ತೈಲ ಕಂಪನಿ ವೈಪಲ್ಯ ಖಂಡಿಸಿ ಮೇ 31ರಂದು ಬಂಕ್‌ ಮಾಲೀಕರ ಪ್ರತಿಭಟನೆ

ಬೆಲೆ ಏರಿಳಿತದಿಂದ ಡೀಲರ್‌ಗಳಿಗೆ ರಕ್ಷಣೆ ಒದಗಿಸಬೇಕು. ಬೇಡಿಕೆಯಷ್ಟು ತೈಲ ಪೂರೈಸಬೇಕು ಹಾಗೂ ಬ್ಯಾಂಕಿಂಗ್‌ ವಹಿವಾಟಿನಲ್ಲಿ ಆಗುತ್ತಿರುವ ತೊಂದರೆ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಪೆಟ್ರೋಲ್‌ ಬಂಕ್‌ ಮಾಲೀಕರು ನಿರ್ಧರಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.
Hindustan Petroleum

ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್‌ ಲಿಮಿಟೆಡ್‌ (ಎಚ್‌ಪಿಸಿಎಲ್) ಕಂಪನಿಗಳ ನಿರ್ವಹಣಾ ವೈಪಲ್ಯ ಖಂಡಿಸಿ ಪೆಟ್ರೋಲ್‌ ಬಂಕ್‌ ಮಾಲೀಕರು, ಮೇ 31ರಂದು ತೈಲ ಖರೀದಿ ನಿಲ್ಲಿಸುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ.

ಪೆಟ್ರೋಲ್‌ ಕಂಪನಿಗಳು ತಮ್ಮ ಅಧೀನದ ಪೆಟ್ರೋಲ್‌ ಪಂಪ್‌ಗಳಿಗೆ ಮುಂಗಡ (ಕ್ರೆಡಿಟ್) ಇಂಧನ ವಿತರಣೆಯನ್ನು ಸ್ಥಗಿತಗೊಳಿಸಿವೆ. ಹೀಗಾಗಿ ಹಣ ಪಾವತಿಸಿದ ಮೇಲೆಯೇ ಇಂಧನ ಪೂರೈಕೆಯಾಗುತ್ತಿರುವುದರಿಂದ ಬೇಡಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ   ಅಗತ್ಯಕ್ಕೆ ತಕ್ಕಂತೆ ತೈಲ ಪೂರೈಕೆ ಮಾಡಲಾಗದ ಬಂಕ್‌ಗಳಲ್ಲಿ  ʼನೋ ಸ್ಟಾಕ್‌ʼ ಫಲಕ ಹಾಕುವಂತಾಗಿದೆ ಎಂದು ಕರ್ನಾಟಕ ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟ (ಎಕೆಎಪ್‌ಪಿಟಿ) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಲೆ ಏರಿಳಿತದಿಂದ ಡೀಲರ್‌ಗಳಿಗೆ ರಕ್ಷಣೆ ಒದಗಿಸಬೇಕು. ಬೇಡಿಕೆಯಷ್ಟು ತೈಲ ಪೂರೈಸಬೇಕು ಹಾಗೂ ಬ್ಯಾಂಕಿಂಗ್‌ ವಹಿವಾಟಿನಲ್ಲಿ ಆಗುತ್ತಿರುವ ತೊಂದರೆ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಪೆಟ್ರೋಲ್‌ ಬಂಕ್‌ ಮಾಲೀಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

“ಖರೀದಿಸಿದ ಡೀಸೆಲ್‌ಗೆ ಸಾರಿಗೆ ಸಂಸ್ಥೆಗಳು ಹಣ ಪಾವತಿ ಮಾಡದೇ ಕಂಪನಿಗಳನ್ನು ಸಂದಿಗ್ಧ ಸ್ಥಿತಿಗೆ ತಲುಪಿಸಿವೆ. ಅದರ ಭಾರವನ್ನು ಸಾಮಾನ್ಯ ವಿತರಕರ ಮೇಲೆ ಹೇರಲಾಗುತ್ತಿದೆ. ಇತ್ತೀಚೆಗೆ ಬೇಡಿಕೆಗೆ ತಕ್ಕಷ್ಟು ಪೆಟ್ರೋಲ್‌ ಮತ್ತು ಡೀಸೆಲ್‌ ಪೂರೈಕೆಯಾಗುತ್ತಿಲ್ಲ. ಸಾಲದ ರೂಪದಲ್ಲಿ ಇಂಧನ ತಂದು ಮಾರಾಟವಾದ ಬಳಿಕ ಹಣ ಪಾವತಿಸುವ ವ್ಯವಸ್ಥೆಯನ್ನು ಈಗ ನಿಲ್ಲಿಸಲಾಗಿದೆ. ಜೊತೆಗೆ ಬ್ಯಾಂಕ್‌ ವಹಿವಾಟು ವಿಳಂಬವಾದರೆ ವಿತರಕರು ತೊಂದರೆಗೆ ಸಿಲುಕುತ್ತಿದ್ದಾರೆ,” ಎಂದು ಎಕೆಎಪ್‌ಪಿಟಿ ಉಪಾಧ್ಯಕ್ಷ ಎ ತಾರಾನಾಥ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“2017ರ ದರಗಳಿಗೆ ಹೋಲಿಸಿದರೆ, ಇಂದು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ದ್ವಿಗುಣವಾಗಿದೆ. ಕಮಿಷನ್‌ ಹೆಚ್ಚಳಕ್ಕೆ ಕೋರಿ ಕೇಂದ್ರ ಪೆಟ್ರೋಲಿಯಂ ಸಚಿವರು ಮತ್ತು ರಾಜ್ಯದ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಆದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ವರ್ಷ ಬಂಕ್‌ ಸಿಬ್ಬಂದಿಗೆ ವೇತನ ಪರಿಷ್ಕರಣೆಯಾಗಬೇಕು. ಮೂಲ ಸೌಕರ್ಯ ಕಲ್ಪಿಸಬೇಕು. ಇದೆಲ್ಲದರ ಪರಿಣಾಮ ನಿರ್ವಹಣೆಯ ವೆಚ್ಚವೂ ಈಗ ಅಧಿಕವಾಗಿದೆ. ಈ ಎಲ್ಲ ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟನೆಗೆ ನಿರ್ಧರಿಸಲಾಗಿದೆ,” ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

