ಪರಿಶಿಷ್ಟರ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ| ಪ್ರಸನ್ನಾನಂದಪುರಿ ಸ್ವಾಮೀಜಿ ಹೋರಾಟಕ್ಕೆ 100 ದಿನ

  • ನ್ಯಾ. ನಾಗಮೋಹನ್ ದಾಸ್ ವರದಿ ಅನುಷ್ಠಾನಕ್ಕೆ ಶ್ರೀಗಳ ಒತ್ತಾಯ
  • ಶ್ರೀಗಳ ಧರಣಿಗೆ ದಲಿತ, ಕನ್ನಡ ಮತ್ತು ರೈತ ಸಂಘಟನೆಗಳ ಬೆಂಬಲ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶೈಕ್ಷಣಿಕ ಮತ್ತು ಉದ್ಯೋಗದ ಮೀಸಲಾತಿಯನ್ನು ನ್ಯಾ. ನಾಗಮೋಹನ್‌ ದಾಸ್ ಆಯೋಗದ ವರದಿಯ ಆಧಾರದಲ್ಲಿ ಹೆಚ್ಚಿಸಬೇಕು ಎಂದು ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ನಡೆಸುತ್ತಿರುವ ಹೋರಾಟ ಶುಕ್ರವಾರ (ಮೇ 20ಕ್ಕೆ) ನೂರು ದಿನ ಪೂರೈಸಿದೆ.

ಜನಸಂಖ್ಯೆ ಆಧಾರದಲ್ಲಿ ಪರಿಶಿಷ್ಟರ ಮೀಸಲಾತಿ ಹೆಚ್ಚಿಸಬೇಕೆಂಬ ದಶಕಗಳ ಬೇಡಿಕೆಗೆ ಮಣಿದಿದ್ದ ಸರ್ಕಾರ, ಮೂರು ವರ್ಷಗಳ ಹಿಂದೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಆಯೋಗ ರಚನೆ ಮಾಡಿತ್ತು. ಆದರೆ, ಆಯೋಗ ವರದಿ ನೀಡಿ ವರ್ಷಗಳೇ ಕಳೆದಿದ್ದರೂ ಇನ್ನೂ ಅನುಷ್ಠಾನ ಮಾಡಿಲ್ಲ. ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ವಾಲ್ಮೀಕಿ ಗುರುಪೀಠದ ಶ್ರೀಗಳು ಕಳೆದ ನೂರು ದಿನಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ನಡೆಸುತ್ತಿದ್ದಾರೆ. 

ಧರಣಿ ಸತ್ಯಾಗ್ರಹ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಈ ದಿನ.ಕಾಮ್ ಪ್ರಸನ್ನಾನಂದಪುರಿ ಸ್ವಾಮೀಜಿ ಅವರನ್ನು ಮಾತನಾಡಿಸಿದಾಗ ಅವರು, “ಸಂವಿಧಾನದ ಮೇಲೆ ಪ್ರಮಾಣ ಮಾಡಿ ಮುಖ್ಯಮಂತ್ರಿಯಾಗಿರುವ ಯಾವ ಪಕ್ಷದ ಮುಖ್ಯಮಂತ್ರಿಯೂ ಸಾಮಾಜಿಕ ನ್ಯಾಯವನ್ನು ಅನುಷ್ಠಾನ ಮಾಡಲು ಮುಂದಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ರಾಜ್ಯದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಬೇಕೆನ್ನುವುದು ನಮ್ಮ 33 ವರ್ಷಗಳ ಬೇಡಿಕೆಯಾಗಿದೆ. ಆ ನಿಟ್ಟಿನಲ್ಲಿ ಸರ್ಕಾರವೇ ನೇಮಕ ಮಾಡಿರುವ ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ವರದಿಯನ್ನು ಅನುಷ್ಠಾನ ಮಾಡಬೇಕೆಂದು ರಾಜನಹಳ್ಳಿಯಿಂದ (ವಾಲ್ಮೀಕಿ ಗುರುಪೀಠ, ರಾಜನಹಳ್ಳಿ, ಹರಿಹರ ತಾಲ್ಲೂಕು, ದಾವಣಗೆರೆ ಜಿಲ್ಲೆ) ರಾಜಾಧಾನಿವರೆಗೆ ಪಾದಯಾತ್ರೆ ಮಾಡಿದ್ದೇವೆ” ಎಂದರು.

“ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ ಎಸ್ ಯಡಿಯೂರಪ್ಪ ಶ್ರೀಮಠದ ಎರಡನೇ ಜಾತ್ರೆಗೆ ಬಂದಿದ್ದರು. ಅಂದು ಭರವಸೆ ನೀಡಿದ್ದ ಅವರು, ವರದಿ ಬಂದ ಕೂಡಲೇ ಅನುಷ್ಠಾನ ಮಾಡುವುದಾಗಿ ಹೇಳಿ, ಸಚಿವ ಸಂಪುಟ ಸಭೆ ಕರೆದು ಶೀಘ್ರದಲ್ಲೇ ಕ್ರಮ ಕೈಗೊಳ್ಳವುದಾಗಿ ಆಶ್ವಾಸನೆ ನೀಡಿದ್ದರು. ಯಡಿಯೂರಪ್ಪ ಭರವಸೆ ನೀಡಿ ಒಂದು ವರ್ಷ, ಹತ್ತು ತಿಂಗಳಾಗಿದೆ. ಈವರೆಗೆ ವರದಿ ಅನುಷ್ಠಾನವಾಗಿಲ್ಲ. ಆ ನಂತರ, ನಮ್ಮ ಸಮುದಾಯದ ಮುಖಂಡರ ಜತೆಗೆ ಚರ್ಚಿಸಿ ಹೋರಾಟ ಮಾಡಲು ನಿರ್ಧರಿಸಲಾಯಿತು” ಎಂದು ಮಾಹಿತಿ ನೀಡಿದರು.

ಈ ಸುದ್ದಿ ಓದಿದ್ದೀರಾ?: ಕಾಂಗ್ರೆಸ್‌ ತಪ್ಪು ಸರಿಪಡಿಸಲೆಂದೇ ಪಠ್ಯ ಬದಲಿಸಲಾಗಿದೆ: ಬಿಜೆಪಿ ಸಮರ್ಥನೆ

“ಫೆ. 10ರಿಂದ ಈವರೆಗೆ ನೂರು ದಿನಗಳ ಪ್ರತಿಭಟನೆ ನಡೆಸಿದ್ದೇವೆ. ನಾಗಮೋಹನ್‌ದಾಸ್ ವರದಿ ಅನುಷ್ಠಾನಗೊಳಿಸಬೇಕು ಹಾಗೂ ಸಮುದಾಯದ ವಿವಿಧ ಬೇಡಿಕಗಳನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೆರಡೂ ಈಡೇರಿಸಬೇಕು ಎನ್ನುವ ಬೇಡಿಕೆಯನ್ನು ಇಟ್ಟುಕೊಂಡು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ” ಎಂದು ಹೇಳಿದರು.

“ಸತ್ಯಾಗ್ರಹದ 50ನೇ ದಿನದಂದು ಮುಖ್ಯಮಂತ್ರಿಗಳ ಪ್ರತಿನಿಧಿಗಳಾಗಿ ಸಚಿವರಾದ ಗೋವಿಂದ ಕಾರಜೋಳ, ಹಾಲಪ್ಪ ಆಚಾರ್, ಶಂಕರ್ ಪಾಟೀಲ್ ಮುನೇಕೊಪ್ಪ ಮತ್ತು ಸಮುದಾಯದ ನಾಲ್ವರು ಶಾಸಕರು ಬಂದಿದ್ದರು. ‘15 ದಿನಗಳ ಒಳಗಾಗಿ ವರದಿಯನ್ನು ಅನುಷ್ಠಾನಗೊಳಿಸುವುದಾಗಿ ಮುಖ್ಯಮಂತ್ರಿಗಳೇ ಹೇಳಿ ಕಳಿಸಿದ್ದಾರೆʼ ಎಂದು ಹೇಳಿದ್ದರು” ಎಂದರು.

