ಸಚಿವ ಉಮೇಶ್ ಕತ್ತಿ ಅವರನ್ನು ಸಂಪುಟದಿಂದ ಕಿತ್ತು ಹಾಕಿ : ಸಿದ್ದರಾಮಯ್ಯ

  • ರಾಜ್ಯವನ್ನು ಒಡೆಯುವ ಕುರಿತು ಬೇಜವಾಬ್ದಾರಿ ಹೇಳಿಕೆ - ಆರೋಪ
  • ಕರ್ನಾಟಕ ಒಡೆಯುವ ಯೋಚನೆ, ನಾಡು ನುಡಿಗೆ ಬಗೆವ ದ್ರೋಹ – ಕಿಡಿ

“ರಾಜ್ಯವನ್ನು ಒಡೆಯುವ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡಿರುವ ಸಚಿವ ಉಮೇಶ್ ಕತ್ತಿ ಅವರನ್ನು ಸಂಪುಟದಿಂದ ಕಿತ್ತು ಹಾಕಿ” ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, “ರಾಜ್ಯವನ್ನು ಇಬ್ಭಾಗ ಮಾಡುವ ಚರ್ಚೆ ಪ್ರಧಾನಿ ನರೇಂದ್ರ ಮೋದಿ ಅವರ ಮಟ್ಟದಲ್ಲಿಯೇ ನಡೆಯುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನು ಸಚಿವ ಉಮೇಶ್ ಕತ್ತಿ ಬಹಿರಂಗಪಡಿಸಿದ್ದಾರೆ. ಇದರ ಸತ್ಯಾಸತ್ಯತೆಗಳನ್ನು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.

“ಸಚಿವ ಉಮೇಶ್ ಕತ್ತಿ ಅವರು ಜವಾಬ್ದಾರಿ ಸ್ಥಾನದಲ್ಲಿರುವವರು. ಪಕ್ಷ ಇಲ್ಲವೆ ಸರ್ಕಾರದ ಮಟ್ಟದಲ್ಲಿ ಅಂತಹ ಚರ್ಚೆ ನಡೆಯದೆ ರಾಜ್ಯ ಒಡೆಯುವ ಯೋಜನೆಯ ಬಗ್ಗೆ ಮಾತನಾಡಿರಲಾರರು. ಅವರು ಹೇಳಿರುವುದು ಸುಳ್ಳಾಗಿದ್ದರೆ ಇಂತಹ ಬೇಜವಾಬ್ದಾರಿ ಹೇಳಿಕೆಗಾಗಿ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

“ಸಾವಿರಾರು ಹಿರಿಯ ಕನ್ನಡಿಗರ ಅವಿರತ ಹೋರಾಟದ ಫಲವಾಗಿ ಸ್ಥಾಪನೆಗೊಂಡ ಕರ್ನಾಟಕವನ್ನು ಒಡೆಯುವ ಯೋಚನೆ ಮಾಡುವುದೇ ನಾಡು - ನುಡಿಗೆ ಬಗೆವ ದ್ರೋಹವಾಗುತ್ತದೆ” ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಈ ಸುದ್ದಿ ಓದಿದ್ದೀರಾ? ಉಡುಪಿ | ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಗ್ನಿವೀರರಿಗೆ ಮೀಸಲಾತಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

“ಸಚಿವ ಉಮೇಶ್ ಕತ್ತಿ ಅವರು ಪ್ರತ್ಯೇಕ ರಾಜ್ಯ ಸ್ಥಾಪನೆಯ ಕೂಗು ಹಾಕುತ್ತಿರುವುದು ಇದೇ ಮೊದಲ ಸಲವೇನಲ್ಲ. ಭಾಷಾ ಸೂಕ್ಷ್ಮ ಪ್ರದೇಶವಾದ ಬೆಳಗಾವಿಯಲ್ಲಿಯೇ ಇಂತಹ ಪ್ರಚೋದನಕಾರಿ ಹೇಳಿಕೆಗಳ ಪರಿಣಾಮದ ಹೊಣೆಯನ್ನು ರಾಜ್ಯ ಬಿಜೆಪಿ ಸರ್ಕಾರವೇ ಹೊರಬೇಕಾಗುತ್ತದೆ” ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್