ಪಠ್ಯ ವಿವಾದ| ಸಮಿತಿ ವಜಾ ಆಗಿದ್ದರಿಂದ ಪರಿಷ್ಕೃತ ಪಠ್ಯಪುಸ್ತಕಗಳೂ ರದ್ದಾಗಬೇಕು: ಕಾಂಗ್ರೆಸ್‌ ಆಗ್ರಹ

Congress Protest
  • ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್‌ನಿಂದ ಬೃಹತ್‌ ಪ್ರತಿಭಟನೆ
  • ನಾಗಪುರ ಶಿಕ್ಷಣ ನೀತಿಯನ್ನು ಕರ್ನಾಟಕ್ಕೆ ತರಬೇಡಿ: ಡಿ ಕೆ ಶಿವಕುಮಾರ್ ಒತ್ತಾಯ

ರೋಹಿತ್‌ ಚಕ್ರತೀರ್ಥ ಸಮಿತಿ ತಪ್ಪು ಮಾಡಿದೆ ಎಂದು ಸ್ವತಃ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಸಮಿತಿಯನ್ನೂ ವಿಸರ್ಜನೆ ಮಾಡಲಾಗಿದೆ. ಹೀಗಾಗಿ ವಿವಾದಾತ್ಮಕ ಪಠ್ಯಗಳನ್ನೂ ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಮತ್ತು ಕಾಂಗ್ರೆಸ್‌ ಶಾಸಕಾಂಗ ಪಕ್ಷದಿಂದ ಜಂಟಿಯಾಗಿ ಗುರುವಾರ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ರೋಹಿತ್ ಚಕ್ರತೀರ್ಥ ಸಮಿತಿ ಶಾಲಾ ಪಠ್ಯದಲ್ಲಿ ನಾಡಿನ ದಾರ್ಶನಿಕರು ಮತ್ತು ಮಹಾನ್ ಚೇತನಗಳನ್ನು ಅಪಮಾನ ಮಾಡಿದೆ. ಹೀಗಾಗಿ ಇತಿಹಾಸ ತಿರುಚಿರುವ ಪಠ್ಯಪುಸ್ತಕ ಪರಿಷ್ಕರಣೆ ರದ್ದುಗೊಳಿಸಬೇಕು. ಮತ್ತು ಹಿಂದಿನ ಪಠ್ಯಕ್ರಮವನ್ನೇ ಮುಂದುವರೆಸಬೇಕು ಎಂದು ಕಾಂಗ್ರೆಸ್‌ ನಾಯಕರು ಒಕ್ಕೊರಲಿನಿಂದ ಪ್ರತಿಭಟನೆಯಲ್ಲಿ ಆಗ್ರಹಿಸಿದರು. 

ಪ್ರತಿಭಟನೆ ಬಳಿಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, "ಸರ್ಕಾರ ರೋಹಿತ್‌ ಚಕ್ರತೀರ್ಥ ಸಮಿತಿಯನ್ನು ವಿಸರ್ಜಿಸಿದೆ. ಆದರೆ, ಆ ಸಮಿತಿ ಶಿಫಾರಸು ಮಾಡಿದ ಪಠ್ಯಗಳನ್ನು ಹಾಗೇ ಇಟ್ಟುಕೊಂಡಿದೆ. ಸಮಿತಿ ವಜಾ ಆಗಿರುವುದರಿಂದ ಆ ಸಮಿತಿ ಪರಿಷ್ಕರಣೆ ಮಾಡಿರುವ ಪಠ್ಯಪುಸ್ತಕಗಳು ರದ್ದಾಗಬೇಕು," ಎಂದು ಒತ್ತಾಯಿಸಿದರು. 

