
- ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಕರ್ನಾಟಕ ಹೈಕೋರ್ಟ್
- ಅಲೆಮಾರಿ, ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ರಾಮಸ್ವಾಮಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಲೆಮಾರಿ, ಬುಡಕಟ್ಟು ಸಮುದಾಯಗಳಿಗೆ ಸಾರ್ವಜನಿಕ ಗ್ರಂಥಾಲಯಗಳನ್ನು ಸ್ಥಾಪಿಸುವ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.
ರಾಜ್ಯ ಅಲೆಮಾರಿ, ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ರಾಮಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಸೋಮವಾರ ನಡೆಸಿತು.
ಸರ್ಕಾರದ ಪರ ವಕೀಲರು “ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅಲೆಮಾರಿ, ಬುಡಕಟ್ಟು ಸಮುದಾಯಗಳಿಗೆ ಗ್ರಂಥಾಲಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರ ತಾತ್ವಿಕವಾಗಿ ಒಪ್ಪಿಕೊಂಡಿದೆ. ಕೋವಿಡ್ ಹಾಗೂ ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಸರ್ಕಾರದ ತೀರ್ಮಾನವನ್ನು ತಡೆಹಿಡಿಯಲಾಗಿತ್ತು. ಈಗ ಅದನ್ನು ಆದ್ಯತೆಯ ಮೇಲೆ ಪರಿಗಣಿಸಲಾಗುವುದು” ಎಂದು ಪೀಠಕ್ಕೆ ಮಾಹಿತಿ ನೀಡಿದರು.
ಇದನ್ನು ದಾಖಲಿಸಿಕೊಂಡ ಪೀಠವು ಸರ್ಕಾರಕ್ಕೆ 12 ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಿತು. ಅರ್ಜಿದಾರರ ಪರ ವಕೀಲ ವಿ ಶ್ರೀನಿವಾಸ ವಾದ ಮಂಡಿಸಿದರು.
ಅಲೆಮಾರಿ, ಬುಡಕಟ್ಟು ಸಮುದಾಯಗಳು ಹೆಚ್ಚು ವಾಸ ಮಾಡುವ ಜಿಲ್ಲೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸುವಂತೆ ಡಾ. ಡಿ ಎಂ ನಂಜುಂಡಪ್ಪ ಸಮಿತಿ ಶಿಫಾರಸು ಮಾಡಿತ್ತು. ಅದರಂತೆ, ಹೈದರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಭಾಗದಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯಗಳು ಶಿಕ್ಷಣ ಮತ್ತು ಜ್ಞಾನಾರ್ಜನೆಯಿಂದ ವಂಚಿತರಾಗಿದ್ದಾರೆ. ಅದಕ್ಕಾಗಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅಲೆಮಾರಿ, ಬುಡಕಟ್ಟು ಸಮುದಾಯಗಳಿಗೆ ಗ್ರಂಥಾಲಯಗಳನ್ನು ಸ್ಥಾಪಿಸುವಂತೆ ಅರ್ಜಿದಾರರು 2018ರ ಜುಲೈ 18ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಲ್ಕಿಸ್ ಬಾನು ಅತ್ಯಾಚಾರ ಅಪರಾಧಿಗಳ ಬಿಡುಗಡೆ, ದಲಿತ ಬಾಲಕನ ಹತ್ಯೆ ಖಂಡಿಸಿ ಪ್ರತಿಭಟನೆ
“ಗ್ರಂಥಾಲಯ ಸ್ಥಾಪನೆಗೆ ಪ್ರಾದೇಶಿಕ ಆಯುಕ್ತರಿಂದ ಹಣ ಮಂಜೂರು ಮಾಡಿಸುವಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರು 2019ರ ಸೆಪ್ಟೆಂಬರ್ 5ರಂದು ಮನವಿ ಸಲ್ಲಿಸಿದ್ದರು. ಇದೇ ರೀತಿಯ ಮನವಿಯನ್ನು ಶಿಕ್ಷಣ ಇಲಾಖೆ ಸಹ ಸಲ್ಲಿಸಿತ್ತು. ಆದರೆ, ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಅರ್ಜಿದಾರರು 2020ರ ಜನವರಿ 28ರಂದು ಸರ್ಕಾರಕ್ಕೆ ಮತ್ತೊಂದು ಮನವಿ ಸಲ್ಲಿಸಿದ್ದರು. ನಂತರವೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ” ಎಂದು ಅರ್ಜಿಯಲ್ಲಿ ದೂರಲಾಗಿದೆ.
ಹಾಗಾಗಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬುಡಕಟ್ಟು ಸಮುದಾಯಗಳಿಗೆ ಗ್ರಂಥಾಲಯಗಳನ್ನು ಸ್ಥಾಪಿಸುವಂತೆ ಕೋರಿ ಸಲ್ಲಿಸಲಾಗಿರುವ ಮನವಿಯನ್ನು ಪರಿಗಣಿಸುವಂತೆ ಶಿಕ್ಷಣ ಇಲಾಖೆ, ಆರ್ಥಿಕ ಇಲಾಖೆ ಹಾಗೂ ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ನೀಡಬೇಕು. ಅದೇ ರೀತಿ ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.