ಪೂರ್ಣಚಂದ್ರ ತೇಜಸ್ವಿ ಬರಹ ಪರಿಸರ ಕೇಂದ್ರಿತವಾಗಿವೆ: ಪ್ರೊ. ಮೀನಾಕ್ಷಿ ಬಿರಾದಾರ

ತೇಜಸ್ವಿ ಅವರ ಸಮಗ್ರ ಬರಹಗಳು ಪರಿಸರ ಕೇಂದ್ರಿತವಾಗಿವೆ. ತೇಜಸ್ವಿ ಅವರ ಸಾಹಿತ್ಯವಯ ನವ್ಯ ಕಾಲಘಟ್ಟದ್ದೇ ಆಗಿದ್ದರೂ, ಅವರು ಬಂಡಾಯದ ಬಹುದೊಡ್ಡ ದನಿಯಾಗಿದ್ದರು ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಮೀನಾಕ್ಷಿ ಬಿರಾದಾರ ಅಭಿಪ್ರಾಯಪಟ್ಟಿದ್ದಾರೆ.

ತೇಜಸ್ವಿ ಅವರ ಜನ್ಮ ದಿನದ ಅಂಗವಾಗಿ ಬೀದರ್‌ ಜಿಲ್ಲೆಯ ಬಸವಕಲ್ಯಾಣದ ವಿಕಾಸ್ ಪಿಯು ಕಾಲೇಜಿನಲ್ಲಿ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನವು 'ಪೂರ್ಣಚಂದ್ರ ತೇಜಸ್ವಿ ಹಾಗೂ ಕನ್ನಡ ಸಾಹಿತ್ಯ' ಉಪನ್ಯಾಸ ಕಾರ್ಯಕ್ರಮ ಆಯೋಜಿಸಿತ್ತು. 

Eedina App

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೀನಾಕ್ಷಿ ಬಿರಾದಾರ, "ತೇಜಸ್ವಿ ಅವರು ನಗರೀಕರಣಕ್ಕಿಂತ ಹಳ್ಳಿ, ಕಾಡು, ಕೃಷಿ ಜತೆಗೆ ತಮ್ಮ ಬದುಕು ಸಾಗಿಸಿದರು. ನವ್ಯ ಕಾಲಘಟ್ಟದಲ್ಲಿ ತೇಜಸ್ವಿ ಬರೆದರೂ ಬಂಡಾಯದ ಬಹುದೊಡ್ಡ ದನಿಯಾಗಿದ್ದರು. ಅವರ ಬರಹ ಮನುಷ್ಯನ ಅಸ್ತಿತ್ವದ ಕನ್ನಡಿಯೂ ಆಗಿದೆ" ಎಂದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತ ಬಾಲಾಜಿ ಕುಂಬಾರ, "ಕನ್ನಡ ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಿದ ಬರಹಗಾರ ತೇಜಸ್ವಿ. ಅವರು ಸಾಮಾಜಿಕ ಸಂಕೀರ್ಣತೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಮನುಷ್ಯ ಲೋಕದ ಅಸಂಬದ್ಧತೆಗಳನ್ನು ವಿರೋಧಿಸಿದ್ದರು. ಮಾನವೀಯತೆ ಅವರ ಬರಹದ ಪ್ರಧಾನ ನೆಲೆಯಾಗಿತ್ತು. ಸಾಮಾಜಿಕ ವಾಸ್ತವವನ್ನು ನಿಷ್ಠುರವಾಗಿ ಕಥನಿಸಿದ್ದಾರೆ" ಎಂದು ಹೇಳಿದರು.

AV Eye Hospital ad

ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ರೇವಣಸಿದ್ದಪ್ಪ ದೊರೆಗಳ್ ಮಾತನಾಡಿ, "ಕನ್ನಡ ಸಾಫ್ಟ್‌ವೇರ್‌ಗಾಗಿ ಹಗಲಿರುಳು ಶ್ರಮಿಸಿದ ತೇಜಸ್ವಿ, ಕನ್ನಡದ ಮೂಲಕ ಭಾರತಕ್ಕೂ, ಜಗತ್ತಿಗೂ ಕನ್ನಡಿ ಹಿಡಿದವರು. ಕನ್ನಡ ಮಾಧ್ಯಮ, ಕನ್ನಡ ಶಾಲೆಗೆ ಒತ್ತು ನೀಡಿದ ಅವರ ಬರಹ ಇಂಗ್ಲಿಷ್ ಸೇರಿ ಹಲವು ಭಾಷೆಗಳಲ್ಲಿ ಅನುವಾದಗೊಂಡಿವೆ. ವಿಚಾರವಂತರನ್ನು ಒಂದೆಡೆ ಸೇರಿಸಿದ್ದ ತೇಜಸ್ವಿ ಅವರು ವಿಚಾರ ಸಾಹಿತ್ಯಕ್ಕೆ, ಪತ್ರಿಕೋದ್ಯಮಕ್ಕೆ, ಫೋಟೋಗ್ರಾಫಿಗೆ, ಸಿನಿಮಾ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ" ಎಂದರು. 

ಪ್ರತಿಷ್ಠಾನದ ನಿರ್ದೇಶಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, "ತೇಜಸ್ವಿ ಅವರ ಬರಹದಲ್ಲಿ ಸಬ್ ಆಲ್ಟರ್ನ್ ಲೋಕ, ಪರಿಸರವಾದ, ಸಮಾಜವಾದ ಮತ್ತು ರಾಜಕೀಯ ಸಾಮಾಜಿಕ ವಾಸ್ತವದ ಚಿತ್ರಣ ಕಾಣಬಹುದು. ನಿರ್ಲಕ್ಷಿತ ವ್ಯಕ್ತಿ, ಕಾಡು, ಪ್ರಾಣಿ, ಪಕ್ಷಿ, ಜೀವ ಸಂಕುಲಗಳೆಲ್ಲ ತೇಜಸ್ವಿ ಕಥನದಲ್ಲಿ ನಾಯಕರಾಗಿದ್ದಾರೆ" ಎಂದರು. 

ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಚಾರ್ಯ ಅಜಯ ಕನಸನಾಳೆ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಕೋಶಾಧ್ಯಕ್ಷ ಬಾಲಾಜಿ ಚಾಮಲ್ಲೆ, ಕಲ್ಪನಾ ಚೂಡೆ, ವಿಕ್ರಮ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app