ರಾಯಚೂರು | ಬುದ್ದಿನ್ನಿ ಶಾಲೆಯ ವಿದ್ಯಾರ್ಥಿಗಳಿಗೆ ವಸತಿ ನಿಲಯ ಸೌಲಭ್ಯ ಕಲ್ಪಿಸುವಂತೆ ಆಗ್ರಹ

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬುದ್ದಿನ್ನಿ ಗ್ರಾಮಕ್ಕೆ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವಸತಿ ನಿಲಯ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಮಸ್ಕಿ ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದ್ದಾರೆ. 

ತಾಲೂಕು ಕೇಂದ್ರದಿಂದ 12 ಕಿ.ಮೀ ದೂರದಲ್ಲಿರುವ ಬುದ್ದಿನ್ನಿ.ಎಸ್ ಗ್ರಾಮದಲ್ಲಿ  ಪ್ರೌಢಶಾಲೆಯಿದೆ. ಶಾಲೆಯಲ್ಲಿ ಹೂವಿನಬಾವಿ, ಮುದಬಾಳ, ಸಾನಬಾಳ, ಬೆಂಚಮರಡಿ, ಇಲಾಲಪುರ, ಹರ್ವಾಪುರ, ತುಪ್ಪದೂರು, ಕಾಟಗಲ್ ಗ್ರಾಮಗಳ 180ಕ್ಕೂ ಹೆಚ್ಚು ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ. 

Eedina App

ಶಾಲೆಯಲ್ಲಿನ ಸೌಕರ್ಯಗಳ ಕೊರತೆ ಕುರಿತು ಈ ದಿನ.ಕಾಮ್‌ ಜೊತೆ ಮಾತನಾಡಿದ ನಾಗರೆಡ್ಡಪ್ಪ ದೇವರಮನಿ, "ಬುದ್ದಿನ್ನಿ ಗ್ರಾಮಕ್ಕೆ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಕ್ಕಪಕ್ಕದ ಗ್ರಾಮಗಳಿಂದ ಬರುತ್ತಾರೆ. ಅವರೆಲ್ಲರೂ 6-7 ಕಿ.ಮೀ ನಡೆದುಕೊಂಡು ಬರಬೇಕಾಗಿದೆ. ಪುಸ್ತಕಗಳ ಬ್ಯಾಗ್‌ ಹೊತ್ತು, ಅಷ್ಟು ದೂರ ನಡೆಯುವುದು ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ" ಎಂದಿದ್ದಾರೆ. 

"ಸಾರಿಗೆ ಸೌಲಭ್ಯದ ಕೊರತೆ, ಗುಳೆ ಸಮಸ್ಯೆ, ಆರ್ಥಿಕ ಸಂಕಷ್ಟ, ಗುಡ್ಡಗಾಡು ಹಾಗೂ ಬರಪೀಡಿತ ಪ್ರದೇಶದ ಕಾರಣ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಈ ಭಾಗದ ನೂರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯದೇ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ" ಎಂದು ಅವರು ಹೇಳಿದರು. 

AV Eye Hospital ad

"ಆರ್ಥಿಕವಾಗಿ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳು, ರೈತರು ಹಾಗೂ ಕೃಷಿ ಕೂಲಿಕಾರ್ಮಿಕರೇ ಈ ಭಾಗದಲ್ಲಿ ಹೆಚ್ಚಾಗಿದ್ದಾರೆ. ಅವರ ಮಕ್ಕಳ ಶೈಕ್ಷಣಿಕ ಬದುಕು ನಿರ್ಲಕ್ಷ್ಯಕ್ಕೊಳಗಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕು ಮತ್ತು ಸುರಕ್ಷತೆ ದೃಷ್ಟಿಯಿಂದ ಅವಶ್ಯಕ ಶೈಕ್ಷಣಿಕ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು" ಎಂದು ಅವರು ಒತ್ತಾಯಿಸಿದರು. 

"ಕಳೆದ ಹಲವು ವರ್ಷಗಳಿಂದ ಈ ಭಾಗದ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಾರಿಗೆ ಸಂಪರ್ಕ ಕೊರತೆ ಸೇರಿದಂತೆ ಹತ್ತಾರು ಸಮಸ್ಯೆಗಳಿದ್ದರೂ, ಮಳೆ, ಚಳಿ ಹಾಗೂ ಬಿಸಿಲಿನಲ್ಲಿ ಶಾಲೆಗೆ ತೆರಳುತ್ತಾರೆ. ಮಕ್ಕಳು ಅನುಭವಿಸುತ್ತಿರುವ ಸಮಸ್ಯೆಯನ್ನು ಪರಿಗಣಿಸಿ ಅವರಿಗೆ ವಿದ್ಯಾರ್ಥಿ ವಸತಿ ನಿಲಯ ಒದಗಿಸಬೇಕು. ಆ ಮೂಲಕ, ವಿದ್ಯಾರ್ಥಿಗಳ ಶಿಕ್ಷಣ ಮತ್ತು ಭವಿಷ್ಯಕ್ಕೆ ನೆರವಾಗಬೇಕು" ಎಂದು ಒತ್ತಾಯಿಸಿದ್ದಾರೆ.

ಮನವಿ ಸಲ್ಲಿಸುವ ವೇಳೆ ಎಸ್ ಮೌನೇಶ ಬುದ್ದಿನ್ನಿ, ಬಸವಂತ ಹಿರೇಕಡಬೂರು, ಬಸವರಾಜ ಇಳಿಗೇರ ಬುದ್ದಿನ್ನಿ, ಸಕರಪ್ಪ ಜವಳಗೇರ, ದುರುಗಪ್ಪ ಸಾನಬಾಳ, ಮಲ್ಲಪ್ಪ ಸಾನಬಾಳ, ಬಸನಗೌಡ ಅನಂದಗಲ್, ಶರಣಪ್ಪ ಅನಂದಗಲ್, ಮಲ್ಲನಗೌಡ ದೇವರಮನಿ, ಯಮನಪ್ಪ ಉಪ್ಪಲದೊಡ್ಡಿ ನೀರಘಂಟಿ ಸೇರಿದಂತೆ ಹಲವರು ಇದ್ದರು.

ರಫಿ ಗಂಗಾವತಿ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app