ರಾಯಚೂರು ಜಿಲ್ಲೆಯ ಬಡವರ ಬದುಕಿನ ತಟ್ಟೆಗಳಿಗೆ ಅನ್ನ ಬೀಳುವುದೆಂದು?

ಕಾರ್ಖಾನೆಗಳ ನಿರ್ಮಾಣಕ್ಕೆ ಭೂಮಿ ಕೊಡಲು ರೈತರು ಒಪ್ಪಿದರು. ಕಂಪನಿಗಳಲ್ಲಿ ಕೆಲಸ ಮಾಡಲು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಬೇಕು ಎಂದು ಕರಾರು ಕೂಡ ಮಾಡಿಕೊಳ್ಳಲಾಯಿತು. ಆದರೆ, ರೈತರು ಭೂಮಿ ಕಳೆದುಕೊಂಡರೇ ವಿನಃ, ಸ್ಥಳೀಯರಿಗೆ ಉದ್ಯೋಗ ಸಿಗಲಿಲ್ಲ

ರಾಜ್ಯದ ಪ್ರಮುಖ ಜಿಲ್ಲೆಗಳಲ್ಲೊಂದು ರಾಯಚೂರು. ಕೈಗಾರಿಕೆಗಳನ್ನು ಈ ಹಿಂದೆ ಸ್ಥಾಪಿಸಲಾಗಿತ್ತು. ಉತ್ತರಕ್ಕೆ ಕೃಷ್ಣ ಮತ್ತು ದಕ್ಷಿಣಕ್ಕೆ ತುಂಗಭದ್ರ ನದಿಗಳು ಹರಿಯುವ ಜಿಲ್ಲೆ. ಹಟ್ಟಿ ಚಿನ್ನದಗಣಿ, ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರ, 17 ಖಾಸಗಿ ಕಂಪನಿಗಳು, ನೂರಾರು ರೈಸ್‌ ಮಿಲ್ಲುಗಳ ನೆಲವಿದು. ಆದರೇನಂತೆ? ಸ್ಥಳೀಯರು ಬದುಕು ಕಟ್ಟಿಕೊಳ್ಳಲು ಯಾವ ಆಸರೆಯೂ ಇಲ್ಲಿ ಸಿಗುತ್ತಿಲ್ಲ. ಕೈಗಾರಿಕೆಗಳಿಗೆ ಜಮೀನು ಕಳೆದುಕೊಂಡಿದ್ದಷ್ಟೇ 'ಲಾಭ’. ಪರ್ಯಾಯ ನೆಲೆ ಕನಸಾಗಿ ಉಳಿಯಿತು. ಜಿಲ್ಲೆಯ ಜನರು ಕೂಲಿ ಕಂಬಳ, ಉದ್ಯೋಗ ಅರಸಿ ನಾನಾ ನಗರಗಳಿಗೆ ಗುಳೆ ಹೋಗುವುದು ಈಗಲೂ ನಿಂತಿಲ್ಲ.

1956ರಲ್ಲಿ ರಾಯಚೂರು ಜಿಲ್ಲಾ ಕೇಂದ್ರವಾಯಿತು. 66 ವರ್ಷ ಕಳೆದರೂ ಜನರ ಬದುಕು ಹಸನಾಗಲಿಲ್ಲ. ಇದಕ್ಕೆಲ್ಲ ಇಲ್ಲಿನ ಜನಪ್ರತಿನಿಧಿಗಳೇ ಹೊಣೆಗಾರರು. ಹಿಂದೊಮ್ಮೆ 1994-95ರಲ್ಲಿ ಎಚ್.ಡಿದೇವೆಗೌಡರು ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿನ ಜನರ ಒತ್ತಾಯದಿಂದ ಕೈಗಾರಿಕಾ ಬೆಳವಣಿಗೆ ಕೇಂದ್ರವನ್ನು ಸ್ಥಾಪಿಸಲಾಗಿತ್ತು.

