ರಾಮನಗರ | ಟಿ.ಹೊಸಳ್ಳಿಯ ಮಾರಮ್ಮ ದೇಗುಲಕ್ಕೆ ದಲಿತರ ಪ್ರವೇಶ

  • ತಹಶೀಲ್ದಾರ್‌ ಸಮ್ಮುಖದಲ್ಲಿ ಎರಡೂ ಸಮುದಾಯದ ಮುಖಂಡರ ಸಭೆ
  • ಜಾತ್ರೆಯಲ್ಲಿ ಜಗಳ ನಡೆದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಏರಿತ್ತು 

ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಮರಳವಾಡಿ ಹೋಬಳಿಯ ಟಿ. ಹೊಸಳ್ಳಿ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಗ್ರಾಮ ದೇವತೆ ಮಾರಮ್ಮ ದೇವಿಯ ದೇವಸ್ಥಾನ ಪ್ರವೇಶಕ್ಕೆ ಪರಿಶಿಷ್ಟರಿಗೆ ಮಂಗಳವಾರ ಅವಕಾಶ ಮಾಡಿಕೊಡಲಾಯಿತು.

ಟಿ. ಹೊಸಳ್ಳಿ ಗ್ರಾಮದಲ್ಲಿ ಒಕ್ಕಲಿಗರು ಮತ್ತು ಪರಿಶಿಷ್ಟ ಜಾತಿ ಜನ ವಾಸ ಮಾಡುತ್ತಿದ್ದಾರೆ. ಗ್ರಾಮದ ಮಧ್ಯದಲ್ಲಿ ಮಾರಮ್ಮ ದೇವಿ ದೇವಸ್ಥಾನವಿದ್ದು, ಪೂಜೆ, ಜಾತ್ರೆ ಹಬ್ಬಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ.

ಈ ಬಾರಿ ಮಾರಮ್ಮ ದೇವಿ ಜಾತ್ರೆ ಸಂದರ್ಭದಲ್ಲಿ ಎರಡು ಸಮುದಾಯದ ನಡುವೆ ಜಗಳ ನಡೆದು ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತು. ಕೆಲವು ದಿನಗಳ ಹಿಂದೆ ತಹಶೀಲ್ದಾರ್‌ ಮತ್ತು ಪೊಲೀಸ್‌ ಇನ್ಸ್‌ಪೆಕ್ಟರ್ ಸಮ್ಮುಖದಲ್ಲಿ ಎರಡೂ ಸಮುದಾಯದವರನ್ನು ಕರೆಯಿಸಿ ಶಾಂತಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಎರಡೂ ಸಮುದಾಯಗಳ ಮುಖಂಡರು ಮುಂದೆ ಗ್ರಾಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ, ಸಂಘರ್ಷ ನಡೆಯದಂತೆ ನೋಡಿಕೊಳ್ಳುವುದಾಗಿ ಹೇಳಿದ್ದರು.

ಅದರಂತೆ ಮಂಗಳವಾರ ಟಿ. ಹೊಸಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮುಖಂಡರು ಗ್ರಾಮದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ, ಆಚರಣೆ ಬಗ್ಗೆ ಸಭೆಗೆ ತಿಳಿಸಿದರು. ಆಗ ತಹಶೀಲ್ದಾರ್‌ ವಿ ಆರ್‌ ವಿಶ್ವನಾಥ್‌ ಮಾತನಾಡಿ, “ಹಿಂದಿನ ಕಾಲದ ಹಳೆಯ ಸಂಪ್ರದಾಯದಂತೆ ನಾವು ಇಂದು ನಡೆದುಕೊಳ್ಳಲು ಆಗುವುದಿಲ್ಲ. ಸಂವಿಧಾನದಡಿ ಎಲ್ಲರೂ ಒಟ್ಟಾಗಿ ಸಮಾನತೆಯಿಂದ ಬಾಳಬೇಕು. ಹಿಂದಿನ ಸಂಪ್ರದಾಯಗಳು ಏನೇ ಇರಲಿ. ದೇವಾಲಯಗಳಲ್ಲಿ ಎಲ್ಲರಿಗೂ ಅವಕಾಶ ನೀಡಬೇಕು. ಅದಕ್ಕೆ ಯಾರೂ ಅಡ್ಡಿಪಡಿಸಬಾರದು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಹಾಸನ | ಅಂಬೇಡ್ಕರ್ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ರಾಜಕೀಯ ಮಾಡದಂತೆ ಮನವಿ

ಊರಿನ ಮುಖಂಡರು ತಹಶೀಲ್ದಾರ್ ಮಾತಿಗೆ ಸಮ್ಮತಿಸಿದರು. ಬಳಿಕ ಮಾರಮ್ಮ ದೇವಾಲಯದ ಬೀಗ ತೆಗೆಸಿ ದೇಗುಲದ ಒಳಗೆ ಹೋಗಲು ಅವಕಾಶ ನೀಡಿದರು. ದಲಿತ ಸಮುದಾಯದ ಮಹಿಳೆಯರು, ಮಕ್ಕಳು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ದೇವಾಲಯದ ಒಳಗೆ ಪ್ರವೇಶ ಮಾಡಿದರು. ದಲಿತ ಸಮುದಾಯದ ಅರ್ಚಕರೇ ದೇವಿಗೆ ಪೂಜೆ ನೆರವೇರಿಸಿದರು.

ಹಾರೋಹಳ್ಳಿ ಠಾಣೆ ಇನ್ಸ್‌ಸ್ಪೆಕ್ಟರ್‌ ಕೆ. ಮಲ್ಲೇಶ್‌, ಜಿಲ್ಲಾ ಮತ್ತು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಪಿಡಿಒ ಕೃಷ್ಣ ಹಾಗೂ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು. 

ನಿಮಗೆ ಏನು ಅನ್ನಿಸ್ತು?
0 ವೋಟ್