ರಾಯಚೂರು | ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗ್ರಾಕೂಸ ಪ್ರತಿಭಟನೆ

  • ಸರಿಯಾದ ಸಮಯಕ್ಕೆ ಕೂಲಿ ನೀಡುವಂತೆ ಆಗ್ರಹ
  • ಅಧಿಕಾರಿಗಳು ಕೂಲಿಕಾರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ

ಮನರೇಗಾ ಅಡಿಯಲ್ಲಿ ಕೆಲಸಗಳನ್ನು 50 ಕಿ.ಮೀ ದೂರದವರೆಗೆ ನೀಡುತ್ತಿದ್ದು, ಅಷ್ಟು ದೂರದವರೆಗೆ ಪ್ರತಿದಿನ ಸಂಚರಿಸಲು ಕಷ್ಟವಾಗುತ್ತಿದೆ. ಸ್ಥಳೀಯವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೇ ಉದ್ಯೋಗ ನೀಡಬೇಕು ಹಾಗೂ ಕೂಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿಕಾರರ ಸಂಘ (ಗ್ರಾಕೂಸ) ಪ್ರತಿಭಟನೆ ನಡೆಸಿದೆ. 

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಿದ ಸಂಘಟನೆ ಕಾರ್ಯಕರ್ತರು ಮತ್ತು ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ. 

“ಗ್ರಾಮ ಪಂಚಾಯತಿಯವರು 50 ಕಿ.ಮೀ ದೂರದ ಪ್ರದೇಶಗಳಲ್ಲಿ ಕೆಲಸ ನೀಡುತ್ತಿದ್ದಾರೆ. ದಿನನಿತ್ಯ ಅಷ್ಟು ದೂರ ಕೆಲಸಕ್ಕೆ ಹೋಗಬೇಕೆಂದರೆ ಸಂಚಾರಕ್ಕೆ 100 ರೂಪಾಯಿ ಖರ್ಚಾಗುತ್ತಿದೆ. ಸರ್ಕಾರವು ನಮ್ಮ ಸಂಚಾರಕ್ಕಾಗಿ ಕೇವಲ 30 ರೂಪಾಯಿ ಮಾತ್ರ ನೀಡುತ್ತಿದೆ” ಎಂದು ಕೂಲಿಕಾರರು ತಮ್ಮ ಅಳಲನ್ನು ತೋಡಿಕೊಂಡರು.

“ಕೂಲಿಕಾರರಿಗೆ ಕಳೆದ 45 ದಿನಗಳಿಂದ ಕೂಲಿ ಹಣ ಬಿಡುಗಡೆ ಆಗಿಲ್ಲ. ಇದರ ಬಗ್ಗೆ ಹಲವು ಬಾರಿ ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ" ಎಂದು ದೂರಿದರು. 

ಈ ಸುದ್ದಿ ಓದಿದ್ದೀರಾ?: ಚಿಕ್ಕಮಗಳೂರು | ನೆಟ್‌ವರ್ಕ್‌ ಸಮಸ್ಯೆ; ಆಯುಷ್ಮಾನ್ ನೋಂದಣಿಗೆ ಬೆಟ್ಟ ಹತ್ತಿದ ಗ್ರಾಮಸ್ಥರು

“ಬೂತಲದಿನ್ನಿಯಲ್ಲಿ ಅರ್ಜಿ ಸಲ್ಲಿಸಿದ 4 ಗುಂಪುಗಳಿಗೆ ಹಾಗೂ ರಾಗಲಪರ್ವಿ, ಮಲದಿನ್ನಿಯ 5 ಗುಂಪುಗಳಿಗೆ ಕೂಲಿ ನೀಡುವುದು ವಿಳಂಬವಾಗಿದ್ದು, ಎನ್ಎಂಆರ್‌ನ್ನು ಎರಡು ಬಾರಿ ಮಾಡಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.

“ಕೂಲಿಕಾರರ ಆಧಾರ್ ಕಾರ್ಡ್ ಮತ್ತು ಜಾಬ್ ಕಾರ್ಡ್‌ನಲ್ಲಿ ಹೆಸರು ಬದಲಾಗಿದ್ದು, ಅದನ್ನು ಆದಷ್ಟು ಬೇಗ ಸರಿಪಡಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದರೆ ಸ್ವೀಕರಿಸುತ್ತಿಲ್ಲ. ದುಡಿದ ಕೆಲಸಗಳಿಗೆ ಸರಿಯಾದ ಸಮಯಕ್ಕೆ ಕೂಲಿ ಪಾವತಿಸಲು ವಿಳಂಬ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಗ್ರಾಕೂಸ ಸದಸ್ಯ ಮೌನೇಶ ರಾಗಲಪರ್ವಿ, ಇಂದ್ರಮ್ಮ, ರಂಗಮ್ಮ, ಗದ್ದೆಮ್ಮ ಮರಿಯಮ್ಮ, ಅಂಬ್ರಮ್ಮ ಸೇರಿದಂತೆ ವಿವಿಧ ಗ್ರಾಮಗಳ ಕೂಲಿಕಾರರು ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app