Eedina App

ಫ್ಯಾಕ್ಟರಿಗಳನ್ನು ಆರಂಭಿಸಲು ಬೇರೆ ಬೇರೆ ಕಡೆಯಿಂದ ಉದ್ಯಮಿಗಳು ಇಲ್ಲಿಗೆ ಬಂದು ನೆಲೆಸಿದರು.   ಜಮೀನು ಖರೀದಿಗೆ ಮುಂದಾದರು. ಆಗಿನ ಜಿಲ್ಲಾಧಿಕಾರಿಗಳು ಕಂಪನಿ ಮಾಲೀಕರನ್ನು ಮತ್ತು ಸುತ್ತಮುತ್ತಲ ಹಳ್ಳಿಗಳ ಜನರನ್ನು ಸೇರಿಸಿ ಸಾರ್ವಜನಿಕ ಸಭೆ (Public Hearing)  ನಡೆಸಿದರು. ಗ್ರಾಮಸ್ಥರು ಮತ್ತು ಮಾಲೀಕರ ಮಧ್ಯೆ ಮಾತುಕತೆಯಾಗಿ ಭೂಮಿ ಕೊಡಲು ಒಪ್ಪಂದ ಆಯಿತು. ಜೊತೆಗೆ ಇಲ್ಲಿಯ ಕಂಪನಿಗಳಲ್ಲಿ ಕೆಲಸ ಮಾಡಲು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಬೇಕು ಎಂದು ಕರಾರು ಕೂಡ ಮಾಡಿಕೊಳ್ಳಲಾಯಿತು. ಸರೋಜಿನಿ ಮಹಿಷಿ ವರದಿ ಕೂಡ ಶೇಕಡ 100% ರಷ್ಟು “ಡಿ” ಗ್ರೂಪ್‌ ಉದ್ಯೋಗಗಳನ್ನು ಸ್ಥಳೀಯರಿಗೆ ಕೊಡಬೇಕೆಂದು ಹೇಳಿದೆ. ಆದರೆ, ಇಲ್ಲಿನ ವಾಸ್ತವ ಪರಿಸ್ಥಿತಿ ಮಹಿಷಿ ವರದಿಯಿಂದ ದೂರವೇ ಉಳಿಯಿತು.

ಶಕ್ತಿನಗರ‍‍ ‍ಮತ್ತು ಯರಮರಸ್‌ ಕೈಗಾರಿಕಾ ಪ್ರದೇಶದಲ್ಲಿ 17 ರಾಸಾಯನಿಕ ಕಂಪನಿಗಳಿವೆ. ಮೂರು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಒಂದು ಸಾವಿರ ಕಾರ್ಮಿಕರು ಮಾತ್ರ ಸ್ಥಳೀಯರು.. ಅವರೆಲ್ಲರೂ “ಡಿ” ಗ್ರೂಪ್ ನೌಕರರು. ಉಳಿದ ಎರಡು ಸಾವಿರ ಕಾರ್ಮಿಕರು ಹೊರ ರಾಜ್ಯಗಳಾದ ಬಿಹಾರ, ಒರಿಸ್ಸಾ, ಉತ್ತರಪ್ರದೇಶ, ಉತ್ತರದ ರಾಜ್ಯಗಳವರು. “ಎ, ಬಿ, ಸಿ” ಗ್ರೂಪ್‌ ಹುದ್ದೆಗಳಲ್ಲಿ ಕೂಡ ಅವರೇ ಇದ್ದಾರೆ. ಆದರೆ ಅವರಿಗೂ ಕಾರ್ಮಿಕರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳು ಕನಸಿನ ಗಂಟಾಗಿವೆ. ಅವರೆಲ್ಲರಿಗೂ ಪಿಎಫ್‌, ಇಎಸ್‌ಐ, ವಾರದ ರಜೆ, ತಿಂಗಳ ರಜೆ ಇಲ್ಲ, ಸರ್ಕಾರಿ ರಜೆಯೂ ಇಲ್ಲ. ನಿತ್ಯ 12 ತಾಸು ಕೆಲಸ. ಶೋಷಣೆಯದೇ ದರ್ಬಾರು.