“15 ದಿನ ಏಕೆ? ಬೇಕಿದ್ದರೆ ಇನ್ನೂ 15 ದಿನ ತೆಗೆದುಕೊಳ್ಳಿ, ಏಪ್ರಿಲ್ 30ರ ಒಳಗಾಗಿ ವರದಿ ಅನುಷ್ಠಾನಗೊಳಿಸಿ. ತಾವು ಅಥವಾ ತಮ್ಮ ಆಪ್ತಸಹಾಯಕರು ಬಂದು ಆದೇಶದ ಪ್ರತಿ ಕೊಟ್ಟರೆ ಸಾಕು, ನಾನು ಮಠಕ್ಕೆ ಹೋಗುತ್ತೇನೆ ಎಂದು ಸಚಿವರ ನಿಯೋಗಕ್ಕೆ ಹೇಳಿದ್ದೆ. ಇಂದು ಸತ್ಯಾಗ್ರಹಕ್ಕೆ ನೂರನೇ ದಿನ ತುಂಬಿದೆ. ಈವರೆಗೆ ಕೊಟ್ಟ ಭರವಸೆ ಈಡೇರಿಲ್ಲ. ನಿಯೋಗದಿಂದ ಯಾವುದೇ ಪ್ರತಿಕ್ರಿಯೆ ಕಾಣಿಸುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ನಮ್ಮ ಧರಣಿ ಸತ್ಯಾಗ್ರಹದ ನೂರನೇ ದಿನ ಬೆಂಬಲಿಸಿ ರಾಜ್ಯಾದ್ಯಂತ ಹಲವು ತಾಲ್ಲೂಕುಗಳಲ್ಲಿ ಭಕ್ತಾದಿಗಳು ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಲಿದ್ದಾರೆ. ಉತ್ತರ ಕರ್ನಾಟದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ, ಒಂಡೆರಡು ದಿನ ಮುಂದೂಡಿ, ಮಳೆ ನಿಂತ ನಂತರ ಪ್ರತಿಭಟನೆ ನಡೆಸುತ್ತೇವೆಂದು ಭಕ್ತರು ನಮಗೆ ತಿಳಿಸಿದ್ದಾರೆ. ವರದಿ ಅನುಷ್ಠಾನಗೊಳಿಸಲು ಒತ್ತಡ ಹೇರುವ ಕೆಲಸಗಳು ನಡೆಯುತ್ತಿವೆ” ಎಂದರು. 

“ಜನಸಂಖ್ಯೆ ಆಧಾರದಲ್ಲಿ ಎಸ್‌ಸಿ ಸಮುದಾಯಕ್ಕೆ ಶೇ.15ರಷ್ಟು ಮೀಸಲಾತಿ ಹೆಚ್ಚಳವಾಗಬೇಕು. ಎಸ್‌ಟಿಗೆ ಶೇ 7.5 ರಷ್ಟು ಹೆಚ್ಚಳವಾಗಬೇಕು. 2011ರ ಜನಗಣತಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ರಾಜಕೀಯ ಪ್ರಾತಿನಿಧ್ಯ ನೀಡಿದೆ. ರಾಜ್ಯ ಸರ್ಕಾರ ಆರ್ಥಿಕ ಪ್ರಾತಿನಿಧ್ಯವನ್ನು ಕೊಟ್ಟಿದೆ. ಅದೇ ಮಾದರಿಯಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು. ಒಟ್ಟಾರೆ ಮೀಸಲಾತಿಯನ್ನು ಶೇ.18ರಿಂದ 24.1ಕ್ಕೆ ಹೆಚ್ಚಳ ಮಾಡಬೇಕು ಎಂಬುದು ನಮ್ಮ ಬೇಡಿಕೆ” ಎಂದು ಸ್ವಾಮೀಜಿ ಹೋರಾಟದ ಉದ್ದೇಶ ವಿವರಿಸಿದರು. 

