
- ಬಿಳಗುಂಬ ಅಂಡರ್ ಪಾಸ್ ಪೂರ್ತಿ ಜಲಾವೃತ, ಬಸ್ ಮುಳುಗಡೆ
- ಮುನ್ನೆಚ್ಚರಿಕೆಯಾಗಿ ರಾಮನಗರ, ಚೆನ್ನಪಟ್ಟಣದ ಶಾಲಾ ಕಾಲೇಜು ರಜೆ
ರಾಮನಗರ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ಹಲವು ಪ್ರದೇಶಗಳು ಜಲಾವೃತವಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಮನಗರ ಮತ್ತು ಚೆನ್ನಪಟ್ಟಣದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಸೋಮವಾರ (ಆಗಸ್ಟ್ 29) ಆದೇಶ ಹೊರಡಿಸಿದ್ದಾರೆ.
ರಾಮನಗರ ಪಟ್ಟಣ, ಅರ್ಕೇಶ್ವರ ಕಾಲೋನಿ ಮುಳುಗಡೆಯಾಗಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಹನುಮಂತ ನಗರದಲ್ಲಿ ರಂಗರಾಯನದೊಡ್ಡಿ ಕೆರೆ ಕೋಡಿ ಬಿದ್ದು, ಅಪಾರ ಪ್ರಮಾಣದ ನೀರು ಹರಿದು ಬಂದು ಸುಮಾರು ಮೂವತ್ತಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ತಾಲೂಕಿನ ಪಾಲಭೋವಿದೊಡ್ಡಿ ಗ್ರಾಮದಲ್ಲಿ ಜಮೀನು ಮತ್ತು ಮನೆಗಳು ನೀರಿನಿಂದ ಆವೃತಗೊಂಡಿವೆ.
ಈ ಸುದ್ದಿ ಓದಿದ್ದೀರಾ; ಮೋದಿ ಭೇಟಿ ಹಿನ್ನಲೆ ರಸ್ತೆ ಗುಂಡಿಗಳು ಮಾಯಾ: ಪ್ರಧಾನಿಗೆ ಧನ್ಯವಾದ ಹೇಳಿದ ನೆಟ್ಟಿಗರು
ತಾಲೂಕಿನ ಬಿಳಗುಂಬ ಅಂಡರ್ ಪಾಸ್ ನಲ್ಲಿ ಸೋಮವಾರ (ಆಗಸ್ಟ್ 29) ಬೆಳಿಗ್ಗೆ ಉದಯರಂಗ ಹೆಸರಿನ ಖಾಸಗಿ ಬಸ್ ಮಳೆ ನೀರಿನ ಪ್ರವಾಹದಲ್ಲಿ ಸಿಲುಕಿದೆ. ಸ್ಥಳೀಯರು ನೆರವಿಗೆ ಧಾವಿಸಿ ರಕ್ಷಣೆ ಮಾಡಿದ್ದಾರೆ. ಐವತ್ತಕ್ಕೂ ಹೆಚ್ಚು ಪ್ರಯಾಣಿಕರು ಬಸ್ನಲ್ಲಿದ್ದರು. ಬಸ್ ನ ಅರ್ಧ ಮಟ್ಟಕ್ಕೆ ನೀರು ನಿಂತಿದ್ದು, ಮುಂದೆ ಚಲಿಸಲು ಸಾಧ್ಯವಾಗಲಿಲ್ಲ.
ಚನ್ನಪಟ್ಟಣದಲ್ಲಿ ಸುರಿದ ಮಳೆಗೆ ಎಲೆಕೇರಿ-ರಾಂಪುರ ರಸ್ತೆ ಜಲಾವೃತಗೊಂಡು 4 ಅಡಿಗೂ ಹೆಚ್ಚು ನೀರು ರಸ್ತೆ ಮೂಲಕ ಹರಿದು ಹೋಗುತ್ತಿದೆ. ಅಕ್ಕಪಕ್ಕದ ಬಡಾವಣೆ, ಮನೆಗಳು ಸಂಪೂರ್ಣ ಜಲಾವೃತವಾಗಿ ಜನರು ಪರಿತಪಿಸುವಂತಾಗಿದೆ. ವಾಹನ ಸವಾರರಿಗೆ ವಾಹನಗಳನ್ನು ಓಡಿಸಲು ಹರಸಾಹಸ ಪಡುವಂತಾಗಿದೆ.