AV Eye Hospital ad

ಇನ್ನು ಸ್ಥಳೀಯರಿಗೆ ಉದ್ಯೋಗಗಳು ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೆ ಅದು ಗುತ್ತಿಗೆ ಆಧಾರದ ಉದ್ಯೋಗಗಳು. ಇವರನ್ನು ಕೆಲಸದಿಂದ ತೆಗೆದು ಹಾಕಿದರೂ ಯಾರೂ ಕೇಳುವಂತಿಲ್ಲ. ಆಡಳಿತ ಮಂಡಳಿಯ ವಿರುದ್ಧ ಹೋರಾಟ ಮಾಡುವಂತಿಲ್ಲ. ಧ್ವನಿ ಎತ್ತಿದರೆ ಕೆಲಸದಿಂದ ತೆಗೆದು ಹಾಕುತ್ತಾರೆ. ಈ ರೀತಿಯಲ್ಲಿ ಕಾರ್ಮಿಕರನ್ನು ಶೋಷಣೆ ಮಾಡಿಕೊಂಡು ಬರುತ್ತಿವೆ ಇಲ್ಲಿನ ಕಂಪನಿಗಳು.

ಈ ಫ್ಯಾಕ್ಟರಿಗಳಿಂದ ಹೊರ ಬರುವ ರಾಸಾಯನಿಕ ತ್ಯಾಜ್ಯಗಳ ದುರ್ವಾಸನೆಯಿಂದಾಗಿ ಜನರ ಬದುಕು ನರಕವಾಗಿದೆ. ರಾತ್ರಿಯಾದರೆ ಸಾಕು ಸುತ್ತಮುತ್ತಲಿನ ಹಳ್ಳಿಗಳ ಜನ ಬಾಗಿಲು ಜಡಿದು ಮನೆಯೊಳಗೆ ಬಂದಿಗಳಾಗುತ್ತಾರೆ. ಈ ವಾಸನೆ ಸಾರ್ವಜನಕರ ಆರೋಗ್ಯದ ಮೇಲೂ ಕೆಟ್ಟ ಪ್ರಭಾವ ಬೀರಿದೆ. 

ಇನ್ನೊಂದೆಡೆ ರಾಜ್ಯ ಸರ್ಕಾರಿ ಒಡೆತನದ 'ಕರ್ನಾಟಕ ಪವರ್‌ ಕಾರ್ಪೋರೇಶನ್‌ ಲಿಮಿಟೆಡ್‌'ನ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ್ದು ಮತ್ತೊಂದು ಕತೆ. ಸುಮಾರು 30 ವರ್ಷಗಳಿಂದ ಕೆಲಸ ಮಾಡುತ್ತಿದ್ದ 1,500 ಮಂದಿ ಕಾರ್ಮಿಕರನ್ನು ಕಳೆದ ವರ್ಷ ಕೊರೊನಾ ಲಾಕ್‌ಡೌನ್ ನೆಪ ಹೇಳಿ ಏಕಾಏಕಿ ಕೆಲಸದಿಂದ ತೆಗೆದುಹಾಕಲಾಯಿತು. ಈ ಕಾರ್ಮಿಕರು ತಿಂಗಳುಗಟ್ಟಲೇ ಹೋರಾಟ ನಡೆಸಿದರೂ ಸರ್ಕಾರ ಕಿವಿಗೊಡಲಿಲ್ಲ. ಇವರ ಜೊತೆಗೂಡಿ ದೊಡ್ಡ ಮಟ್ಟದ ಹೋರಾಟವನ್ನು ರೂಪಿಸಿ ಪ್ರತಿಭಟಿಸಲು ಯಾವುದೇ ಪ್ರಮುಖ ಕಾರ್ಮಿಕ ಸಂಘಟನೆಯೂ ಮುಂದೆ ಬಂದಿಲ್ಲ. ಈ ಅನ್ಯಾಯದ ವಿರುದ್ಧ ಜಿಲ್ಲೆಯ 7 ಮಂದಿ ಶಾಸಕರು, ಒಬ್ಬ ಸಂಸದ ಈವರೆಗೂ ತುಟಿ ಬಿಚ್ಚಿಲ್ಲ.

ವಿದ್ಯುತ್ ಶಾಖೋತ್ಪನ್ನ ಕೇಂದ್ರದ ಸ್ಥಾಪನೆಯಿಂದಾಗಿ ಇಲ್ಲಿನ ಪರಿಸರ ನಾಶವಾಯಿತು. ಇಲ್ಲಿನ ರೈತರು-ಕೃಷಿ ಕಾರ್ಮಿಕರು ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಂಡರು. ರಾಸಾಯನಿಕ ಹೊಗೆ ಬೆರೆತ ವಿಷಗಾಳಿ, ಕೆಮಿಕಲ್ಸ್ ಕಲಬೆರೆಕೆ ಆಗಿರುವ ನೀರು, ಧಗೆಯಿಂದ ಏರಿದ ಉಷ್ಣಾಂಶ  ಜಿಲ್ಲೆಯ ಕೃಷಿ ಮತ್ತು ಪರಿಸರವನ್ನು ಹಾಳು ಮಾಡಿವೆ.

ಶಾಖೋತ್ಪನ್ನ ಕೇಂದ್ರದಿಂದ ಇಷ್ಟೆಲ್ಲ ಸಮಸ್ಯೆಗಳಿದ್ದರೂ, ಗಾಯದ ಮೇಲೆ ಬರೆ ಎಳೆವಂತೆ ಮತ್ತೊಂದು ಯರಮರಸ್‌ ಶಾಖೋತ್ಪನ್ನ ಕೇಂದ್ರ ಘಟಕವನ್ನು ಪ್ರಾರಂಭಿಸಲು 2010ರಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದಾಗಿತ್ತು. ಯರಮರಸ್‌ ಶಾಖೋತ್ಪನ್ನ ಕೇಂದ್ರ ಸ್ಥಾಪಿಸಿದರೆ ಇಲ್ಲಿನ ಕೃಷಿ ಮತ್ತು ಪರಿಸರ ಮತ್ತಷ್ಟು ನೆಲ ಕಚ್ಚುತ್ತದೆ ಎಂದು ಇಲ್ಲಿನ ರೈತರು ಮತ್ತು ಪರಿಸರವಾದಿಗಳು ದೊಡ್ಡ  ಹೋರಾಟ ಮಾಡಿದರು. ಆದರೂ, ಯಾವುದೇ ಪ್ರಯೋಜನ ಆಗಲಿಲ್ಲ.

ಕೇಂದ್ರದ ಶಂಕುಸ್ಥಾಪನೆಗೆ ಆಗಮಿಸಿದ್ದ ಯಡಿಯೂರಪ್ಪ, “ಈ ಶಾಖೋತ್ಪನ್ನ ಕೇಂದ್ರ ಇಲ್ಲಿ ಸ್ಥಾಪನೆಯಾದರೆ ಇಲ್ಲಿನ ಸುತ್ತಮುತ್ತಲಿರುವ ಹಳ್ಳಿಯ ಜನರಿಗೆ, ಸ್ಥಳೀಯರಿಗೆ ಉದ್ಯೋಗಗಳು ಸಿಗುತ್ತವೆ. ಸರ್ಕಾರಿ ಕೇಂದ್ರವಾದ ಕಾರಣ ಇಲ್ಲಿನ ರೈತರಿಗೆ ಉಚಿತವಾಗಿ 24 ತಾಸು ವಿದ್ಯತ್ ಲಭಿಸುತ್ತದೆ. ವಲಸೆ ಹೋಗುವುದು ಬಿಟ್ಟು ಇಲ್ಲಿಯೇ ಬದುಕು ಕಟ್ಟಿಕೊಳ್ಳಬಹುದು“ ಎಂದು ಭಾಷಣ ಜಡಿದು ಹೊರಟರು.

ಆದರೆ, ಕರ್ನಾಟಕ ಪವರ್‌ ಕಾರ್ಪೋರೇಷನ್‌ ಲಿಮಿಟೆಡ್‌ ನಡೆಸುತ್ತಿದ್ದ ಈ ಯರಮರಸ್‌ ಶಾಖೋತ್ಪನ್ನ ಕೇಂದ್ರವನ್ನು “ಪವರ್‌ ಮ್ಯಾಕ್‌“ ಎನ್ನುವ ಖಾಸಗಿ ಕಂಪನಿಯ ಒಡೆತನಕ್ಕೆ ಒಪ್ಪಿಸಲಾಯಿತು. ಸುತ್ತಮುತ್ತಲಿನ ಐದಾರು ಹಳ್ಳಿಗಳ ಜನರಿಗೆ ಗುತ್ತಿಗೆ ಆಧಾರದಲ್ಲಿ “ಡಿ” ಗ್ರೂಪ್  ಉದ್ಯೋಗಗಳನ್ನು ನೀಡಲಾಗಿದೆ. ಅವರ್ಯಾರಿಗೂ ಉದ್ಯೋಗದ ಭದ್ರತೆ ಇಲ್ಲ. ಉಳಿದವರು ಬಿಹಾರ, ಒರಿಸ್ಸಾ, ರಾಜ್ಯಗಳವರು “ಎಬಿಸಿ” ಗ್ರೂಪ್‌ಗಳ ಉದ್ಯೋಗಿಗಳು. ಅಂದಿನ ಮುಖ್ಯಮಂತ್ರಿ ನೀಡಿದ್ದ ಭರವಸೆಯ 24 ತಾಸು ವಿದ್ಯುತ್‌ ಸಿಗಲಿಲ್ಲ, ಇಲ್ಲಿನ ಜನರಿಗೆ ಕೈ ತುಂಬ ಉದ್ಯೋಗಗಳು ದೊರೆಯಲಿಲ್ಲ.

