ರಾಮನಗರ | 4 ಅಡಿ ನೀರಿನಲ್ಲಿ ಶಾಲೆ ಜಲಾವೃತ; ದೇವಸ್ಥಾನದಲ್ಲಿ ಮಕ್ಕಳಿಗೆ ಪಾಠ

  • 20 ದಿನಗಳಿಂದ ಶಾಲೆ ಜಲಾವೃತ
  • 60ಕ್ಕೂ ಹೆಚ್ಚು ಮಕ್ಕಳಿರುವ ಸರ್ಕಾರಿ ಶಾಲೆ

ರಾಮನಗರ ಜಿಲ್ಲೆಯು ಭಾರೀ ಮಳೆಗೆ ತತ್ತರಿಸಿ ಮೂರು ವಾರಗಳು ಕಳೆದಿವೆ. ಮಳೆಯಿಂದಾದ ಸಮಸ್ಯೆಗೆ ಈಗಲೂ ಹಲವು ಪ್ರದೇಶಗಳ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನೂ ವಿವಿಧ ಪ್ರದೇಶಗಳು ಜಲಾವೃತವಾಗಿವೆ. ಚನ್ನಪಟ್ಟಣದ ತಟ್ಟೆಕೆರೆ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಜಲವೃತಗೊಂಡಿದೆ. 

ತೆಟ್ಟೆಕೆರೆ ಬಡಾವಣೆಯ ಶಾಲೆಯ ಆವರಣದಲ್ಲಿ ಈಗಲೂ ನಾಲ್ಕು ಅಡಿಗಳಷ್ಟು ನೀರು ನಿಂತಿದೆ. ಇದರಿಂದಾಗಿ  ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇನ್ನೂ ಶಾಲೆಗೆ ಹೋಗಲಾಗುತ್ತಿಲ್ಲ,. ಶಾಲೆ ಇಂದಿಗೂ ಮುಚ್ಚಿದೆ. ಶಾಲಾ ಆವರಣದ ನೀರು ತೆರವುಗೊಳಿಸಲು ಸ್ಥಳೀಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಣಾಮ, ಬೇರೆ ದಾರಿಯಿಲ್ಲದೆ ಶಿಕ್ಷಕರು ಸಮೀಪದ ದೇವಸ್ಥಾನದಲ್ಲಿ ತರಗತಿಗಳನ್ನು ನಡೆಸಲಾರಂಭಿಸಿದ್ದಾರೆ. 

30 ವರ್ಷ ಹಳೆಯದಾದ ಶಾಲೆ ವಿಶಾಲವಾಗಿದ್ದು, ಕಾಂಪೌಂಡ್ ಗೋಡೆಗಳನ್ನು ಹೊಂದಿದೆ. ಒಂದರಿಂದ ಎಂಟನೇ ತರಗತಿವರೆಗೆ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.  ಐವರು ಶಿಕ್ಷಕರು ಹಾಗೂ ಮಧ್ಯಾಹ್ನದ ಊಟ ತಯಾರಿಸುವ ಇಬ್ಬರು ಸಿಬ್ಬಂದಿಗಳು ಇದ್ದಾರೆ.  ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

"ಆಗಸ್ಟ್ 26ರಂದು ಸಮೀಪದಲ್ಲೇ ಇದ್ದ ಸಣ್ಣಕಟ್ಟೆ ಒಡೆದು ಶಾಲೆಗೆ ನೀರು ನುಗ್ಗಿತ್ತು. ಮಧ್ಯಾಹ್ನದ ಬಿಸಿಯೂಟಕ್ಕೆ ಇಟ್ಟಿದ್ದ ಧಾನ್ಯಗಳೆಲ್ಲವೂ ಹಾಳಾಗಿವೆ. ಮಕ್ಕಳಿಗೆ ಮಧ್ಯಹ್ನದ ಊಟಕ್ಕೆ ಅಡುಗೆ ಮಾಡುವುದಕ್ಕೂ ಆಹಾರ ಧಾನ್ಯಗಳಿಲ್ಲದಂತಾಗಿವೆ" ಎಂದು ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಲಕ್ಷ್ಮಿ ಹೇಳಿದ್ದಾರೆ.

"ಹಾಜರಾತಿ ಪುಸ್ತಕ ಹಾಗೂ ಇತರೆ ದಾಖಲೆಗಳು ಹಾಳಾಗಿವೆ. ನಾವು ಶಾಲೆಯನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ" ಎಂದು ಅವರು ವಿವರಿಸಿದ್ದಾರೆ.

''ಶಾಲೆಯು ತಗ್ಗು ಪ್ರದೇಶದಲ್ಲಿದ್ದು, ಆವರಣಕ್ಕೆ ನೀರು ನುಗ್ಗುತ್ತದೆ. ನೀರನ್ನು ತೆಗೆದರೂ, ಎತ್ತರದ ಪ್ರದೇಶದಿಂದ ನೀರು ಹರಿದುಬಂದು ಮತ್ತೆ ತುಂಬಿಕೊಳ್ಳುತ್ತದೆ. ಕುಡಿಯಲು ಮತ್ತು ಅಡುಗೆಗಾಗಿ ಸ್ಥಳೀಯ ನಿವಾಸಿಗಳಿಂದ ನೀರನ್ನು ಪಡೆಯಲಾಗುತ್ತದೆ" ಎಂದು ಲಕ್ಷ್ಮೀ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್