ಬ್ಯಾಕ್‌ಲಾಗ್ ಹುದ್ದೆಗಳಲ್ಲಿ ಎಸ್ ಸಿ - ಎಸ್ ಟಿ ಅಧಿಕಾರಿಗಳಿಗೆ ಮುಂಬಡ್ತಿ: ನೌಕರರ ಸಂಘದಿಂದ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಮನವಿ

Sc st employees
  • 12 ಬ್ಯಾಕ್‌ಲಾಗ್ ಹುದ್ದೆಯಲ್ಲಿರುವವರಿಗೆ ಮುಂಬಡ್ತಿ ನೀಡುವಂತೆ ಮನವಿ
  • ಹುದ್ದೆ ತುಂಬಲು ಅನ್ಯಾಯ ಮಾಡಿದರೆ ಆರ್ಥಿಕ ಮತ್ತು ಸಾಮಾಜಿಕ ನಷ್ಟ

ಕಿರಿಯ ತರಬೇತಿ ಅಧಿಕಾರಿ ವೃಂದದಿಂದ ತರಬೇತಿ ಅಧಿಕಾರಿ ವೃಂದಕ್ಕೆ ಪರಿಶಿಷ್ಟ ಜಾತಿಯ (ಎಸ್ಸಿ) 48 ಮತ್ತು ಪರಿಶಿಷ್ಟ ವರ್ಗದ (ಎಸ್ಟಿ) 12 ಬ್ಯಾಕ್‌ಲಾಗ್ ಹುದ್ದೆಯಲ್ಲಿರುವವರಿಗೆ ಮುಂಬಡ್ತಿ ನೀಡುವಂತೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತರಿಗೆ ಸೂಚಿಸಬೇಕು ಎಂದು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ರಾಜ್ಯ ಸರ್ಕಾರಿ ಎಸ್‌ಸಿ-ಎಸ್‌ಟಿ ನೌಕರರ ಸಂಘ ಮನವಿ ಸಲ್ಲಿಸಿದೆ.

ಈಗಾಗಲೇ ಗುರುತಿಸಿರುವ ಬ್ಯಾಕ್‌ಲಾಗ್ ಹುದ್ದೆಗಳಲ್ಲಿರುವವರಿಗೆ ಮುಂಬಡ್ತಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಆಗಸ್ಟ್ 1ರಂದೇ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಸೂಚಿಸಿದರೂ ಯಾವುದೇ ಕ್ರಮ ಆಗಿಲ್ಲ ಎಂದು ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಎಸ್‌ಸಿ-ಎಸ್‌ಟಿ ನೌಕರರಿಗೆ ಮುಂಬಡ್ತಿಯಲ್ಲಿ ಮೀಸಲಾತಿ ಹಾಗೂ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಲು ಅನ್ಯಾಯ ಮಾಡಿದರೆ ಆರ್ಥಿಕ ಮತ್ತು ಸಾಮಾಜಿಕ ನಷ್ಟ ಉಂಟು ಮಾಡಿದಂತಾಗುತ್ತದೆ. ಈ ಪ್ರಕರಣವು ದೌರ್ಜನ್ಯ ತಡೆ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಮುಂಬಡ್ತಿ ನೀಡುವಾಗ 1978ರ ಆದೇಶದಂತೆ ಹಾಗೂ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬುವಾಗ 2015 ಮಾರ್ಚ್ 3ರ ಆದೇಶದಂತೆ ಮೀಸಲಾತಿ ಮತ್ತು ರೋಸ್ಟರ್ ಪಾಲನೆ ಕಡ್ಡಾಯವಾಗಿದೆ. ಹೀಗಾಗಿ, ಮೀಸಲಾತಿ ಮತ್ತು ರೋಸ್ಟರ್ ಪಾಲಿಸಿ ಬ್ಯಾಕ್ಲಾಗ್ ಹುದ್ದೆಗಳನ್ನು ತುಂಬಲು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತರಿಗೆ ಸೂಚಿಸಬೇಕು ಎಂದೂ ಅವರು ಮನವಿ ಮಾಡಿದ್ದಾರೆ.

‘ತರಬೇತಿ ಅಧಿಕಾರಿ ವೃಂದದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಶೀಘ್ರದಲ್ಲಿ ಮುಂಬಡ್ತಿ ನೀಡಲು ಇಲಾಖಾ ಪದೋನ್ನತಿ ಸಭೆ ನಡೆಸಲಾಗುವುದು. ಬ್ಯಾಕ್ ಲಾಗ್ ಹುದ್ದೆಯಲ್ಲಿರುವವರಿಗೆ ಅನ್ಯಾಯ ಆಗದಂತೆ ಹಾಗೂ ಎಲ್ಲ ನಿಯಮಗಳನ್ನು ಪಾಲಿಸಿ ಮುಂಬಡ್ತಿ ನೀಡಲಾಗುವುದು’ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತೆ ಕೆ. ಜ್ಯೋತಿ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್