Image
Bharat Petroleum

ಬೆಲೆ ಇಳಿಕೆಯಿಂದ ಲಕ್ಷ ಲಕ್ಷ ನಷ್ಟ

ಪೆಟ್ರೋಲ್‌ ಬಂಕ್‌ ಮಾಲೀಕರ ಪ್ರತಿಭಟನೆ ಕುರಿತು ಬೆಂಗಳೂರಿನ ಬಸವೇಶ್ವರ ನಗರದ ಭಾರತ ಪೆಟ್ರೋಲಿಯಂ ಬಂಕ್‌ ಮಾಲೀಕ ಜಿ ಎಸ್‌ ರಾಜು ಅವರನ್ನು ಈ ದಿನ.ಕಾಮ್ ಮಾತನಾಡಿಸಿದಾಗ, “ತೈಲ ಬೆಲೆ ಏರಿಕೆ ಮಾಡುವಾಗ ಪೈಸೆ ಲೆಕ್ಕದಲ್ಲಿ ಮಾಡಲಾಗುತ್ತದೆ. ಆದರೆ, ಸರ್ಕಾರ ಮನಸ್ಸು ಬಂದಾಗ ಮಾತ್ರ ಏಕಾಏಕಿ ರೂಪಾಯಿ ಲೆಕ್ಕದಲ್ಲಿ ದರ ಇಳಿಕೆ ಮಾಡುತ್ತದೆ. ಆದರೆ, ಬೆಲೆ ಇಳಿಕೆಯಾದರೂ, ಆ ಮುಂಚೆ ಹೆಚ್ಚಿನ ಬೆಲೆಗೆ ಖರೀದಿ ಮಾಡಿಟ್ಟುಕೊಂಡಿದ್ದ ತೈಲವನ್ನು ಕಡಿಮೆ ದರಕ್ಕೆ ಮಾರಬೇಕು,” ಎಂದರು.

“ಕಳೆದ ನವೆಂಬರ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಏಕಾಏಕಿ ಇಂಧನ ದರವನ್ನು ಲೀಟರಿಗೆ ಗೆ ₹15 ಇಳಿಸಿದವು. ಪರಿಣಾಮ ಆ ತಿಂಗಳಲ್ಲಿ ಒಂದೊಂದು ಪೆಟ್ರೋಲ್‌ ಬಂಕ್‌ಗಳಿಗೆ ₹15-30 ಲಕ್ಷ ನಷ್ಟವಾಯಿತು.  ನಮಗಂತೂ 14 ಲಕ್ಷ ನಷ್ಟವಾಗಿತ್ತು. ಮತ್ತೆ ಈಗ ಏಕಾಏಕಿ 9 ರೂಪಾಯಿ ಇಳಿಸಿದೆ. ಇದರಿಂದಾಗಿ ಮತ್ತೆ ನಾವು ನಷ್ಟ ಅನುಭವಿಸಿದ್ದೇವೆ,” ಎಂದು ತಿಳಿಸಿದರು. 

