ರಾಮನಗರ | ವಾರದ ಹಿಂದೆ ನಾಪತ್ತೆಯಾಗಿದ್ದ ಮೂವರು ಮಕ್ಕಳು ಪತ್ತೆ

  • ಮಠಕ್ಕೆ ಮರಳಿ ಬಂದ ಮೂವರು ವಿದ್ಯಾರ್ಥಿಗಳು
  • ಶಾಲೆಗೆ ತೆರಳುವುದಾಗಿ ಹೇಳಿ ಹೋಗಿದ್ದ ವಿದ್ಯಾರ್ಥಿಗಳು

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೇಗುಲಮಠದ ನಿರ್ವಾಣೇಶ್ವರ ಪ್ರೌಢಶಾಲೆಯಿಂದ ಕಾಣೆಯಾಗಿದ್ದ ಮೂವರು ವಿದ್ಯಾರ್ಥಿಗಳು ಭಾನುವಾರ ಮಠಕ್ಕೆ ಮರಳಿದ್ದಾರೆ. 

ಆನೇಕಲ್ ತಾಲೂಕಿನ ಅತ್ತಿಬೆಲೆಯ ಎ. ಎಸ್. ಶಿವಕುಮಾರ್, ಕೋಡ್ಲಿಪುರದ ಎಂ. ಪ್ರತಾಪ್ ಮತ್ತು ಬೆಂಗಳೂರು ಉತ್ತರ ತಾಲೂಕಿನ ಬಿಡಿಎಲ್ ಲೇಔಟ್ ಎಂ. ಕಾರ್ತಿಕ್ ಕಾಣೆಯಾಗಿದ್ದ ವಿದ್ಯಾರ್ಥಿಗಳು. ಈ ಮೂವರು ನಿರ್ವಾಣೇಶ್ವರಸ್ವಾಮಿ ವಸತಿ ನಿಲಯದಲ್ಲಿ ಇದ್ದುಕೊಂಡು, ಮಠದ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ನವೆಂಬರ್ 8ರಂದು ಶಾಲೆಯಿಂದ ನಾಪತ್ತೆಯಾಗಿದ್ದರು. 

ಘಟನೆ ಕುರಿತು ವಸತಿ ನಿಲಯದ ಮೇಲ್ವಿಚಾರಕ ಮಹದೇವಸ್ವಾಮಿ ಮಾತನಾಡಿ, “ದೇಗುಲಮಠದ ನಿರ್ವಾಣೇಶ್ವರಸ್ವಾಮಿ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಗಳು ನ.8 ರಂದು ತಿಂಡಿ ತಿಂದು ಶಾಲೆಗೆ ಹೋಗುವುದಾಗಿ ಹೇಳಿ ಹೋಗಿದ್ದರು. ಆದರೆ, ಸಂಜೆಯಾದರೂ ಮರಳಿ ಮಠಕ್ಕೆ ಬಂದಿರಲಿಲ್ಲ. ರಾತ್ರಿಯಾದರೂ ವಿದ್ಯಾರ್ಥಿಗಳು ಮಠಕ್ಕೆ ಮರಳದೇ ಇದ್ದುದ್ದನ್ನು ಗಮನಿಸಿ, ಅವರ ಪೋಷಕರಿಗೆ ಕರೆ ಮಾಡಿ ವಿಚಾರಿಸಿದೆವು. ಮನೆಗೂ ಬಂದಿಲ್ಲವೆಂದು ಪೋಷಕರು ಹೇಳಿದರು. ಎಲ್ಲ ಕಡೆ ಹುಡುಕಿ, ಕೊನೆಗೆ ಕನಕಪುರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು” ಎಂದು ವಿವರಿಸಿದರು. 

ಪ್ರಕರಣಕ್ಕೆ ಸಂಬಂಧಿಸಿ ನ. 11 ರಂದು ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ವಾರ್ಡನ್ ದೂರು ನೀಡಿದ್ದು, ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ಸುದ್ದಿಯನ್ನು ಗಮನಿಸಿರುವ ವಿದ್ಯಾರ್ಥಿಗಳು ಭಾನುವಾರ ಮಠದ ವಸತಿ ಶಾಲೆಗೆ ಮರಳಿದ್ದಾರೆ. 

AV Eye Hospital ad

ಈ ಸುದ್ದಿ ಓದಿದ್ದೀರಾ?: ಸಮಯ ಪ್ರಜ್ಞೆ ತೋರಿ ತಂದೆಯ ಜೀವ ಉಳಿಸಿದ್ದ ಮಗಳು : 'ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ'ಗೆ ಆಯ್ಕೆ

“ನಾವು ಮೂವರೂ ಸ್ನೇಹಿತನ ಮನೆಗೆ ತೆರಳಿದ್ದೆವು. ಟಿವಿಯಲ್ಲಿ ನಾವು ನಾಪತ್ತೆಯಾಗಿದ್ದೇವೆಂದು ಸುದ್ದಿ ಬರುತ್ತಿತ್ತು. ಇದರಿಂದ ಗಾಬರಿಯಾಗಿ ಮಠಕ್ಕೆ ಹಿಂತಿರುಗಿದೆವು” ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app