ಪ್ರಾಣ ಕಳೆದುಕೊಂಡವರೆಲ್ಲ ಸಮಾನರು, ಎಲ್ಲರಿಗೂ ಸಮಾನ ಪರಿಹಾರ ನೀಡಬೇಕು; ಮಂತ್ರಾಲಯದ ಸುಬುಧೇಂದ್ರ ಸ್ವಾಮೀಜಿ

  • 'ನಿರ್ಗತಿಕರಿಗೆ ಪರಿಹಾರ ನೀಡುವ ಬದಲು ಅವರು ನಿರ್ಗತಿಕರಾಗದಂತೆ ರಕ್ಷಿಸಬೇಕು'
  • 'ಇನ್ನೊಬ್ಬರ ಮೇಲೆ ಅತಿಕ್ರಮಣ ಮಾಡುವುದು, ಬೆದರಿಕೆ ಹಾಕುವುದು ಸರಿಯಲ್ಲ'

"ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಗೀಡಾದ ಪ್ರತಿ ಕುಟುಂಬದವರೂ ಸಂತ್ರಸ್ತರೇ. ಹೀಗಾಗಿ ಯಾರಿಗೂ ತಾರತಮ್ಯ ಮಾಡದೆ ಇರುವುದು ರಾಜ್ಯ ಸರ್ಕಾರದ ಗುರಿಯಾಗಿದೆ. ಹತ್ಯೆಯಾದವರ ಕುಟುಂಬದವರಿಗೆ ಪರಿಹಾರ ಧನ ನೀಡುವ ಸರ್ಕಾರದ ಪರ್ಯಾಯ ವಿಧಾನ ಸರಿಯಲ್ಲ" ಎಂದು ಮಂತ್ರಾಲಯದ ರಾಘವೇಂದ್ರ ಮಠದ ಪೀಠಾಧಿಪತಿ ಸುಬುಧೇಂದ್ರ ಸ್ವಾಮೀಜಿ ಹೇಳಿದ್ದಾರೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಹತ್ಯೆಯಾದವರಿಗೆ ರಾಜ್ಯ ಸರ್ಕಾರವು ಪರಿಹಾರ ಧನ ನೀಡುವುದರಲ್ಲಿ ತಾರತಮ್ಯ ಮಾಡಿದೆಯೆನ್ನಲಾಗುತ್ತಿರುವ ಆರೋಪಗಳ ಬಗ್ಗೆ ಮಾತನಾಡಿದರು.  

"ಹಣವನ್ನು ಜೀವಗಳೊಂದಿಗೆ ಸಮತೂಗಿಸುವುದು ಸರಿಯಲ್ಲ. ನಿರ್ಗತಿಕರಿಗೆ ಹಣ ನೀಡುವ ಬದಲಾಗಿ, ಅವರು ನಿರ್ಗತಿಕರಾಗದಂತೆ ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ" ಎಂದು ಅವರು ಹೇಳಿದರು. 

ಈ ಸುದ್ದಿ ಓದಿದ್ದೀರಾ?: ದಕ್ಷಿಣ ಕನ್ನಡ| ಫಾಝಿಲ್‌ ಹತ್ಯೆ ; ಕೃತ್ಯಕ್ಕೆ ಬಳಸಿದ್ದ ಕಾರು ಮಾಲೀಕ ಪೊಲೀಸ್‌ ವಶ

"ಯಾವುದೇ ದೇಶ ಪ್ರಗತಿ ಹೊಂದಬೇಕೆಂದರೆ, ಸಾರ್ವಜನಿಕರಲ್ಲಿ ಸೌಹಾರ್ದತೆ, ಶಾಂತಿ ಇರಬೇಕು. ಧರ್ಮಭೇದ ಇರಬಾರದು. ಜನ ಕೋಮುವಾದಿಗಳಾಗಿ ಪರಿವರ್ತನೆಗೊಳ್ಳದೇ, ಅವರ ಸಮುದಾಯಗಳನ್ನು ಹೊರತುಪಡಿಸಿ ಇತರ ಸಮುದಾಯದವರನ್ನು ನಮ್ಮವರು ಎಂದು ಕಾಣಬೇಕು. ಸಹಬಾಳ್ವೆಯ ಮನೋಭಾವನೆ ಪ್ರತಿಯೊಬ್ಬರಲ್ಲಿ ಬೆಳೆಯಬೇಕು. ಹೀಗಾದಲ್ಲಿ ಮಾತ್ರ ಕೋಮುಗಲಭೆಗಳು ಅಂತ್ಯ ಕಾಣಬಹುದು" ಎಂದು ಅವರು ಹೇಳಿದರು.

“ಇನ್ನೊಬ್ಬರ ಮೇಲೆ ಅತಿಕ್ರಮಣ ಮಾಡುವುದು ಅಥವಾ ಬೆದರಿಕೆ ಹಾಕುವುದು ಸರಿಯಾದ ಕ್ರಮವಲ್ಲ. ಇಂತಹ ಘಟನೆಗೆ ಕಾರಣವಾಗುವವರನ್ನು ತೀವ್ರವಾಗಿ ವಿರೋಧಿಸುತ್ತೇವೆ. ಹತ್ಯೆಯಾದ ಎಲ್ಲರೂ ಸಹಜೀವಿಗಳೇ, ಪ್ರಾಣ ಕಳೆದುಕೊಂಡವರೆಲ್ಲ ಸಮಾನರು. ಎಲ್ಲರಿಗೂ ಸೂಕ್ತ ರೀತಿಯ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಕೋರುತ್ತೇನೆ'' ಎಂದು ಮನವಿ ಮಾಡಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180