ಸಾವಯವ ಕೃಷಿಗೆ ಬಜೆಟ್‌ ಹಂಚಿಕೆಯಲ್ಲಿ ಕಡಿತ |ಕೃಷಿಕರ ಅಸಮಾಧಾನ

ರಾಜ್ಯದಲ್ಲಿ ಸಾವಯವ ಕೃಷಿಯನ್ನು ಅಭಿವೃದ್ಧಿಪಡಿಸಲು ಕನಿಷ್ಠ 40 ಕೋಟಿ ರೂ. ಬಜೆಟ್‌ ಹಂಚಿಕೆ ನೀಡಲಾಗುತ್ತಿತ್ತು. ಆದರೆ, ಈ ವರ್ಷ ಕೇವಲ 20 ಕೋಟಿ ರೂ. ನೀಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು, ಈ ಆರ್ಥಿಕ ವರ್ಷದ ಬಜೆಟ್ ಹಂಚಿಕೆಯಲ್ಲಿ ಸಾವಯವ ಕೃಷಿಗೆ 20 ಕೋಟಿ ರೂ. ನೀಡಿದೆ. ಈ ಮೊತ್ತವು ಕಳೆದ ಎಂಟು ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಹಂಚಿಕೆಯಾಗಿದೆ. ಇದರಿಂದಾಗಿ, ಸಾವಯವ ಕೃಷಿ ಮಾಡುವವರು ಮತ್ತು ಉತ್ತೇಜಿಸುವವರು ಅಸಮಾಧಾನಗೊಂಡಿದ್ದಾರೆ. 

ಕಳೆದ ವರ್ಷ ಸಾವಯವ ಕೃಷಿಗೆ 50 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಅಲ್ಲದೆ, ಸಾಂಕ್ರಾಮಿಕ ರೋಗ ಆವರಿಸಿದ 2020-21ರ ಆರ್ಥಿಕ ವರ್ಷ ಹೊರತುಪಡಿಸಿ, ಉಳಿದ ಎಲ್ಲಾ ವರ್ಷಗಳಲ್ಲಿಯೂ ರಾಜ್ಯದಲ್ಲಿ ಸಾವಯವ ಕೃಷಿಯನ್ನು ಅಭಿವೃದ್ಧಿಪಡಿಸಲು ಕನಿಷ್ಠ 40 ಕೋಟಿ ರೂ. ಬಜೆಟ್‌ ಹಂಚಿಕೆ ನೀಡಲಾಗುತ್ತಿತ್ತು. ಆದರೆ, ಈ ವರ್ಷ ಕೇವಲ 20 ಕೋಟಿ ರೂ. ನೀಡಲಾಗಿದೆ. 

"ಇಷ್ಟೇ ಅಲ್ಲ, ಕಳೆದ ಐದು ವರ್ಷಗಳಲ್ಲಿ ಎಲ್ಲ ಸರ್ಕಾರಗಳು ಸಾವಯವ ಕೃಷಿಯನ್ನು ಅಭಿವೃದ್ಧಿಪಡಿಸಲು ದೊಡ್ಡ ಮೊತ್ತದ ಭರವಸೆ ನೀಡುತ್ತಿದ್ದವು. ಆದರೆ, ಅಂತಿಮ ಹಂಚಿಕೆಯು ನಿರಾಶಾದಾಯಕವಾಗಿರುತ್ತಿತ್ತು" ಎಂದು ರಾಜ್ಯ ಸಾವಯವ ಕೃಷಿ ಮಿಷನ್‌ನ ಎ ಎಸ್ ಆನಂದ್ ವಿಷಾದಿಸಿದ್ದಾರೆ.

"ಉದಾಹರಣೆಗೆ, 2021-22ರ ಬಜೆಟ್‌ನಲ್ಲಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಮ್ಮ ಬಜೆಟ್ ಭಾಷಣದಲ್ಲಿ ಸಾವಯವ ಕೃಷಿಗಾಗಿ 500 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದರು. ಆದರೆ ಅಂತಿಮವಾಗಿ, ಕೇವಲ 50 ಕೋಟಿ ರೂ. ಹಂಚಿಕೆ ಮಾಡಿದರು. ಅದರಲ್ಲೂ, ಬಿಡುಗಡೆಯಾಗಿದ್ದು ಕೇವಲ 33 ಕೋಟಿ ರೂಪಾಯಿಗಳು ಮಾತ್ರ. ಅದು ಕೂಡ ಆರ್ಥಿಕ ವರ್ಷದ ಅಂತ್ಯದ 15 ದಿನಗಳ ಮೊದಲು. ಆ ಹಣದಿಂದ ಏನು ಪ್ರಯೋಜನ?" ಎನ್ನುತ್ತಾರೆ ಆನಂದ್.

"ಸಾವಯವ ಕೃಷಿಯ ಅಳವಡಿಕೆಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿನ ಈ ಇಳಿಕೆಯು ಕರ್ನಾಟಕವನ್ನು ಹಿನ್ನಡೆಗೆ ತಳ್ಳುತ್ತಿದೆ. ಸಾವಯವ ಕೃಷಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ ಕರ್ನಾಟಕವಾಗಿದ್ದರೂ, ಪ್ರಸ್ತುತ ಅಸ್ಸಾಂ ಮತ್ತು ಸಿಕ್ಕಿಂನಂತಹ ರಾಜ್ಯಗಳು ಮುನ್ನುಗ್ಗುತ್ತಿವೆ" ಎಂದು ಹಾಸನ ಮತ್ತು ಕೊಡಗು ಪ್ರಾದೇಶಿಕ ಸಹಕಾರಿ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಜಯಪ್ರಸಾದ್ ಹೇಳಿದ್ದಾರೆ.

