ಕನ್ನಡದ ಖ್ಯಾತ ವಿಮರ್ಶಕ, ಪ್ರೊ. ಎಂ ಎಚ್ ಕೃಷ್ಣಯ್ಯ ನಿಧನ

M H Krishnayya
  • 'ಶೃಂಗಾರ ಲಹರಿ' ಕೃತಿಗೆ ಲಲಿತ ಕಲಾ ಅಕಾಡೆಮಿ ಪುರಸ್ಕಾರ ಪಡೆದಿದ್ದ ಸಾಹಿತಿ
  • ಹರಿಶ್ಚಂದ್ರ ಘಾಟ್‌ನಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಅಂತ್ಯಕ್ರಿಯೆ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರೂ, ಕನ್ನಡದ ಖ್ಯಾತ ವಿಮರ್ಶಕರಾಗಿದ್ದ ಪ್ರೊ. ಎಂ ಎಚ್ ಕೃಷ್ಣಯ್ಯ ಅವರು ಶುಕ್ರವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

1937ರ ಜುಲೈ 21ರಂದು ಮೈಸೂರಿನಲ್ಲಿ ಹುಚ್ಚಯ್ಯ ಹಾಗೂ ಕೆಂಪಮ್ಮ ದಂಪತಿಯ ಮಗನಾಗಿ ಜನಿಸಿದ್ದ ಕೃಷ್ಣಯ್ಯನವರು, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಮತ್ತು ಎಂ.ಎ ಪದವಿ ಪಡೆದಿದ್ದರು. ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದ ಇವರು, ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಸೇರಿದಂತೆ ಹಲವು ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ, ಅಪಾರ ಶಿಷ್ಯವೃಂದವನ್ನು ಗಳಿಸಿದ್ದರು.

ವಿಮರ್ಶಕರಾಗಿ ಗುರುತಿಸಿಕೊಂಡಿದ್ದ ಕೃಷ್ಣಯ್ಯನವರು ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ಆರ್.ಎಂ. ಹಡಪದ, ರೂಪಶಿಲ್ಪಿ ಬಸವಯ್ಯ, ಶೃಂಗಾರ ಲಹರಿ, ಕಲಾ ದರ್ಶನ, ರಂಗಭೂಮಿ ಮತ್ತು ಸೌಂದರ್ಯ ಪ್ರಜ್ಞೆ ಸೇರಿದಂತೆ 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು. ‘ಕುವೆಂಪು ಸಾಹಿತ್ಯ: ಚಿತ್ರ ಸಂಪುಟ’ ಕೃತಿಯನ್ನೂ ಸಂಪಾದಿಸಿದ್ದರು.

ಕೃಷ್ಣಯ್ಯನವರು ಬರಹಗಾರರು, ಸಂಗೀತಗಾರರು, ಶಿಲ್ಪಿಗಳು, ಕಲಾವಿದರೊಂದಿಗೆ ಬೆರೆತು ಅವರ ಬದುಕನ್ನು ಅರಿತು, ಆ ಅರಿವನ್ನು ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಪ್ರಸಿದ್ಧ ವಿದ್ವಾಂಸರೂ, ಶಿಸ್ತಿನ ಪ್ರವಚನಕಾರರೂ ಆದ ಕೃಷ್ಣಯ್ಯನವರ 30ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.  ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ಆರ್. ಎಮ್. ಹಡಪದ್, ರೂಪಶಿಲ್ಪಿ ಬಸವಯ್ಯ, ಶ್ರಂಗಾರ ಲಹರಿ,  ಕಲಾ ದರ್ಶನ,  ರಂಗಭೂಮಿ ಮತ್ತು ಸೌಂದರ್ಯ ಪ್ರಜ್ಞೆ ಮುಂತಾದ ಬರಹಗಳು ಹಾಗೂ ಕುವೆಂಪು ಸಾಹಿತ್ಯ : ಚಿತ್ರ ಸಂಪುಟದಂತಹ ಸಂಪಾದನೆಗಳು ಈ ಕೃತಿಗಳಲ್ಲಿ ಸೇರಿವೆ.

ಅವರ 'ಕಲಾ ದರ್ಶನ' ಕೃತಿ ಕನ್ನಡ ನಾಡಿನಲ್ಲಿ ಗೌರವಾನ್ವಿತ ಸಂಪುಟವೆನಿಸಿವೆ.  ಉದಯ ಭಾನು ಕಲಾ ಸಂಘವು ತನ್ನ  ಸುವರ್ಣ ಮಹೋತ್ಸವ  ಸಂದರ್ಭದಲ್ಲಿ  ಹೊರತಂದ  ಸುಮಾರು  3000 ಪುಟಗಳ ‘ಬೆಂಗಳೂರು ದರ್ಶನ’  ಬೃಹತ್  ಸಂಪುಟಗಳ  ಸಂಪಾದಕರಾಗಿ ಸಹಾ ಅವರು  ತಮ್ಮ ಮಹತ್ವದ ಕೊಡುಗೆಯನ್ನು ನೀಡಿದ್ದರು.

ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ  ಸಾಹಿತ್ಯ ಅಕಾಡಮಿ, ತಂಜಾವೂರಿನಲ್ಲಿ ಕೇಂದ್ರ ಹೊಂದಿರುವ ದಕ್ಷಿಣ ಭಾಗೀಯ ಸಾಂಸ್ಕೃತಿಕ ಕೇಂದ್ರ, ಉದಯಭಾನು ಕಲಾ ಸಂಘ,  ಮುಂತಾದೆಡೆಗಳಲ್ಲಿ ಅವರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ್ದಾರೆ.  ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷತೆ ಒಳಗೊಂಡಂತೆ ಹಲವು ರೀತಿಯಲ್ಲಿ ಸಾಹಿತ್ಯ ಸಾಂಸ್ಕೃತಿಕ ಲೋಕದಲ್ಲಿ ಮಹತ್ವದ ಸೇವೆ ಸಲ್ಲಿಸಿರುವ ಪ್ರೊ. ಕೃಷ್ಣಯ್ಯನವರು ತಮ್ಮ ಕಾರ್ಯದಕ್ಷತೆ, ಸರಳ, ಸಜ್ಜನಿಕೆಗಳಿಗೆ ಹೆಸರಾಗಿದ್ದರು.

ಕೃಷ್ಣಯ್ಯ ಅವರ 'ಶೃಂಗಾರ ಲಹರಿ' ಕೃತಿಗೆ ಲಲಿತ ಕಲಾ ಅಕಾಡೆಮಿ ಪುರಸ್ಕಾರ, 'ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಪ್ರಶಸ್ತಿ ಸಂದಿತ್ತು. ಹಂಪಿ ವಿಶ್ವವಿದ್ಯಾಲಯವು ‘ನಾಡೋಜ’ ಪ್ರಶಸ್ತಿ ನೀಡಿತ್ತು. ಇವರ ಸಾಹಿತ್ಯ ಸೇವೆಗೆ 'ಮಾಸ್ತಿ ಪ್ರಶಸ್ತಿ'ಯೂ ಒಲಿದು ಬಂದಿತ್ತು.

ಬೆಂಗಳೂರಿನ ಶ್ರೀರಾಮ್‌ಪುರ ಸಮೀಪವಿರುವ ಗಾಯತ್ರಿನಗರದ ಹರಿಶ್ಚಂದ್ರ ಘಾಟ್‌ನಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಕೃಷ್ಣಯ್ಯ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ನಾಡಿನ ಗಣ್ಯರು ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು, ವಿಮರ್ಶಕರು ಆದ ಪ್ರೊ. ಎಂ.ಎಚ್ ಕೃಷ್ಣಯ್ಯ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಹಲವು ದಶಕಗಳಿಂದ ನಾಡು ನುಡಿಯ ಏಳ್ಗೆಗಾಗಿ ದುಡಿದ ಹಿರಿಯ ಜೀವ ಕೃಷ್ಣಯ್ಯನವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಿಬಾರದ ನಷ್ಟ' ಎಂದು ಸಂತಾಪ ಸೂಚಿಸಿದ್ದಾರೆ.

'ಬಹಳ ದೊಡ್ಡ ಮನುಷ್ಯ. ಓದು, ಪಾಶ್ಚಾತ್ಯ ಸಂಗೀತ, ಚಿತ್ರಕಲೆ, ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ತೀವ್ರ ಆಸಕ್ತಿ ಮತ್ತು ಪರಿಣಿತಿ. ಪರಮ ಪ್ರಾಮಾಣಿಕ. ನನಗೆ ತುಂಬು ಪ್ರೀತಿಯನ್ನು ನೀಡಿದವರು. ಶರಣು' ಎಂದು ಕನ್ನಡದ ಮತ್ತೋರ್ವ ಹಿರಿಯ ವಿಮರ್ಶಕ ಹೆಚ್ ಎಸ್ ರಾಘವೇಂದ್ರ ರಾವ್, ಪ್ರೊ ಕೃಷ್ಣಯ್ಯರೊಂದಿಗಿನ ಒಡನಾಟವನ್ನು ಸ್ಮರಿಸಿ, ಸಂತಾಪ ಸೂಚಿಸಿದ್ದಾರೆ. 

ಕನ್ನಡ ಸಾಹಿತ್ಯ ಲೋಕದ ಸಜ್ಜನ ಸಾಹಿತಿ, ವಿಮರ್ಶಕ, ಕಲೋಪಾಸಕರ ಕಣ್ಮರೆಯಾದರು ಎಂದು ವಾರ್ತಾ ಇಲಾಖೆಯ ನಿರ್ದೆಶಕರಾಗಿ ನಿವೃತ್ತರಾದ ವಿಶುಕುಮಾರ್ ಸಂತಾಪ ಸೂಚಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
3 ವೋಟ್