ಮುಂದುವರೆದು "ಪರಿಷ್ಕರಣೆಗೊಂಡ ಪಠ್ಯದಲ್ಲಿ ಇತಿಹಾಸ ತಿರುಚುವ ಕೆಲಸವಾಗಿದೆ. ಬಸವಣ್ಣ, ಅಂಬೇಡ್ಕರ್‌, ನಾರಾಯಣ ಗುರು, ಕುವೆಂಪು, ಭಗತ್‌ ಸಿಂಗ್‌ ಸೇರಿದಂತೆ ಅನೇಕ ಸಂತರು, ದಾರ್ಶನಿಕರ ಚರಿತ್ರೆಗಳನ್ನು ತಿರುಚಲಾಗಿದೆ. ಉದಾಹರಣೆಗೆ 9ನೇ ತರಗತಿ ಪಠ್ಯದಲ್ಲಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ʼಸಂವಿಧಾನ ಶಿಲ್ಪಿʼ ಎಂದು ಕರೆಯಲಾಗಿತ್ತು. ಈಗ ಅದನ್ನು ತೆಗೆದು ಹಾಕಲಾಗಿದೆ. ಬಸವಣ್ಣನವರು ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಲಿಂಗಾಯತ  ಧರ್ಮವನ್ನು ಸ್ಥಾಪನೆ ಮಾಡಿದ್ದಾರೆ ಎಂಬ ಅಂಶವನ್ನೇ ತಿರುಚಲಾಗಿದೆ. ಹೀಗೆ ದೇಶಭಕ್ತರು, ದಾರ್ಶನಿಕರ ವಿಚಾರಗಳನ್ನು ತಿರುಚಿ ಕೇಸರಿಕರಣಗೊಳಿಸಲಾಗಿದೆ,” ಎಂದು ಅವರು ಆರೋಪಿಸಿದರು. 

“ಶಿಕ್ಷಣ ಸಚಿವ ನಾಗೇಶ್‌ ಅವರು ಮೊದಲು ಪರಿಷ್ಕರಣೆಗೊಂಡ ಪಠ್ಯವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲ್ಲ ಎಂದು ಹೇಳಿದ್ದರು. ಗಣ್ಯ ವ್ಯಕ್ತಿಗಳಿಂದ ಇದಕ್ಕೆ ಪ್ರತಿರೋಧ ವ್ಯಕ್ತವಾದ ಮೇಲೆ ಪಠ್ಯ ಪರಿಷ್ಕರಣಾ ಸಮಿತಿಯಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಕೆಲವು ವಿಚಾರಗಳನ್ನು ಪುನರ್‌ ಪರಿಶೀಲನೆ ಮಾಡುತ್ತೇವೆ, ಇನ್ನೊಂದು ತಿಂಗಳಲ್ಲಿ ಪಠ್ಯಪುಸ್ತಕ ಮುದ್ರಣ ಮಾಡಿ ಮಕ್ಕಳಿಗೆ ಹಂಚುತ್ತೇವೆ ಎಂದೂ ತಿಳಿಸಿದ್ದಾರೆ. ಇದರರ್ಥ ತಾವು ಆರ್‌ಎಸ್‌ಎಸ್‌ ನಿರ್ದೇಶನದಂತೆ ಚರಿತ್ರೆ ತಿರುಚಿ ಪಠ್ಯ ರಚನೆ ಮಾಡಿದ್ದಾರೆ ಎಂದು ಒಪ್ಪಿಕೊಂಡಂತಲ್ಲವೆ,” ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. 

"ಪರಿಷ್ಕೃತ ಪಠ್ಯವನ್ನು ಹಿಂಪಡೆಯಬೇಕು. ಮತ್ತು ಬರಗೂರು ರಾಮಚಂದ್ರಪ್ಪ ಅವರು ಈ ಹಿಂದೆ ಪರಿಷ್ಕರಣೆ ಮಾಡಿದ್ದ ಪಠ್ಯವನ್ನೇ ಮುಂದುವರೆಸಬೇಕು. ಸರ್ಕಾರ ಈ ಒತ್ತಾಯವನ್ನು ಈಡೇರಿಸದೆ ಹೋದರೆ ಮುಂದಿನ ಹೋರಾಟದ ರೂಪುರೇಷಗಳನ್ನು ಚರ್ಚಿಸಿ, ತೀರ್ಮಾನಿಸಲಾಗುವುದು," ಎಂದು ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಪಠ್ಯ ಪುಸ್ತಕ ವಿವಾದ | ಪಠ್ಯಪುಸ್ತಕ ಹಿಂಪಡೆಯುವಂತೆ ರಾಜ್ಯಾದ್ಯಂತ ದಸಂಸ ಪ್ರತಿಭಟನೆ 

