಸ್ಥಳಗಳಲ್ಲಿ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಸಚಿವ ಡಾ ಕೆ ಸುಧಾಕರ್, ಎಸ್ ಟಿ ಸೋಮಶೇಖರ್, ರೇಷ್ಮೆ, ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ ಪ್ರಸಾದ್, ಯೋಜನೆ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ ಕೆ ಅನಿಲ್ ಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್