ಈ ಸುದ್ದಿ ಓದಿದ್ದೀರಾ? ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು | ಒಂದು ದಿನದ ಪೆಟ್ರೋಲ್‌ ಮಾತ್ರ ಉಳಿದಿದೆ ಎಂದ ವಿಕ್ರಮಸಿಂಘೆ

“ಈ ಹಿಂದೆ ಸಾಲದ ರೂಪದಲ್ಲಿ ನಮಗೆ ಇಂಧನ ಪೂರೈಕೆಯಾಗುತ್ತಿತ್ತು. ಆದರೆ, ಕಳೆದ ಮೂರು ತಿಂಗಳಿಂದ ಈ ವ್ಯವಸ್ಥೆ ನಿಂತು ಹೋಗಿದೆ. ಈಗ ನಾವು ಮೊದಲೇ ಹಣ ಪಾವತಿಸಿ ಇಂಧನ ತರಿಸಿಕೊಳ್ಳಬೇಕು. ಹೀಗಾಗಿ ಗ್ರಾಹಕರಿಗೆ ಬೇಡಿಕೆಗೆ ತಕ್ಕಂತೆ ಇಂಧನ ನೀಡಲು ಆಗುತ್ತಿಲ್ಲ. ದಿನಕ್ಕೆ ಮೂರು ಲೋಡ್‌ ಇಂಧನ ನಮ್ಮಲ್ಲಿ ಖಾಲಿಯಾಗುತ್ತಿತ್ತು. ಈಗ ಆ ಪ್ರಮಾಣ ಕಡಿಮೆಯಾಗಿದೆ. ಅವತ್ತಿಗೆ ಎಷ್ಟು ತೈಲ ಬೇಕೋ ಅಷ್ಟು ತರಿಸಿಕೊಂಡು ಜೀವನ ನಡೆಸುವ ನಮ್ಮಂಥವರಿಗೆ ಪೆಟ್ರೋಲ್‌ ಬಂಕ್‌ ನಡೆಸುವುದು ಕಷ್ಟವಾಗುತ್ತಿದೆ," ಎಂದು ವಿವರಿಸಿದರು.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಹಿಂದೂಸ್ತಾನ ಪೆಟ್ರೋಲಿಯಂ ಬಂಕ್‌ ಮಾಲೀಕ ಪ್ರಕಾಶ ಮಮದಾಪುರ ಅವರನ್ನು ಈ ದಿನ.ಕಾಮ್‌ ಸಂಪರ್ಕಿಸಿದಾಗ, “ತೈಲ ದರ ಇಳಿಯುವ ಬಗ್ಗೆ ನಮಗೆ ಯಾವ ಸೂಚನೆಯೂ ಇರುವುದಿಲ್ಲ. ಹೀಗಾಗಿ ನಾವು ಸಾಕಷ್ಟು ಪ್ರಮಾಣದಲ್ಲಿ ತೈಲವನ್ನು ಯಾವಾಗಲೂ ದಾಸ್ತಾನು ಮಾಡಿಕೊಳ್ಳುತ್ತೇವೆ. ಆದರೆ, ಸರ್ಕಾರ ಮಾತ್ರ ಒಂದು ಮಾಹಿತಿ ಕೊಡದೇ ರಾತ್ರಿ 12 ಗಂಟೆಗೆ ಏಕಾಏಕಿ ತೈಲ ದರ ಇಳಿಕೆ ಮಾಡಿದರೆ ನಮ್ಮಂಥ ಡೀಲರ್‌ಗಳಿಗೆ ಲಕ್ಷಗಟ್ಟಲೇ ನಷ್ಟ ಸಂಭವಿಸುತ್ತದೆ. ಹೆದ್ದಾರಿ ಪಕ್ಕದ ಬಂಕ್‌ಗಳಿಗೆ ಈ ನಷ್ಟ ಇನ್ನೂ ದೊಡ್ಡದಿರುತ್ತದೆ. ಇದೇ ವರ್ಷದಲ್ಲಿ ನಮಗೆ 25 ಲಕ್ಷ ನಷ್ಟವಾಗಿದೆ. ಯಾವ ಪರಿಹಾರವೂ ಸರ್ಕಾರದಿಂದ ನಮಗೆ ಸಿಗುವುದಿಲ್ಲ” ಎಂದರು.

ಹೆಸರು ಹೇಳಲು ಇಚ್ಚಿಸದ ಯಶವಂತಪುರದ ಪಂಪ್‌ ಮಾಲೀಕರೊಬ್ಬರು ಈ ದಿನ.ಕಾಮ್ ನೊಂದಿಗೆ ಮಾತನಾಡಿ, “ಈ ಹಿಂದೆ ನಮ್ಮ  ತೈಲ ಕಂಪನಿಯು ವಾರಕ್ಕೆ ಮೂರು ಲೋಡ್‌ಗಳನ್ನಾದರೂ ಮುಂಗಡವಾಗಿ ಕಳುಹಿಸುತ್ತಿತ್ತು. ಈ ವ್ಯವಸ್ಥೆ ಈಗ ಸ್ಥಗಿತಗೊಂಡಿದೆ. ನಮ್ಮ ಬಳಿ ಹಣವಿರುವಷ್ಟು ಮಾತ್ರ ತೈಲ ತರಿಸಿಕೊಳ್ಳುತ್ತಿದ್ದೇವೆ. ನಮ್ಮ ಗ್ರಾಹಕರಿಗೂ ನಾವು ಪೂರ್ಣಪ್ರಮಾಣದಲ್ಲಿ ಇಂಧನ ಪೂರೈಸಲು ಆಗುತ್ತಿಲ್ಲ," ಎಂದು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್