
- ಮೊದಲ ಆರೋಪಿ ಎಸ್ ಜಾಗೃತ್ ಮತ್ತು 17ನೇ ಆರೋಪಿ ರಚನಾ ಹನುಮಂತ
- ಅರ್ಜಿ ಮಾನ್ಯ ಮಾಡಿದ 23ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ
ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಇಬ್ಬರು ಅಭ್ಯರ್ಥಿಗಳಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಮೊದಲನೇ ಆರೋಪಿ ಎಸ್ ಜಾಗೃತ್ ಮತ್ತು 17ನೇ ಆರೋಪಿ ರಚನಾ ಹನುಮಂತ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಬೆಂಗಳೂರಿನ 23ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕೆ ಲಕ್ಷ್ಮಿನಾರಾಯಣ್ ಭಟ್ ಮಾನ್ಯ ಮಾಡಿದರು.
ಸೆ. 14ರಂದು ಜಾಗೃತ್ ಮತ್ತು ಅ. 27ರಂದು ರಚನಾ ಅವರ ಪರವಾಗಿ ವಕೀಲೆ ಡಾ. ಪಿ ಎಲ್ ವಂದನಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಹಿರಿಯ ವಕೀಲ ಎಂ ಎಸ್ ಶ್ಯಾಮಸುಂದರ್ ಅವರು ಅರ್ಜಿದಾರರ ಪರವಾಗಿ ವಾದ ಮಂಡಿಸಿದ್ದರು. ಸಿಐಡಿ ಪರವಾಗಿ ವಿಶೇಷ ಸರ್ಕಾರಿ ವಕೀಲ ಪಿ ಪ್ರಸನ್ನ ಕುಮಾರ್ ವಾದಿಸಿದ್ದರು.
ಸಿಐಡಿ ಉಪ ಪೊಲೀಸ್ ವರಿಷ್ಠಾಧಿಕಾರಿ ಪಿ ನರಸಿಂಹ ಮೂರ್ತಿ ಅವರ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 120 ಬಿ, 420, 465, 468, 471 ಮತ್ತು 34ರ ಅಡಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಏ. 30ರಂದು ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಜಾಗೃತ್ ಅವರನ್ನು ಮೊದಲ ಆರೋಪಿಯನ್ನಾಗಿಸಿದ್ದು, ರಚನಾ 17ನೇ ಆರೋಪಿಯಾಗಿದ್ದರು.
ಜು. 2ರಂದು ಜಾಗೃತ್, ಆ. 28ರಂದು ರಚನಾ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಪಿಎಸ್ಐ ನೇಮಕಾತಿ ಪಟ್ಟಿಯಲ್ಲಿ ಜಾಗೃತ್ ನಾಲ್ಕನೇ ರ್ಯಾಂಕ್ ಪಡೆದಿದ್ದು, ಮಹಿಳಾ ವಿಭಾಗದಲ್ಲಿ ರಚನಾ ಅವರು ಮೊದಲ ರ್ಯಾಂಕ್ ಪಡೆದಿದ್ದರು.
ಈ ಸುದ್ದಿ ಓದಿದ್ದೀರಾ?ಮತದಾರರ ಮಾಹಿತಿಗೆ ಕನ್ನ | ಚಿಲುಮೆ ಸಂಸ್ಥೆ ಮೇಲೆ ಪೊಲೀಸರ ದಾಳಿ, ನಾಲ್ವರ ಬಂಧನ
2021ರ ಅ. 3ರಂದು ರಾಜ್ಯದ 92 ಕೇಂದ್ರಗಳಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ನಡೆದಿತ್ತು. ಕಲಬುರಗಿ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದ ಬಳಿಕ ರಾಜ್ಯ ಸರ್ಕಾರವು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು.