ಹಾಸನ | ಕುಟುಂಬವನ್ನು ಬೀದಿಗೆ ದೂಡಿದ ಮಳೆ: ದಲಿತ ಮಹಿಳೆ ಕಣ್ಣೀರು

  • ಧಾರಾಕಾರ ಮಳೆಗೆ ನೆಲಸಮವಾದ ಮನೆ, ದವಸ-ಧಾನ್ಯ ಮಣ್ಣುಪಾಲು
  • ಕೂಲಿ ಮಾಡಿ ಜೀವನ ನಿರ್ವಹಿಸುತ್ತಿದ್ದ ರುದ್ರಮ್ಮನ ಕಷ್ಟ ಕೇಳುವರಿಲ್ಲ

“ನಮ್ಗೆ ಐದು ಹೆಣ್ಣು ಮಕ್ಕಳು ಸಾರ್.. ನನ್ ಗಂಡ ತುಂಬಾ ಹೆಡ್ಡ.. ಸಿಕ್ಕಾಪಟ್ಟೆ ಕುಡ್ಕೊಂಡ್‌ ಬರ್ತಾರೆ. ಗೌಡ್ರು ಮನೆಲಿ ಕೂಲಿ ಕೆಲ್ಸ ಮಾಡ್ತಿವಿ, ಸಾಲ ಮಾಡಿ ಹೆಂಗೋ ಜೀವನ ನಡೆಸ್ತಾ ಇದೀವಿ. ಈ ಮಳೆಯಿಂದ ಇದ್ದ ಮನೆಯೂ ಬಿದ್ದು ಹೋಗಿದೆ. ನಾವು ಈಗ ಬೀದಿಗೆ ಬಿದ್ದಿದ್ದೇವೆ…” ಹೀಗೆ, ಮಳೆಯಲ್ಲಿ ನೆನೆಯುತ್ತಲೇ, ಬಿದ್ದು ಹೋದ ತಮ್ಮ ಮನೆಯ ಮುಂದೆ ನಿಂತು ಮಣ್ಣಾದ ವಸ್ತುಗಳತ್ತ ಕೈ ತೋರಿಸುತ್ತ ಮರುಕದ ಧ್ವನಿಯಲ್ಲಿ ಹೇಳಿದವರು ರುದ್ರಮ್ಮ.

ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ ಕೋಗಿಲೆಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಾಳೆಗೆರೆ ಹೊಸಕೊಪ್ಪಲು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ರುದ್ರಮ್ಮ ಮತ್ತು ರುದ್ರಯ್ಯ ಎಂಬ ದಂಪತಿಗಳ ಮನೆ ಭಾನುವಾರ ರಾತ್ರಿ ಧಾರಾಕಾರ ಮಳೆಗೆ ಸಂಪೂರ್ಣ ನೆಲಸಮವಾಗಿದೆ.

ತಡ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆ ಗೋಡೆಗಳು ಏಕಾಏಕಿ ಕುಸಿದಿವೆ. ಅಪಾಯ ಮುನ್ಸೂಚನೆ ಇದ್ದಿದ್ದರಿಂದ ಮನೆಯಲ್ಲಿನ ಎಲ್ಲರೂ ಹೊರಗೆ ಓಡಿದ್ದಾರೆ. ಅಕ್ಕ ಪಕ್ಕದ ಮನೆಯವರ ನೆರವಿನಿಂದ ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ. ಆದರೆ, ವರ್ಷದ ಕೂಳಾದ ಭತ್ತ, ರಾಗಿ ಮೂಟೆಗಳು ಗೋಡೆ ಕುಸಿದ ಮಣ್ಣಿನ ಅಡಿ ಸಿಲುಕಿ ಮಣ್ಣು ಪಾಲಾಗಿವೆ. ಬಟ್ಟೆ, ಪಾತ್ರೆ ಸೇರಿದಂತೆ ಅಗತ್ಯ ವಸ್ತುಗಳೆಲ್ಲವೂ ನಾಶವಾಗಿ ಹೋಗಿವೆ.

ರುದ್ರಮ್ಮ ಮತ್ತು ರುದ್ರಯ್ಯ ಒಂದು ಎಕರೆ ಭೂಮಿಯಲ್ಲಿ ಅಷ್ಟೋ-ಇಷ್ಟೋ ಬೆಳೆ ಮಾಡುತ್ತಾರೆ. ಜತೆಗೆ ಅಕ್ಕ ಪಕ್ಕದ ಹೊಲ, ಗದ್ದೆ, ಕಾಫಿ ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಾ ಕುಟುಂಬ ನಿರ್ವಹಣೆ ಮಾಡುತ್ತಾ ಬಂದಿದ್ದಾರೆ. ಮೊದಲೇ ಸಂಕಷ್ಟದಲ್ಲಿದ್ದ ರುದ್ರಮ್ಮ ಕುಟುಂಬದ ಬದುಕನ್ನು ಮಳೆ ಮತ್ತಷ್ಟು ಕಷ್ಟದ ಕೂಪಕ್ಕೆ ದೂಡಿದೆ.

ಘಟನೆ ಕುರಿತು ರುದ್ರಮ್ಮ ಸುದ್ದಿಗಾರರ ಜತೆಗೆ ಮಾತನಾಡಿದ್ದು, “ಮನೆ ಒಳಗೆಯೆ ಭತ್ತ, ಹಾಸಿಗೆ, ಪಾತ್ರೆ ಎಲ್ಲವೂ ಇಲ್ಲೇ ಇದ್ದವು. ಇದೇ ರೂಂನಲ್ಲಿ ಅಡುಗೆ ಮಾಡಿಕೊಂಡು ತಿನ್ನುತ್ತಿದ್ದೆವು. ಇಡೀ ಮನೆ ಇದ್ದಕ್ಕಿದ್ದಂತೆ ಬಿದ್ದು ಹೋಯಿತು. ನೆನ್ನೆ ಇದ್ದ ಮನೆ ಇಂದು ಇಲ್ಲ. ಜೀವಾನಾಧರಕ್ಕೆ ಇವಾಗ ಏನು ಇಲ್ಲ. ಮಲಗಿಕೊಳ್ಳಲು ಗತಿ ಇಲ್ಲದ ಸ್ಥಿತಿ ಆಗಿದೆ ಏನು ಮಾಡೋಣ?” ಎಂದು ತನ್ನ ಮನೆಯತ್ತ ನೋಡುತ್ತಾ ತಮ್ಮ ಅಳಲು ತೋಡಿಕೊಂಡರು.

ಈ ಸುದ್ದಿ ಓದಿದ್ದೀರಾ? ಈದಿನ ವಿಶೇಷ | ಎಸ್‌ಸಿ ಕ್ಷೇತ್ರಗಳ ಮೇಲೆ ಬೇಡ ಜಂಗಮರ ಕಣ್ಣು; ಕಾನೂನು ಸಮರ ಸಾರಿದ ದಲಿತರು

“ಭಾನುವಾರವೇ ಮನೆ ಬಿದ್ದುಹೋದರೂ ಈವರೆಗೂ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಆಡಳಿತ ಸೇರಿದಂತೆ ಯಾವ ಅಧಿಕಾರಿಗಳೂ ನೆರವಿಗೆ ಬಂದಿಲ್ಲ. ಮನೆ ಕುಸಿದ ಒಂದು ಕಡೆ ಭಾಗದಲ್ಲಿ ಟಾರಪಲ್ ಆಶ್ರಯದಿಂದ ವಾಸ ಮಾಡುತ್ತಿದ್ದೇವೆ. ಸರ್ಕಾರದಿಂದ ಒಂದು ಮನೆ ನಿರ್ಮಿಸಿಕೊಟ್ಟರೆ ಬಹಾಳ ಉಪಕಾರವಾಗುತ್ತದೆ" ಎಂದು ಮನವಿ ಮಾಡಿದರು.

Image

ಗಾಯದ ಮೇಲೆ ಬರೆ:

ಕರ್ನಾಟಕ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಮಾಳೇಗೆರೆ ತಾರಾನಾಥ್ ಮಾತನಾಡಿ, “ತಾಲ್ಲೂಕಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಈ ಸಂದರ್ಭದಲ್ಲಿ ತಾಲೂಕು ಆಡಳಿತ ಸಮಿತಿಗಳನ್ನು ರಚಿಸಿ ಇಂಥವರ ನೆರವಿಗೆ ಬರಬೇಕಿದೆ. ಮೊದಲೇ ಬಡ ಕುಟುಂಬದ  ರುದ್ರಯ್ಯ, ರುದ್ರಮ್ಮ ನವರಿಗೆ ಮನೆ ಕುಸಿತದಿಂದ ಗಾಯದ ಮೇಲೆ ಬರೆ ಎಳೆದಂತೆ ಬದುಕು ಕಷ್ಟವಾಗಿದೆ. ತಕ್ಷಣವೇ ಕೋಗಿಲೆಮನೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನ ತಂದು ಅವರ ಕಷ್ಟಕ್ಕೆ ಸ್ಪಂದಿರುವ ಕೆಲಸ ಮಾಡಲಾಗುತ್ತದೆ ಎಂದರು.

ನಿಮಗೆ ಏನು ಅನ್ನಿಸ್ತು?
1 ವೋಟ್