ಭತ್ತ, ರಾಗಿ ಉತ್ಪನ್ನ | ಖರೀದಿ ಕೇಂದ್ರ ತೆರೆಯಿರಿ, ಬೆಂಬಲ ಬೆಲೆ ಹೆಚ್ಚಿಸಿ: ಬೊಮ್ಮಾಯಿಗೆ ದಿನೇಶ್‌ ಗೂಳಿಗೌಡ ಮನವಿ

MLA Dinesh Gooligowda-Bommai
  • ಭತ್ತ, ರಾಗಿ ಬೆಳೆಯುವ ಎಲ್ಲ ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ತೆರೆಯಿರಿ
  • ಭತ್ತ, ರಾಗಿ ಖರೀದಿಗೆ ವಿಧಿಸಿರುವ ಮಿತಿಯನ್ನು ತೆಗೆದುಹಾಕಬೇಕು

ಮಂಡ್ಯ ಜಿಲ್ಲೆಯಲ್ಲಿ ಮುಂಗಾರು ಋತುವಿನ ಭತ್ತ ಮತ್ತು ರಾಗಿಯನ್ನು ಖರೀದಿ ಮಾಡಲು ಕೂಡಲೇ ಖರೀದಿ ಕೇಂದ್ರ ತೆರೆಯಿರಿ ಎಂದು ವಿಧಾನಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಮುಂಗಾರು ಬೆಳೆಗಳನ್ನು ಮಾರಾಟ ಮಾಡಲು ರೈತರಿಗಾಗಿ ಸರ್ಕಾರ ಇದುವರೆಗೂ ಖರೀದಿ ಕೇಂದ್ರಗಳನ್ನು ತೆರೆದಿಲ್ಲ ಹಾಗೂ ಯಾವುದೇ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ ಮಾಡಿಲ್ಲ ಎಂದಿರುವ ಅವರು, ರೈತರ ಅನುಕೂಲಕ್ಕಾಗಿ ತುರ್ತಾಗಿ ರಾಗಿ ಮತ್ತು ಭತ್ತಕ್ಕೆ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಒತ್ತಾಯಿಸಿದ್ದಾರೆ.

ಪ್ರತಿ ರೈತರಿಂದ ಇಂತಿಷ್ಟೇ ಪ್ರಮಾಣದ ಭತ್ತ, ರಾಗಿಯನ್ನು ಖರೀದಿಸಬೇಕು ಎಂದು ಮಾರಾಟದ ಮೇಲೆ ವಿಧಿಸಿರುವ ಮಿತಿಯನ್ನು ತೆಗೆದುಹಾಕಬೇಕು. ತುರ್ತಾಗಿ ಖರೀದಿ ಕೇಂದ್ರ ತೆರೆದು ರೈತರ ನೋಂದಣಿ ಆರಂಭಿಸಬೇಕು. ಈ ಕುರಿತು ಸಮಸ್ಯೆಗಳಿಗೆ ಮುಖ್ಯಮಂತ್ರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಗೂಳಿಗೌಡ ವಿನಂತಿಸಿದ್ದಾರೆ.

ಗೂಳಿಗೌಡ ಅವರ ಮನವಿ ಪತ್ರದಲ್ಲಿ ಏನಿದೆ?
"ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸುಮಾರು 81,459 ಹೆಕ್ಟೇರ್ ವಿಸ್ತೀರ್ಣದಲ್ಲಿ ಭತ್ತದ ಬೆಳೆಯಲಾಗಿದ್ದು, ಅಂದಾಜು 50 ಲಕ್ಷ ಕ್ವಿಂಟಾಲ್ ಭತ್ತ ಉತ್ಪಾದನೆಯಾಗಲಿದೆ. ಸುಮಾರು 50,000 ಹೆಕ್ಟೇರ್ ವಿಸ್ತೀರ್ಣದಲ್ಲಿ ರಾಗಿ ಬೆಳೆಯಲಾಗಿದ್ದು, ಸುಮಾರು 10 ಲಕ್ಷ ಕ್ವಿಂಟಾಲ್ ರಾಗಿ ಇಳವರಿ ಸಿಗಲಿದೆ ಎಂದು ಅಂದಾಜು ಮಾಡಲಾಗಿದೆ. ಭತ್ತ, ರಾಗಿ ಕಟಾವಿನ ಸಮಯ ತೀರಾ ಹತ್ತಿರದಲ್ಲಿದ್ದರೂ, ಸರ್ಕಾರ ಇದುವರೆಗೂ ಖರೀದಿ ಕೇಂದ್ರ ತೆರೆದು ನೋಂದಣಿ ಕಾರ್ಯ ಆರಂಭಿಸಿಲ್ಲ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ" ಎಂದು ಗೂಳಿಗೌಡ ಅವರು ಜಿಲ್ಲೆ ಭತ್ತ ಮತ್ತು ರಾಗಿ ಬೆಳೆಗಾರರ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ತುಂಗಭದ್ರಾ ನೀರು ಹರಿಸಿ, ಅನ್ನದಾತರ ಬೆಳೆ ಉಳಿಸಿ; ರೈತರ ಒತ್ತಾಯ

"ಕೃಷಿ ಸಲಕರಣೆ, ಬಿತ್ತನೆ ಬೀಜ, ರಸಗೊಬ್ಬರ, ಬೆಳೆ ಔಷಧಿಗಳ ದರ ಹೆಚ್ಚಳ, ಬೆಳೆಗಳ ಬೆಲೆ ಕುಸಿತ, ಸಾಲದಿಂದ ರೈತರ ನಿತ್ಯ ಜೀವನ ಕಷ್ಟದಾಯಕವಾಗಿದೆ. ಇಂತಹ ಸಂದರ್ಭದಲ್ಲಿ ಖರೀದಿ ಕೆಂದ್ರ ತೆರೆಯುವುದು ಇನ್ನಷ್ಟು ತಡವಾದಲ್ಲಿ ದಾಸ್ತಾನು ಮಾಡಲು ಸ್ಥಳವಿಲ್ಲದೆ ರೈತರು ಮಧ್ಯವರ್ತಿಗಳ ಮೋಸಕ್ಕೆ ಗುರಿಯಾಗಿ ನಷ್ಟ ಅನುಭವಿಸುತ್ತಾರೆ. ಹಾಗಾಗಿ ಸರ್ಕಾರ ರೈತರ ಹಿತ ಕಾಪಾಡುವ ದೃಷ್ಟಿಯಿಂದ ಕೂಡಲೇ ಬೆಂಬಲ ಬೆಲೆ ಹೆಚ್ಚಳ ಹಾಗೂ ಮಂಡ್ಯ ಜಿಲ್ಲೆಯ ಜೊತೆಗೆ ಮೈಸೂರು, ಚಾಮರಾಜನಗರ, ಮಡಿಕೇರಿ, ಹಾಸನ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಕೂಡಲೇ ನೋಂದಣಿ ಆರಂಭಿಸಬೇಕು" ಎಂದು ದಿನೇಶ್‌ ಗೂಳಿಗೌಡ ಒತ್ತಾಯಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app