ರಾಯಚೂರು | ಬಡವರಿಗೆ ಭೂಮಿ-ವಸತಿ ನೀಡಲು ನೂರೆಂಟು ನೆಪಗಳು: ಆಕ್ರೋಶ

  • 'ಬಗರ್ ಹುಕಂ ಸಾಗುವಳಿ ಭೂಮಿ ಉಳ್ಳವರ ಪಾಲಾಗುತ್ತಿದೆ' 
  • ಭೂಮಿ ಮಂಜೂರಾತಿಗಾಗಿ ಅಧಿಕಾರಿಗಳ ಕಚೇರಿಗೆ ಅಲೆದು ಸಾಕಾಗಿದೆ

ಶ್ರೀಮಂತರಿಗೆ ಭೂಮಿ ಕೊಡಲು ಯಾವುದೇ ಕಾನೂನು ತೊಡಕಿಲ್ಲದಿದ್ದರೂ, ಬಡವರಿಗೆ ಭೂಮಿ-ವಸತಿ ನೀಡಲು ಸರ್ಕಾರ ನೂರೆಂಟು ನೆಪಗಳನ್ನು ಹೇಳುತ್ತಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆರೋಪಿಸಿದೆ. 

ಗುರುವಾರ ರಾಯಚೂರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಮಾರೆಪ್ಪ ಹರವಿ, “ರಾಯಚೂರು ಜಿಲ್ಲೆಯಲ್ಲಿ ಬಗರ್ ಹುಕಂ ಸಾಗುವಳಿ ಹೆಚ್ಚಾಗಿ ಉಳ್ಳವರ ಪಾಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಎರಡು-ಮೂರು ತಲೆ ಮಾರುಗಳಿಂದ ಸರ್ಕಾರಿ ಗೋಮಾಳ, ಖರಾಬ್ ಇನ್ನಿತರೆ ಭೂಮಿಗಳನ್ನು ಹಸನುಗೊಳಿಸಿ ಬದುಕು ಸಾಗಿಸುತ್ತಿರುವ ಸಾವಿರಾರು ಕುಟುಂಬಗಳು ಫಾರಂ 50, 53 ಹಾಗೂ 57ರಲ್ಲಿ ಸರ್ಕಾರಕ್ಕೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅದರೂ, ಅವರ ಹೆಸರಿಗೆ ಹಕ್ಕುಪತ್ರ ನೀಡಿಲ್ಲ” ಎಂದು ಆರೋಪಿಸಿದ್ದಾರೆ.

“ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಲವು ವರ್ಷಗಳಿಂದ ರಾಜ್ಯದ ಭೂಮಿ ಮತ್ತು ವಸತಿ ರಹಿತರ ಹಕ್ಕುಗಳಿಗಾಗಿ ಹೋರಾಡುತ್ತಿದೆ. ಅಲ್ಲದೆ, ಈ ನಿಟ್ಟಿನಲ್ಲಿ ಸಮಿತಿಯು ಹಲವು ಮೂಲಭೂತ ಬದಲಾವಣೆಗಾಗಿ ಸರ್ಕಾರಗಳ ಮೇಲೆ ಹಲವು ರೀತಿಯ ಒತ್ತಾಯಗಳನ್ನು ಮಾಡುತ್ತಾ ಬರುತ್ತಿದೆ. ಆದರೂ ಯಾವುದೇ ಸ್ಪಂದನೆ ದೊರೆತಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು. 