ನಾಗಪುರ ಶಿಕ್ಷಣ ನೀತಿ ಬೇಡ: ಡಿಕೆ ಶಿವಕುಮಾರ್ 

"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ರಾಜೀನಾಮೆ ನೀಡಬೇಉ. ಇಂಥ ಕೆಟ್ಟ ಸರ್ಕಾರ ರಾಜ್ಯದಿಂದ ಮೊದಲು ತೊಲಬೇಕು. ನಮ್ಮ ಮಕ್ಕಳಿಗೆ ಆರ್‌ಎಸ್‌ಎಸ್‌ ಪಠ್ಯಗಳ್ನು ಬೋಧಿಸುವುದು ಬೇಡ. ಪರಿಷ್ಕೃತ ಪಠ್ಯಗಳನ್ನು ಕೈಬಿಟ್ಟು ಹಿಂದಿನ ಪಠ್ಯಗಳನ್ನೇ ಮಕ್ಕಳಿಗೆ ವಿತರಿಸಬೇಕು," ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಭಟನೆಯಲ್ಲಿ ಒತ್ತಾಯಿಸಿದರು. 

ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ನೀಡಿದ ಡಿ ಕೆ ಶಿವಕುಮಾರ್, "ಪಠ್ಯಪುಸ್ತಕದ ಬಗ್ಗೆ ನಾವು ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಯಾರೇ ಪ್ರತಿಭಟನೆಗೆ ಕರೆದರು ನಾವೆಲ್ಲ ಬರುತ್ತೇವೆ. ಪರಿಷ್ಕೃತ ಪಠ್ಯ ಕಸದ ತೊಟ್ಟಿಗೆ ಎಸೆಯುವ ವರೆಗೂ ನಮ್ಮ ಹೋರಾಟ ನಿಲ್ಲದು. ಇದು ಪ್ರಾರಂಭವಷ್ಟೇ. ಕರ್ನಾಟಕ ಜನತೆಯ ಸ್ವಾಭಿಮಾನವನ್ನು ಸರ್ಕಾರ ಕೆಣಕಿದೆ. ಈ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲದು," ಎಂದು ಪುನರುಚ್ಚರಿಸಿದರು. 

"ನಾಗಪುರ ಎಜುಕೇಶನ್‌ ಪಾಲಿಸಿಯನ್ನು ಕರ್ನಾಟಕಕ್ಕೆ ತರುವುದು ಬೇಡ. ರೋಹಿತ್‌ ಚಕ್ರತೀರ್ಥನಂತ ಅಯೋಗ್ಯನಿಂದ ಇಡೀ ನಾಡಿನ ಜನತೆ ತಲೆ ತಗ್ಗಿಸುವಂತಾಗಿದೆ. ಇದಲ್ಲದೆ, ರಾಜ್ಯ ಬಿಜೆಪಿ ಸರ್ಕಾರದ ಕೆಟ್ಟ ಆಡಳಿತದ ವಿರುದ್ಧ ಜನ ರೋಸಿಹೋಗಿದ್ದು, ಜನರೇ ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ. ಕಾಂಗ್ರೆಸ್‌ ಜನ ಹೋರಾಟವನ್ನು ಬೆಂಬಲಿಸಲಿದೆ," ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕರ ಧರಣಿಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವರಾದ ಆರ್ ವಿ ದೇಶಪಾಂಡೆ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ರಮೇಶ್‌ ಬಾಬು, ಮುಖಂಡರಾದ ಬೋಸರಾಜ್, ಡಿ ಆರ್ ಪಾಟೀಲ್, ಹುಲಗೇರಿ, ಬಸನಗೌಡ ದದ್ದಲ್, ಜೈರಾಮ್ ರಮೇಶ್, ಪ್ರಕಾಶ್ ರಾಥೋಡ್, ಡಾ ಅಜಯಕುಮಾರ್ ಸಿಂಗ್, ಕುಸುಮ ಶಿವಳ್ಳಿ, ಖನೀಜ್ ಫಾತಿಮಾ ಇತರರು ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್