ರಾಯಚೂರು | ಆಹಾರ ಧಾನ್ಯಗಳ ಮೇಲೆ ಜಿಎಸ್‌ಟಿ: ವರ್ತಕರ ಸಂಘದಿಂದ ಪ್ರತಿಭಟನೆ

Rice Millers Assosiation
  • ದೇಶದಲ್ಲಿಯೇ ಅತಿ ಹೆಚ್ಚು ಅಕ್ಕಿ ಗಿರಣಿ ಕಾರ್ಖಾನೆ ಹೊಂದಿದೆ ರಾಯಚೂರು
  • ಜಿಎಸ್‌ಟಿಯಿಂದ ಹೆಚ್ಚಲಿರುವ ಬಡವರು, ಹಿಂದುಳಿದವರ ಜೀವನ ವೆಚ್ಚ

ಕೇಂದ್ರ ಸರ್ಕಾರವು ಆಹಾರ ಧಾನ್ಯಗಳ ಮೇಲೆ ಶೇ. 5ರಷ್ಟು ಜಿಎಸ್‌ಟಿ ವಿಧಿಸಲು ಮುಂದಾಗಿದೆ. ಸರ್ಕಾರದ ನಿರ್ಧಾರವನ್ನು ಖಂಡಿಸಿ ರಾಯಚೂರಿನ ಅಕ್ಕಿ ಗಿರಣಿಗಾರರ ಸಂಘದ ವರ್ತಕರು, ಸದಸ್ಯರು ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. 

ರಾಯಚೂರು ಎಪಿಎಂಸಿ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.

"ಜುಲೈ 18ರಿಂದ ಆಹಾರ ಧಾನ್ಯಗಳ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ, ಅಕ್ಕಿ, ಜೋಳ, ರಾಗಿ ಇತರೆ ಆಹಾರ ಧಾನ್ಯಗಳ ಬೆಲೆ ಹೆಚ್ಚಳವಾಗಲಿದೆ. ಬಡವರು, ಹಿಂದುಳಿದವರು ಆಹಾರ ಧಾನ್ಯಗಳನ್ನು ಖರೀದಿಸಲಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ" ಎಂದು ವರ್ತಕರು ಹೇಳಿದ್ದಾರೆ. 

"ರಾಯಚೂರು ಜಿಲ್ಲೆ ಈಗಾಗಲೇ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ದೇಶದಲ್ಲಿಯೇ ಅತಿ ಹೆಚ್ಚು ಅಕ್ಕಿ ಗಿರಣಿ ಕಾರ್ಖಾನೆ, ಕಾಟನ್ ಮಿಲ್, ಬೇಳೆ ಮಿಲ್ ಮತ್ತಿತರ ಆಹಾರ ಕಾರ್ಖಾನೆಗಳನ್ನು ಹೊಂದಿದೆ. ಈಗ ಆಹಾರ ಧಾನ್ಯಗಳಿಗೆ ತೆರಿಗೆ ವಿಧಿಸಿದ್ದರಿಂದ ಕೈಗಾರಿಕೆಗಳು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಲಿವೆ" ಎಂದು ಪ್ರತಿಭಟನಕಾರರು ದೂರಿದ್ದಾರೆ.

AV Eye Hospital ad

ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ದವಸ ಧಾನ್ಯಗಳ ಮೇಲೆ ಜಿಎಸ್‌ಟಿ; ಎರಡು ದಿನ ಅಕ್ಕಿಗಿರಣಿ, ಸಗಟು ವ್ಯಾಪಾರ ಬಂದ್‌

"ಜಿಎಸ್‌ಟಿ ಹೇರಿಕೆಯಿಂದ ರೈತರಿಗೆ, ಉದ್ದಿಮೆದಾರರಿಗೆ ಹಾಗೂ ಅಕ್ಕಿ ಖರೀದಿ ಮಾಡುವ ಸಾಮಾನ್ಯ ಜನರಿಗೆ ಸಮಸ್ಯೆಯಾಗಲಿದೆ. ತೆರಿಗೆಯಿಂದ ಜೀವನ ವೆಚ್ಚ ಹೆಚ್ಚಾಗಿಲಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಜಿಎಸ್‌ಟಿಯನ್ನು ಹಿಂಪಡೆಯಬೇಕು" ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.

Rice Millers Assosiation

ಪ್ರತಿಭಟನೆಗೆ ದಿ ಗಂಜ್ ಮರ್ಚೆಂಟ್ಸ್ ಅಸೋಸಿಯೇಶನ್, ಪಟೇಲ್ ಗಂಜ್ ಮರ್ಚೆಂಟ್ಸ್ ಅಸೋಸಿಯೇಶನ್, ಜಿಲ್ಲಾ ವಾಣಿಜ್ಯೋದ್ಯಮಿ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹೀಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ.

ಜಿಲ್ಲಾ ವಾಣಿಜ್ಯೋದ್ಯಮಿ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಶಿ, ಮಾಜಿ ಶಾಸಕ ಎ ಪಾಪಾರೆಡ್ಡಿ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ, ಪಟೇಲ್ ಗಂಜ್ ಮರ್ಚೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ದೇವನಪಲ್ಲಿ ವೆಂಕಣ್ಣ ಶೆಟ್ಟಿ, ಕಾರ್ಯದರ್ಶಿ ಕೊಂಡ ವಿಠೋಬ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮಾಸ್‌ ಮೀಡಿಯಾ ರಾಯಚೂರು ವಲಯ ಸಂಯೋಜಕ ಮೊಹಮ್ಮದ್‌ ರಫಿ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app