ರಾಮನಗರ | 13 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸೂರಿಲ್ಲದೆ ನಿರಾಶ್ರಿತವಾಗಿವೆ

  • ದೇಶದಲ್ಲಿ 75 ವರ್ಷಗಳ ಅಭಿವೃದ್ಧಿ, ಸಮಸ್ಯೆ ಕುರಿತು ಚಿಂತನ ಮಂಥನ ಸಭೆ
  • ಸರ್ಕಾರ ಮುಂದಿನ ದಿನಗಳಲ್ಲಿ ನಿರಾಶ್ರಿತರಿಗೆ ಮನೆಗಳನ್ನು ನೀಡಬೇಕು

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭದಲ್ಲಿ ಇಡೀ ದೇಶ ನಿರತವಾಗಿದೆ. ಆದರೆ, ಈ ಸಂಭ್ರಮದ ಮಧ್ಯೆಯೇ ದೇಶದಲ್ಲಿ ಸುಮಾರು 13 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸೂರಿಲ್ಲದೆ ನಿರಾಶ್ರಿತವಾಗಿವೆ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಎಂ ಜಿ ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ತಾಲೂಕಿನ ಎಲ್ಲ ಪ್ರಗತಿಪರ ಸಂಘಟನೆಗಳು ಒಟ್ಟಾಗಿ ಒಕ್ಕೂಟ ರಚಿಸಿಕೊಂಡಿದ್ದು, ಒಕ್ಕೂಟದ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ ಹಾಗೂ 75 ವರ್ಷಗಳಿಂದ ದೇಶದಲ್ಲಾಗಿರುವ ಅಭಿವೃದ್ಧಿ ಮತ್ತು ಸಮಸ್ಯೆಗಳನ್ನು ಕುರಿತಂತೆ ಚಿಂತನ ಮಂಥನ ಸಭೆ ನಡೆಸಲಾಯಿತು.

ಒಕ್ಕೂಟದ ಮುಖಂಡ ಕುಮಾರಸ್ವಾಮಿ ಮಾತನಾಡಿ, “ದೇಶದಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಈ ಅಮೃತ ಘಳಿಗೆಯಲ್ಲಿ 80 ಕೋಟಿ ಕುಟುಂಬಗಳು ಸರ್ಕಾರ ನೀಡುವ ಪಡಿತರವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ” ಎಂದು ಹೇಳಿದರು.  

ಈ ಸುದ್ದಿ ಓದಿದ್ದೀರಾ? ಸಾಮಾಜಿಕ ಸಾಮರಸ್ಯ ಕದಡುವ ಸಂಘಟನೆಗಳ ವಿರುದ್ಧ ಹೋರಾಡಬೇಕಿದೆ: ಡಿ ಕೆ ಶಿವಕುಮಾರ್‌  

“ಅಮೃತ ಮಹೋತ್ಸವದ ಸಮಯದಲ್ಲಿ ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಬೇಕೆಂದು ಸರ್ಕಾರ ಹೇಳುತ್ತದೆ. ಆದರೆ, ದೇಶದಲ್ಲಿ 13 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸೂರಿಲ್ಲದೆ ನಿರಾಶ್ರಿತರಾಗಿದ್ದಾರೆ. ಅವರೆಲ್ಲಾ ಯಾರ ಮನೆ ಮೇಲೆ ಧ್ವಜ ಹಾರಿಸಬೇಕು. ಸರ್ಕಾರ ಮುಂದಿನ ದಿನಗಳಲ್ಲಿಯಾದರೂ ಎಚ್ಚೆತ್ತುಕೊಂಡು ನಿರಾಶ್ರಿತರಿಗೆ ಮನೆ ಕಟ್ಟಿಕೊಡುವ ಕೆಲಸ ಮಾಡಬೇಕು” ಎಂದು ಒತ್ತಾಯಿಸಿದರು.

ಮಲ್ಲಿಕಾರ್ಜುನ್‌ ಮಾತನಾಡಿ, "ಸರ್ಕಾರದ ಯೋಜನೆ, ಸವಲತ್ತುಗಳೆಲ್ಲವೂ ಉಳ್ಳವರ ಪಾಲಾಗುತ್ತಿದ್ದು, ನಿಜವಾಗಲೂ ಸವಲತ್ತುಗಳನ್ನು ಪಡೆಯಬೇಕಾದ ಎಷ್ಟೋ ಕುಟುಂಬಗಳು ವಂಚಿತವಾಗಿವೆ. ಸಮಾಜದ ಪ್ರತಿ ವ್ಯಕ್ತಿಗೂ ಸಮಾನತೆ ಮೂಡುವಂತೆ ಮಾಡಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಕಬ್ಬಾಳೇಗೌಡ, ಶ್ರೀನಿವಾಸ್‌, ಮಲ್ಲೇಶ್‌, ಮುನಿರಾಜು, ನೀಲಿ ರಮೇಶ್‌ ಸೇರಿದಂತೆ ಒಕ್ಕೂಟದ ಹಲವರು ಮಾತನಾಡಿದರು. ಒಕ್ಕೂಟದ ಸಂಪತ್‌ ಕುಮಾರ್‌, ನಲ್ಲಹಳ್ಳಿ ಶ್ರೀನಿವಾಸ್‌, ಇತರರಿದ್ದರು. 

ನಿಮಗೆ ಏನು ಅನ್ನಿಸ್ತು?
0 ವೋಟ್