ರಾಮನಗರ | ಚುನಾವಣೆಯಲ್ಲಿ ಯಾರು ಹಿತವರೆಂದು ಜನರೇ ತೀರ್ಮಾನಿಸಲಿ: ಮಾಜಿ ಶಾಸಕ ಬಾಲಕೃಷ್ಣ

  • ಕಾಂಗ್ರೆಸ್‌ ಕೊಟ್ಟ ಮಾತು ತಪ್ಪುವುದಿಲ್ಲ
  • ಜೆಡಿಎಸ್‌ ನಾಯಕರು ಕಾಂಗ್ರೆಸ್‌ಗೆ ಬರಲಿದ್ದಾರೆ

ಚುನಾವಣಾ ಸಂದರ್ಭದಲ್ಲಿ ಹಣ, ಸೀರೆ ಹಂಚುವ ಸರ್ಕಾರ ಬೇಕೆ, ಇಲ್ಲವೇ ಅನ್ನ ಭಾಗ್ಯ, ಕ್ಷೀರಭಾಗ್ಯ, ರೈತ ಭಾಗ್ಯ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿ ಮಾಡಿದ ಕಾಂಗ್ರೆಸ್‌ ಸರ್ಕಾರ ಬೇಕೆ ಎಂಬುದನ್ನು ಮತದಾರರೇ ತೀರ್ಮಾನಿಸಲಿ ಎಂದು ಮಾಜಿ ಶಾಸಕ ಎಚ್‌.ಸಿ ಬಾಲಕೃಷ್ಣ ತಿಳಿಸಿದ್ದಾರೆ.

ಮಾಗಡಿ ತಾಲೂಕಿನ ವಿರೂಪಸಂದ್ರದಲ್ಲಿ ಜನಾರ್ಶೀವಾದ ಕೋರಿ ಮನೆ ಮನೆಗೆ ಭೇಟಿ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರನ್ನು ತೀರ್ಥಯಾತ್ರೆಗೆ ಕರೆದೊಯ್ಯುವಂತಹ ಪರಿಪಾಠ ಹೆಚ್ಚಾಗಿದೆ. ಇಂತವರಿಗೆ ಮತದಾರರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು" ಎಂದು ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ?:  ಹಾಸನ | ಜೆಡಿಎಸ್‌ ಅಭ್ಯರ್ಥಿಯಾಗಿ ನಾನೇ ಕಣಕ್ಕಿಳಿಯುತ್ತೇನೆ: ಭವಾನಿ ರೇವಣ್ಣ ಘೋಷಣೆ

"2013ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಮತದಾರರಿಗೆ ನೀಡಿದ್ದ ಎಲ್ಲ ಭರವಸೆಗಳನ್ನು ಪೂರೈಸಿತ್ತು. ಈಗ ಅದೇ ಮಾದರಿಯಲ್ಲಿ 2023ರ ಚುನಾವಣೆಯಲ್ಲಿ ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌, ಗೃಹಿಣಿಯರಿಗೆ 2 ಸಾವಿರ ರೂ. ಗೌರವ ಧನ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದೇವೆ. ನಾವು ಅಧಿಕಾರಕ್ಕೆ ಬಂದರೆ ಕೊಟ್ಟ ಮಾತನ್ನು ತಪ್ಪುವುದಿಲ್ಲ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಜೆಡಿಎಸ್‌ ನಾಯಕರು ಸುಳ್ಳು ಹೇಳಿಕೊಂಡು ಹಲವರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆ ಯಾಗುತ್ತಿದ್ದಂತೆ ಜೆಡಿಎಸ್‌ನಿಂದ ಹಲವು ನಾಯಕರು ಕಾಂಗ್ರೆಸ್‌ಗೆ ಬರಲಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಗೆಲುವು ಖಚಿತ" ಎಂದು ಅವರು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app