ಹಟ್ಟಿ ಚಿನ್ನದಗಣಿ, ರಾಯಚೂರು ಶಾಖೋತ್ಪನ್ನ ಕೇಂದ್ರ, ಯರಮರಸ್‌ ಶಾಖೋತ್ಪನ್ನ ಕೇಂದ್ರ, 18 ರಾಸಾಯನಿಕ ಖಾಸಗಿ ಕಂಪನಿಗಳು, ನೂರಾರು ಭತ್ತದ ರೈಸ್‌ ಮಿಲ್ಲುಗಳು ಇದ್ದೂ ಇಲ್ಲಿನ ಮಣ್ಣಿನ ಮಕ್ಕಳು ಮಾತ್ರ ಪುಣೆ, ಬಾಂಬೆ, ಹೈದರಾಬಾದ್‌ ನಗರಗಳಿಗೆ ವಲಸೆ ಹೋಗುವುದು ತಪ್ಪಲಿಲ್ಲ.

ಎರಡು ತಿಂಗಳ ಹಿಂದೆ (ಆಗಸ್ಟ್‌) ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನಿಂದ ಬೆಂಗಳೂರಿಗೆ ವಲಸೆ ಹೊರಟಿದ್ದ ನತದೃಷ್ಟ ಬಡ ಮಂದಿಯನ್ನು ಹೊತ್ತಿದ್ದ ಕ್ರೂಸರ್ ವಾಹನವು ತುಮಕೂರು ಬಳಿ ಲಾರಿಗೆ ಡಿಕ್ಕಿ ಹೊಡೆದ ಅಪಘಾತ ಸಂಭವಿಸಿತು. ಒಂಬತ್ತು ಮಂದಿ ಕೂಲಿಕಾರು ಸ್ಥಳದಲ್ಲೇ ಸಾವನ್ನಪ್ಪಿದರು. ಇನ್ನುಳಿದವರು ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸಿದರು. ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವುದೇ ಪರಿಹಾರ ಪ್ರಕಟಿಸಲಿಲ್ಲ. ಸಂತಾಪ ಕೂಡ ಸೂಚಿಸಲಿಲ್ಲ. ತಮ್ಮದೇ ಜಿಲ್ಲೆಯ ಒಂಬತ್ತು ಜನ ಬಡಕುಟುಂಬಗಳ ಮಂದಿ ಬದುಕು ಕಟ್ಟಿಕೊಳ್ಳಲು ಹೋಗಿ ಅಪಘಾತದಲ್ಲಿ ಸಾವನ್ನಪ್ಪಿದ ದುರಂತ ಕುರಿತು ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯೂ ತುಟಿಯಂಚಿನ ಸಾಂತ್ವನವನ್ನು ಕೂಡ ನೀಡದೆ ಹೋದರು.
 
ರಾಯಚೂರು ಜಿಲ್ಲೆಯ ಬಡವರ ಬದುಕಿನ ತಟ್ಟೆಗಳಿಗೆ ಅನ್ನ ಬೀಳುವುದೆಂದು? ಅವರು ನೆಮ್ಮದಿ ಕಾಣುವುದೆಂದು?

ನಿಮಗೆ ಏನು ಅನ್ನಿಸ್ತು?
15 ವೋಟ್
eedina app