ಈ ದಿನ ಎಕ್ಸ್‌ಕ್ಲೂಸಿವ್ | ಪಿಎಸ್‌ಐ ನೇಮಕಾತಿ ಅಕ್ರಮ; ನೊಂದ ಅಭ್ಯರ್ಥಿಗಳಿಂದ ಪ್ರಧಾನಿ ಮೋದಿಗೆ ಪತ್ರ ಚಳವಳಿ

PSI recruitment scam
  • ನೇಮಕಾತಿ ಅಕ್ರಮ ತನಿಖೆ ಸಿಐಡಿಯಿಂದ ಸಿಬಿಐಗೆ ವಹಿಸಲು ಆಗ್ರಹ
  • ಮರು ಪರೀಕ್ಷೆ ನಡೆಸಲು ನೊಂದ ಅಭ್ಯರ್ಥಿಗಳಿಂದ ಪತ್ರ ಚಳವಳಿ

ಪಿಎಸ್‌ಐ ನೇಮಕಾತಿ ಅಕ್ರಮದ ತನಿಖೆಯನ್ನು ಸಿಐಡಿಯಿಂದ ಕೈಬಿಟ್ಟು, ಸಿಬಿಐಗೆ ವಹಿಸಬೇಕು ಎಂದು ನೊಂದ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

"ಪಿಎಸ್‌ಐ ನೇಮಕಾತಿ ಅಕ್ರಮದ ತನಿಖೆಯನ್ನು ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿದೆ. ಪರೀಕ್ಷೆ ನಡೆಸಿರುವ ಪೊಲೀಸ್‌ ಇಲಾಖೆ ಮತ್ತು ಸಿಐಡಿಯು ಗೃಹ ಇಲಾಖೆಯ ಅಡಿಯಲ್ಲಿ ಬರುವುದರಿಂದ ತನಿಖೆಯಲ್ಲಿ ಪಾರದರ್ಶಕತೆ ಕೊರತೆ ಹೆಚ್ಚಿರುತ್ತದೆ. ಹೀಗಾಗಿ ತನಿಖೆಯನ್ನು ಸಿಬಿಐಗೆ ವಹಿಸಬೇಕು," ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

"ಕರ್ನಾಟಕದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಂಡು ಕೇಳರಿಯದಂಥ ಅಕ್ರಮಗಳು ನಡೆಯುತ್ತಿದ್ದು, ಉದಾಹರಣೆಗೆ 545 ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮವೇ ಸಾಕ್ಷಿ ಸಮೇತ ಸಾಬೀತಾಗಿದೆ. ಬ್ಲೂಟೂತ್‌, ಓಎಮ್‌ಆರ್‌ ತಿದ್ದುಪಡಿ, ಮೊದಲ ಪತ್ರಿಕೆ ತಿದ್ದುಪಡಿ, ದೈಹಿಕ ಪರೀಕ್ಷೆಯಲ್ಲಿ ಅಕ್ರಮ, ಪರೀಕ್ಷಾ ಕೇಂದ್ರಗಳ ಅಡ್ವಾನ್ಸ್‌ ಬುಕಿಂಗ್ ಹಾಗೂ 'ಟೋಟಲ್‌ ಡೀಲ್‌' ಸೇರಿ ಒಟ್ಟು ಆರು ರೀತಿಯಲ್ಲಿ ಈ ನೇಮಕಾತಿ ಹಗರಣ ನಡೆದಿದೆ," ಎಂದು ದೂರಲಾಗಿದೆ. 

"ಅನೇಕ ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ಸಾವಿರಾರು ವಿದ್ಯಾರ್ಥಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂಥ ಘಟನೆಗಳು ಮತ್ತೆ ಮರುಕಳಿಸದಂತೆ ರಾಜ್ಯದಲ್ಲಿ ಎಚ್ಚರಿಕೆ ಸಂದೇಶ ಬರಬೇಕು. ಅಕ್ರಮದಲ್ಲಿ ಭಾಗಿಯಾದವರಿಗೆ ಶಿಕ್ಷೆ ವಿಧಿಸಿ, ಆದಷ್ಟು ಬೇಗ ಪಿಎಸ್‌ಐ ನೇಮಕಾತಿಗೆ ಮರು ಪರೀಕ್ಷೆ ನಡೆಸಬೇಕು," ಎಂದು ಪ್ರಧಾನಿ ಅವರಲ್ಲಿ ನೊಂದ ಅಭ್ಯರ್ಥಿಗಳು ವಿನಂತಿಸಿಕೊಂಡಿದ್ದಾರೆ.

ಇದನ್ನು ಓದಿದ್ದೀರಾ? ಆರು ರೀತಿಯಲ್ಲಿ ಪಿಎಸ್‌ಐ ನೇಮಕಾತಿ ಹಗರಣ: ನೊಂದ ಅಭ್ಯರ್ಥಿಗಳಿಂದ ಹಲವು ಸಂಗತಿ ಬಯಲು

ಪ್ರಧಾನಿ ಅವರಿಗೆ ಪತ್ರ ಬರೆದಿರುವ ವಿಷಯವಾಗಿ ನೇಮಕಾತಿ ಅಕ್ರಮದ ಬಗ್ಗೆ ಧ್ವನಿ ಎತ್ತಿರುವ ನೊಂದ ಅಭ್ಯರ್ಥಿ ರವಿಶಂಕರ್‌ ಮಾಲಿಪಾಟೀಲ್‌ ಅವರನ್ನು ಈ ದಿನ.ಕಾಮ್‌ ಸಂಪರ್ಕಿಸಿದಾಗ, “ರಾಜ್ಯಾದ್ಯಂತ ನೊಂದ ಅಭ್ಯರ್ಥಿಗಳಿಂದ ಪತ್ರ ಚಳವಳಿ ನಡೆಯುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ನಾವೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಅಕ್ರಮದ ಬಗ್ಗೆ ತಿಳಿಸುತ್ತೇವೆ. ನಮ್ಮ ಮುಖ್ಯ ಉದ್ದೇಶ ಮರು ಪರೀಕ್ಷೆ ನಡೆಸಬೇಕು ಎಂಬುದು. ಮೋದಿ ಅವರಲ್ಲೇ ನಾವು ಈ ಬಗ್ಗೆ ಮನವಿ ಮಾಡಿಕೊಳ್ಳುತ್ತೇವೆ. ಸುಮಾರು ಏಳು ಸಾವಿರ ನೊಂದ ಅಭ್ಯರ್ಥಿಗಳು ಪ್ರಧಾನಿ ಅವರಿಗೆ ಪತ್ರ ಬರೆಯಲು ಮುಂದಾಗಿದ್ದಾರೆ,” ಎಂದು ತಿಳಿಸಿದರು.

“ಈಗಾಗಲೇ ಧಾರವಾಡ, ವಿಜಯಪುರ ಹಾಗೂ ಬೆಂಗಳೂರಿನಲ್ಲಿ ಮರು ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ. ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ ಏಕಮುಖವಾಗಿ ತನಿಖೆ ನಡೆಸುತ್ತಿದೆ. ಕಲಬುರಗಿ ಅಷ್ಟೇ ಅಲ್ಲದೇ ರಾಜ್ಯಾದ್ಯಂತ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಈ ಕೂಡಲೇ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಪ್ರಧಾನಿಯವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ,” ಎಂದು ರವಿಶಂಕರ್‌ ವಿವರಿಸಿದರು.

ನಿಮಗೆ ಏನು ಅನ್ನಿಸ್ತು?
6 ವೋಟ್