ರಾಯಚೂರು | ರಾಷ್ಟ್ರಧ್ವಜಕ್ಕೆ ಅಪಮಾನ: ಕ್ಷಮೆ ಯಾಚಿಸಿದ ಬಿಜೆಪಿ ಶಾಸಕ

  • 'ಹರ್ ಘರ್ ತಿರಂಗಾ' ಕುರಿತು ವಿಡಿಯೋ ಮಾಡಿದ್ದ ಶಾಸಕ
  • ಟೇಬಲ್‌ ಮೇಲೆ ರಾಷ್ಟ್ರಧ್ವಜ ಹಾಕಿ ಅಪಮಾನ

ಬಿಜೆಪಿ ಶಾಸಕರೊಬ್ಬರು ತಮ್ಮ ಕಚೇರಿಯ ಟೇಬಲ್‌ ಮೇಲೆ ರಾಷ್ಟ್ರಧ್ವಜವನ್ನು ಹಾಸಿ ವಿಡಿಯೋ ಮಾಡಿದ್ದು, ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಶಾಸಕರು ಸ್ಪಷ್ಟನೆ ನೀಡಿ, ಕ್ಷಮೆಯಾಚಿಸಿದ್ದಾರೆ. 

ರಾಯಚೂರು ನಗರ ಕ್ಷೇತ್ರದ ಶಾಸಕ ಡಾ.‌ ಶಿವರಾಜ್ ಪಾಟೀಲ್ ಅವರು ತಮ್ಮ ಟೇಬಲ್‌ ಮೇಲೆ ರಾಷ್ಟ್ರಧ್ವಜ ಹಾಕಿಕೊಂಡು ವಿಡಿಯೋ ಮಾಡಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ರಾಷ್ಟ್ರಾದ್ಯಂತ 'ಹರ್ ಘರ್ ತಿರಂಗಾ' ಅಭಿಯಾನದ ಅಡಿಯಲ್ಲಿ ಮೂರು ದಿನಗಳ ಕಾಲ ಪ್ರತಿಮನೆಯ ಮೇಲೆ ತಿರಂಗಾ ಹಾರಿಸಲು ಕೇಂದ್ರ ಸರ್ಕಾರ ಕರೆಕೊಟ್ಟಿದೆ. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿಯೂ ಎಲ್ಲರೂ ರಾಷ್ಟ್ರಧ್ವಜ ಹಾರಿಸುವಂತೆ ಶಾಸಕ ಶಿವರಾಜ್ ಪಾಟೀಲ್ ವಿಡಿಯೋ ಮಾಡಿ ಮನವಿ ಮಾಡಿದ್ದಾರೆ. 

ವಿಡಿಯೋದಲ್ಲಿ ರಾಷ್ಟ್ರ ಧ್ವಜವನ್ನು ತಮ್ಮ ಟೇಬಲ್ ಮೇಲೆ ಹಾಕಿ ಅದರ ಮೇಲೆ ಕೈಇಟ್ಟು ಮಾತನಾಡಿದ್ದಾರೆ. ರಾಷ್ಟ್ರಧ್ವಜವನ್ನು ಟೇಬಲ್‌ ಮೇಲೆ ಹಾಸುವ ಬಟ್ಟೆಯಂತೆ ಬಳಿಸಿಕೊಂಡಿರುವುದು ರಾಷ್ಟಧ್ವಜ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಶಾಸಕರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. 

ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲು ಅದರದ್ದೇ ಆದ ಶಿಷ್ಟಾಚಾರಗಳಿವೆ. ಆದರೆ, ಶಾಸಕರು ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಅವರ ನಡೆ ಖಂಡನೀಯ ಎಂದು ಕಾಂಗ್ರೆಸ್‌ ಯುವ ಘಟಕದ ಕಾರ್ಯಕರ್ತರು ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕ್ಷಮೆ ಕೇಳಿದ ಶಾಸಕ

ರಾಷ್ಟ್ರಧ್ವಜ ಶಾಸಕರು ಅಪಮಾನ ಮಾಡಿದ್ದಾರೆಂದು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಶಾಸಕ ಡಾ.‌ಶಿವರಾಜ ಪಾಟೀಲ್ ಕ್ಷಮೆ ಕೇಳಿದ್ದಾರೆ. ಮತ್ತೊಂದು ವಿಡಿಯೋ ಬಿಡುಗಡೆ ಮಾಡಿರುವ ಶಾಸಕರು, "ತಾವು ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ರಾಷ್ಟ್ರಧ್ವಜವನ್ನು ಇಟ್ಟಿದ್ದದ್ದು ಕೆಲವರಿಗೆ ನೋವಾಗಿದೆ. ನನ್ನ ಉದ್ದೇಶ ಅಪಮಾನ ಮಾಡುವುದಾಗಿರಲಿಲ್ಲ. ಪ್ರತಿಯೊಬ್ಬರು ಆಗಸ್ಟ್‌ 13ರಿಂದ 15ರವರೆಗೆ ರಾಷ್ಟ್ರಧ್ವಜ ಹಾರಿಸಬೇಕೆಂಬುದುನ್ನು ಮನವರಿಕೆ ಮಾಡಿಕೊಡುವುದಾಗಿತ್ತು. ಬೇರೇನು ಉದ್ದೇಶವಿರಲಿಲ್ಲ. ತಮ್ಮ ನಡೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ" ಎಂದು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
7 ವೋಟ್