"ರಾಜ್ಯವು ಸಾವಯವ ಕೃಷಿಯಲ್ಲಿ ಪ್ರಗತಿ ಸಾಧಿಸದೇ ಇರುವುದಕ್ಕೆ ಕಾರಣ, ಸರ್ಕಾರವು ಸಾಕಷ್ಟು ಹಣವನ್ನು ಬಿಡುಗಡೆ ಮಾಡದೇ ಇರುವುದು. ಈ ಕೃಷಿ ಮಾಡಲು ಮೂಲಸೌಕರ್ಯಗಳ ಕೊರತೆಯಿಂದಾಗಿ ರೈತರು ರಾಸಾಯನಿಕ ಕೃಷಿಯತ್ತ ಮರಳುತ್ತಿದ್ದಾರೆ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

“2016ರಲ್ಲಿ ನಮ್ಮ ಒಕ್ಕೂಟಕ್ಕೆ 50 ಲಕ್ಷ ರೂಪಾಯಿಗಳನ್ನು ಸರ್ಕಾರ ಮಂಜೂರು ಮಾಡಿತ್ತು. ಇದು ಕೇವಲ ಎರಡು ತಿಂಗಳ ಹಿಂದೆ ಬಿಡುಗಡೆಯಾಗಿದೆ. ಇಂತಹ ಪರಿಸ್ಥಿತಿಯು ರೈತರನ್ನು ಸಾವಯವ ಕೃಷಿಯಿಂದ ಹೊರದೂಡುತ್ತಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

"ರಾಜ್ಯದ 15 ಸಾವಯವ ಕೃಷಿಕರ ಒಕ್ಕೂಟಗಳಿವೆ. ಹೆಚ್ಚಿನ ರೈತರು ಈ ಕೃಷಿಯಲ್ಲಿ ಪ್ರಗತಿ ಸಾಧಿಸಲು ಮತ್ತು ಅವರು ಬೆಳೆದ ಬೆಳೆ ಮಾರುಕಟ್ಟೆಗೆ ಬರಲು ಪ್ರತಿ ಒಕ್ಕೂಟಕ್ಕೂ ಕನಿಷ್ಠ 25 ಲಕ್ಷ ವಾರ್ಷಿಕ ನಿಧಿಯ ಅಗತ್ಯವಿದೆ" ಎಂದು ಅವರು ವಿವರಿಸಿದ್ದಾರೆ. 

"ವಿವಿಧ ಸುಸ್ಥಿರ ಕೃಷಿ ವಿಧಾನಗಳಿಗೆ ನಿಧಿಯನ್ನು ಬಳಸಲಾಗುತ್ತಿದೆ. ಹೀಗಾಗಿ, ಹಂಚಿಕೆಯಲ್ಲಿ ಇಳಿಕೆಯಾಗಿದೆ ಎಂಬಂತೆ ಕಂಡುಬರುತ್ತದೆ. ಆದರೆ, ಸಾವಯವ ಕೃಷಿಯನ್ನು ಮೀರಿ ನೈಸರ್ಗಿಕ ಕೃಷಿಯಂತಹ ಸುಸ್ಥಿರ ಕೃಷಿ ಪದ್ದತಿಗಳ ಪ್ರೋತ್ಸಾಹಕ್ಕೆ ಸರ್ಕಾರ ಗಮನ ನೀಡುತ್ತಿದೆ" ಕೃಷಿ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್ ಹೇಳಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಕಾಂಡ್ಲಾ ಬಂದರಿನಲ್ಲಿ ಸಾಲು ನಿಂತ ಗೋಧಿ ಲಾರಿಗಳು; ರಫ್ತು ನಿಷೇಧದ ನಿಯಮ ಸಡಿಲಿಕೆಗೆ ಕೇಂದ್ರದ ನಿರ್ಧಾರ

''ಈ ವರ್ಷ ನೈಸರ್ಗಿಕ ಕೃಷಿಗೆ ಒತ್ತು ನೀಡಲಾಗುವುದು. ಹಾಗೆಂದ ಮಾತ್ರಕ್ಕೆ, ನಾವು ಸಾವಯವ ಕೃಷಿಯತ್ತ ಗಮನ ಹರಿಸುವುದಿಲ್ಲ ಎಂದರ್ಥವಲ್ಲ ಎಂದು ಅವರು ಹೇಳಿದ್ದಾರೆ. 

ಕರ್ನಾಟಕದಲ್ಲಿ ಸುಮಾರು 1.7 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಸಾವಯವ ಕೃಷಿ ಮಾಡಲಾಗುತ್ತಿದೆ. ಈ ಕೃಷಿಯು ಒಟ್ಟು ಸಾಗುವಳಿ ಭೂಮಿಯಲ್ಲಿ ಸುಮಾರು 2% ಆಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್