ಈ ಸುದ್ದಿ ಓದಿದ್ದೀರಾ?: ಮತ್ತೆ ಮುನ್ನೆಲೆಗೆ ಒಳ ಮೀಸಲಾತಿ ಚರ್ಚೆ| ಈ ಬಾರಿ ಬಿಜೆಪಿಗೆ ಬೀಳಲಿದೆಯೇ ಆಕ್ರೋಶದ ಬರೆ?

ಆರ್ಥಿಕವಾಗಿ ಹಿಂದುಳಿದ ವರ್ಗದ (ಇಡಬ್ಲ್ಯೂಎಸ್) ಮೀಸಲಾತಿ ಬಗ್ಗೆ ಪ್ರತಿಕ್ರಿಯಿಸಿ, “ಆರ್ಥಿಕವಾಗಿ ಹಿಂದುಳಿದ, ಮುಂದುವರಿದ ಸಮುದಾಯದ ಬಡ ಮಕ್ಕಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಕೇಂದ್ರ ಸರ್ಕಾರ ಶೇ.10 ಮೀಸಲಾತಿ ನೀಡಿದೆ. ಇದರಿಂದ ಶೇ.50 ಮೀಸಲಾತಿ ಮಿತಿ ಮೀರಿ, 60ಕ್ಕೆ ತಲುಪಿದೆ” ಎಂದರು.

“ಇವು (ಎಸ್‌ಸಿ ಮತ್ತು ಎಸ್‌ಟಿ) ಅಸಂಘಟಿತ ಸಮುದಾಯಗಳು ಮತ್ತು ಇಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆಯೂ ಇದೆ. ಹಾಗಾಗಿ ಇಂಥ ಹೋರಾಟದಲ್ಲಿ ಹಿನ್ನೆಡೆಯಾಗುತ್ತಿದೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ, ಸಂವಿಧಾನದ ಮೇಲೆ ಪ್ರಮಾಣ ಸ್ವೀಕರಿಸುವ ಮುಖ್ಯಮಂತ್ರಿಗಳು ಪಕ್ಷ ಬೇಧ, ಜಾತಿ ಬೇಧ ಮಾಡದೆ, ಆಯಾ ಕಾಲಕ್ಕೆ ಸಾಮಾಜಿಕ ನ್ಯಾಯ ಅನುಷ್ಠಾನ ಮಾಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದ್ದರಿಂದ ಈಗಲಾದರೂ ಸಾಮಾಜಿಕ ನ್ಯಾಯದ ಬೇಡಿಕೆ ಈಡೇರಿಸಬೇಕೆನ್ನುವುದು ನಮ್ಮ ಒತ್ತಾಯ” ಎಂದು ಹೇಳಿದರು.

“ಕಳೆದ ನೂರು ದಿನಗಳಿಂದ ಧರಣಿ ಸತ್ಯಾಗ್ರಹಕ್ಕೆ ಕನ್ನಡಪರ, ರೈತ ಮತ್ತು ದಲಿತಪರ ಅನೇಕ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಬೆಂಬಲಿಸಿದ್ದಾರೆ. ನಮ್ಮ ನ್ಯಾಯುಯುತ ಹೋರಾವನ್ನು ಒಪ್ಪಿಕೊಂಡು ನೈತಿಕ ಬೆಂಬಲ ಘೋಷಿಸಿದ್ದಾರೆ. ಅವರೆಲ್ಲರಿಗೂ ನಾನು ಅಭಾರಿಯಾಗಿದ್ದೇನೆ. ಹೋರಾಟ ಇಂದು ನೂರು ದಿನ ಪೂರೈಸಿದೆ. ಮುಂದಿನ ಹೋರಾಟದ ಬಗ್ಗೆ ಮುಖಂಡರ ಜತೆಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ” ಎಂದು ಸ್ವಾಮೀಜಿ ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್