15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ | ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Teacher
  • ಒಟ್ಟು 15,000 ಹುದ್ದೆಗಳಿಗೆ ಅರ್ಜಿ ಆಹ್ವಾನ, 13,363 ಅಭ್ಯರ್ಥಿಗಳು ಆಯ್ಕೆ
  • ಮೂವರು ಲಿಂಗತ್ವ ಅಲ್ಪಸಂಖ್ಯಾತರು, 19 ಎಂಜಿನಿಯರಿಂಗ್ ಪದವೀಧರರು ಆಯ್ಕೆ

15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ 1:1 ಅನುಪಾತದ 'ತಾತ್ಕಾಲಿಕ ಆಯ್ಕೆ' ಪಟ್ಟಿಯನ್ನು ಶಿಕ್ಷಣ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದೆ.

ಒಟ್ಟು 15,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಅದರಲ್ಲಿ 13,363 ಹುದ್ದೆಗಳಿಗೆ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಲಿಂಗತ್ವ ಅಲ್ಪಸಂಖ್ಯಾತರಿಗೆ ಶಿಕ್ಷಕರ ನೇಮಕಾತಿಯಲ್ಲಿ ಶೇ.1ರಷ್ಟು ಮೀಸಲಾತಿ ನೀಡಲಾಗಿತ್ತು. ಪ್ರಪ್ರಥಮ ಬಾರಿಗೆ ಮೂವರು ಲಿಂಗತ್ವ ಅಲ್ಪಸಂಖ್ಯಾತರು 1:1 ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ. ಹಾಗೆಯೇ ಮೊದಲ ಬಾರಿಗೆ ಅರ್ಹ ಎಂಜಿನಿಯರಿಂಗ್ ಪದವೀಧರರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. 19 ಜನರು 1:1 ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ. 

“15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಕಟ್ಟು ನಿಟ್ಟಾಗಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿತ್ತು. ಅದರಂತೆ ಅಧಿಸೂಚನೆ ಹೊರಡಿಸಿದ ದಿನದಿಂದ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆವರೆಗಿನ ಪ್ರಕ್ರಿಯೆಯನ್ನು 9 ತಿಂಗಳ ಒಳಗೆ ಪೂರ್ಣಗೊಳಿಸಲಾಗಿದೆ” ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

AV Eye Hospital ad

ವಿಷಯವಾರು ಆಯ್ಕೆ ವಿವರ

ಆಂಗ್ಲಭಾಷೆಯಲ್ಲಿ 1,807 ಅಧಿಸೂಚಿತ ಹುದೆಗಳಿದ್ದು, 1:1 ತಾತ್ಕಾಲಿಕ ಪಟ್ಟಿಯಲ್ಲಿ 1768 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ 6,500 ಅಧಿಸೂಚಿತ ಹುದೆಗಳಿದ್ದು, ತಾತ್ಕಾಲಿಕ ಪಟ್ಟಿಯಲ್ಲಿ 5,450 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಹಾಗೆಯೇ ಸಮಾಜ ಪಾಠಗಳು ವಿಷಯಕ್ಕೆ ಸಂಬಂಧಿಸಿದಂತೆ 4,693 ಅಧಿಸೂಚಿತ ಹುದೆಗಳಿದ್ದು, 1:1 ತಾತ್ಕಾಲಿಕ ಪಟ್ಟಿಯಲ್ಲಿ 4,521 ಅಭ್ಯರ್ಥಿಗಳು ಆಯ್ಕೆಯಾಗಿರುವರು. ಇನ್ನು, ಜೀವ ವಿಜ್ಞಾನದಲ್ಲಿ 2,000 ಅಧಿಸೂಚಿತ ಹುದೆಗಳಿದ್ದು, 1:1 ತಾತ್ಕಾಲಿಕ ಪಟ್ಟಿಯಲ್ಲಿ 1,624 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಸದರಿ ನೇಮಕಾತಿಯಲ್ಲಿ ಮೂವರು ತೃತೀಯ ಲಿಂಗಿ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಸುರೇಶ್‌ ಬಾಬು ಆಂಗ್ಲಭಾಷೆಯ ಶಿಕ್ಷಕರಾಗಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಆಯ್ಕೆಯಾಗಿದ್ದಾರೆ. ಉಳಿದಂತೆ ರವಿಕುಮಾರ್‌ ವೈ ಆರ್‌ ಎಂಬುವರು ಸಮಾಜ ವಿಜ್ಞಾನ ವಿಷಯದ ಶಿಕ್ಷಕರಾಗಿ ಮಧುಗಿರಿಗೆ ಆಯ್ಕೆಯಾಗಿದ್ದಾರೆ. ಅಶ್ವತ್ಥಾಮ ಎಂಬುವರು ಸಮಾಜ ವಿಜ್ಞಾನ ವಿಷಯದ ಶಿಕ್ಷಕರಾಗಿ ರಾಯಚೂರು ಜಿಲ್ಲೆಗೆ ಆಯ್ಕೆಯಾಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

1:1 ಅನುಪಾತದ 'ತಾತ್ಕಾಲಿಕ ಆಯ್ಕೆ' ಪಟ್ಟಿಯನ್ನು ಇಲಾಖೆಯ ವೆಬ್‌ಸೈಟ್‌ https://schooleducation.kar.nic.in ಪ್ರಕಟಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app