ರಾಯಚೂರು | ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹ; ಗುತ್ತಿಗೆ ಪೌರ ಕಾರ್ಮಿಕರ ಪ್ರತಿಭಟನೆ

ಗುತ್ತಿಗೆ ಪೌರಕಾರ್ಮಿಕರು-ರಾಯಚೂರು-ಪ್ರತಿಭಟನೆ
  • ಪೌರ ಕಾರ್ಮಿಕರಿಗೆ ಸೇರಿದ ₹20 ಲಕ್ಷ ಹಣ ದುರುಪಯೋಗ ಆರೋಪ
  • ಮೃತ ಪೌರ ಕಾರ್ಮಿಕರ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹ

ರಾಯಚೂರು ನಗರಸಭೆಯಲ್ಲಿ ಪೌರ ಕಾರ್ಮಿಕರಿಗೆ ಮಂಜೂರಾದ ಹುದ್ದೆಗಳನ್ನು 225ಕ್ಕೆ ಬದಲಾಗಿ 364 ಎಂದು ಪರಿಗಣಿಸುವಂತೆ ಆಗ್ರಹಿಸಿ ಗುತ್ತಿಗೆ ಕಾರ್ಮಿಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸೋಮವಾರ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, "ನಗರಸಭೆಯಲ್ಲಿ 557 ಪೌರ ಕಾರ್ಮಿಕ ಹುದ್ದೆಗಳು ಖಾಲಿ ಇದ್ದು, ಸರ್ಕಾರದಿಂದ 364 ಹುದ್ದೆಗಳು ಮಂಜೂರಾಗಿವೆ. ಈಗಾಗಲೇ 154 ಕಾಯಂ ನೌಕರರಿದ್ದು, 210 ಖಾಲಿ ಹುದ್ದೆಗಳು ಉಳಿಯುತ್ತವೆ. ಆದರೆ, ಇವರಲ್ಲಿ 70 ಜನರು ಅಕ್ರಮವಾಗಿ ನೇಮಕಗೊಂಡ ಕೆಲಸ ಮಾಡದ ಪೌರ ಕಾರ್ಮಿಕರಿದ್ದಾರೆ" ಎಂದು ಆರೋಪಿಸಿದರು.

Eedina App

"ಜಿಲ್ಲಾಧಿಕಾರಿಯಿಂದ 364 ಹುದ್ದೆಗಳ ಮಂಜೂರಾತಿಗೆ ಅನುಮೋದನೆ ದೊರೆತು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಆದರೆ ಈ ಬಗ್ಗೆ ರಾಯಚೂರು ನಗರಸಭೆಯ ಪರಿಸರ ಅಭಿಯಂತರರು ಮತ್ತು ಪೌರಾಯುಕ್ತರು ಮಂಜೂರಾದ ಹುದ್ದೆಗಳ ಸಂಖ್ಯೆ 225 ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗಕ್ಕೆ ಸುಳ್ಳು ವರದಿ ನೀಡಿದ್ದಾರೆ" ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎಸ್‌ ಮಾರೆಪ್ಪ, "ನಿಯಮದ ಪ್ರಕಾರ ನಿಗದಿತ ಹುದ್ದೆಗಳಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಕಾರ್ಮಿಕರಿಗೆ ನಿತ್ಯ ನೀಡುವ ಉಪಹಾರ ಕಳಪೆಯಾಗಿದ್ದು, ನೀರು ಸಹ ಕುಡಿಯಲು ಯೋಗ್ಯವಾಗಿರುವುದಿಲ್ಲ. ಪೌರಾಯುಕ್ತರು ಮತ್ತು ಪರಿಸರ ಅಭಿಯಂತರರು, ನೀರು, ಉಪಹಾರ ಸರಬರಾಜು ಮಾಡುವ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಅಕ್ರಮ ಎಸಗಿದ್ದಾರೆ" ಎಂದು ಆರೋಪಿಸಿದರು.

AV Eye Hospital ad

"ನೈರ್ಮಲ್ಯ ವಿಭಾಗದ ಪರಿಕರ, ಪೌರ ಕಾರ್ಮಿಕರ ಸಮವಸ್ತ್ರಕ್ಕಾಗಿ ಕಾಯ್ದಿರಿಸಿದ ₹20 ಲಕ್ಷ ಹಣ ದುರುಪಯೋಗವಾಗಿದೆ. ಈ ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆಯಾಗಬೇಕು. ತಪ್ಪಿತಸ್ಥರಾಗಿರುವ ಪೌರಾಯುಕ್ತರು ಮತ್ತು ಪರಿಸರ ಅಭಿಯಂತರರನ್ನು ಕೆಲಸದಿಂದ ಅಮಾನತುಗೊಳಿಸಬೇಕು" ಎಂದು ಅವರು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಪ್ರಗತಿ ಪ್ರತಿಮೆ ಅನಾವರಣ | ಕೂಲಿ ಹಣಕ್ಕಾಗಿ ಬಿಜೆಪಿ ಮುಖಂಡರ ಬೆನ್ನು ಬಿದ್ದ ಕಾರ್ಮಿಕರು

"ಪೌರ ಕಾರ್ಮಿಕರಾಗಿ ದುಡಿಯುವಾಗ ಸಾವನ್ನಪ್ಪಿದ ಐವರಿಗೆ, ಸೇವೆಯಿಂದ ನಿವೃತ್ತಿಯಾದ ಮೂವರು ನೇರ ವೇತನ ಪೌರ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು. ಅವರ ಕುಟುಂಬದ ಒಬ್ಬರಿಗೆ ಕೆಲಸ ಕೊಡಬೇಕು" ಎಂದು ಸಂಘದ ರಾಜ್ಯಾಧ್ಯಕ್ಷ ಎಸ್‌ ಮಾರೆಪ್ಪ ಆಗ್ರಹಿಸಿದರು.

ಪೂರಕ ಮಾಹಿತಿ | ಮಾಸ್‌ ಮೀಡಿಯಾ ಕೊಪ್ಪಳ ವಲಯ ಸಂಚಾಲಕ ಮೊಹಮದ್‌ ರಫಿ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app