“ಭೂರಹಿತರಿಗೆ ಭೂಮಿಯ ಮಂಜೂರಾತಿ ಆಗುತ್ತಿಲ್ಲ. ಮಂಜೂರಾತಿಗಾಗಿ ಡಿ.ಸಿ, ತಹಸೀಲ್ದಾರ್ ಕಚೇರಿ ಮತ್ತು ಶಾಸಕರ ಕಚೇರಿಗಳನ್ನು ಅಲೆದು ಸಾಕಾಗಿದೆ. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಭೂಮಿ ನೀಡದ ಸರ್ಕಾರಗಳು ಉಳ್ಳವರಿಗೆ, ಟ್ರಸ್ಟ್‌ಗಳಿಗೆ ಮತ್ತು ಜಾತಿವಾರು ಮಠಗಳಿಗೆ ನೀಡುತ್ತಿವೆ. ಉಳುವವನೇ ಭೂಮಿಯ ಒಡೆಯ ಎಂಬ ಘೋಷಣೆಯಂತೆ ಭೂಮಿ-ವಸತಿ ಜಾಗಗಳು ರಾಜಕಾರಣಿಗಳು ಮತ್ತು ಇವರ ಹಿಂಬಾಲಕರು ಹಾಗೂ ಹಣ ನೀಡುವವರ ಪಾಲಾಗುತ್ತಿವೆ” ಎಂದರು.

“ಭೂಮಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿ ಹಲವು ದಶಕಗಳು ಕಳೆದರೂ ನೆತ್ತಿಯ ಮೇಲೊಂದು ಸೂರು, ಜೀವನ ಸಾಗಿಸುವ ಭೂಮಿ ಬಡ ಜನರಿಗೆ ದೊರೆಯುತ್ತಿಲ್ಲ" ಎಂದರು.

"ಯಾವ ರೀತಿಯ ಹೋರಾಟ-ಕಾರ್ಯಕ್ರಮ ರೂಪಿಸಬೇಕೆಂದು ಚರ್ಚೆ ಮಾಡಿಕೊಂಡು ತೀರ್ಮಾನಿಸಬೇಕಾಗಿದೆ. ಭೂಮಿ-ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಮುಖಂಡರುಗಳು ಹಾಗೂ ಸ್ಥಳೀಯ ಸಂಘಟನೆಗಳ ಮುಖಂಡರು ಸೆಪ್ಟೆಂಬರ್ 26ರಂದು ಸಭೆ ಸೇರಲಿದ್ದಾರೆ. ಸಭೆಯಲ್ಲಿ ಭೂಮಿವಸತಿ ವಂಚಿತರೆಲ್ಲರೂ ಪಾಲ್ಗೊಳ್ಳಬೇಕು" ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಐದು ಕೋಟಿ ರೂ. ವೆಚ್ಚದಲ್ಲಿ ಫ್ರೀಡಂ ಪಾರ್ಕ್ ಅಭಿವೃದ್ಧಿ: ಬಿ.ವೈ ರಾಘವೇಂದ್ರ

ಭೂಮಿಗಾಗಿ ಫಾರಂ ನಂ. 50, 53, ಮತ್ತು 57 ರಲ್ಲಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರೂ ಮತ್ತು ವಸತಿಗಾಗಿ 94ಸಿ 94ಸಿಸಿ ಹಾಗೂ ಅರಣ್ಯ ಹಕ್ಕು ಕಾಯ್ದೆಯನ್ವಯ ಅರ್ಜಿ ಸಲ್ಲಿಸಿರುವ ಉಳುವ ಭೂಮಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ನೊಂದವೆಲ್ಲರೂ ಈ ಸಭೆಯಲ್ಲಿ ಪಾಲ್ಗೊಳ್ಳಲು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಈ ಮೂಲಕ ಮನವಿಯನ್ನು ಮಾಡಿಕೊಳ್ಳುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆಯ ಆಂಜನೇಯ ಕುರುಬ ದೊಡ್ಡಿ, ರಾಘವೇಂದ್ರ ಗ್ರಾಕೂಸ, ಮುದಕಪ್ಪ ನಾಯಕ್, ಷಣ್ಮುಖಪ್ಪ ಘಂಟೆ ಹಾಜರಿದ್ದರು.

ಮಾಸ್ ಮೀಡಿಯಾ ರಾಯಚೂರು ಜಿಲ್ಲಾ ಸಂಯೋಜಕ ರಫಿ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
1 ವೋಟ್