ದೇಶದ ನಿಜ ಚರಿತ್ರೆಯ ಭಯದಿಂದ ಆರ್‌ಎಸ್‌ಎಸ್‌ ಚರಿತ್ರೆ ತಿರುಚುತ್ತಿದೆ: ಸಿದ್ದರಾಮಯ್ಯ

  • ವೈಫಲ್ಯ ಮುಚ್ಚಿಕೊಳ್ಳಲು ಧರ್ಮ, ಜಾತಿ ಸಂಘರ್ಷದ ಬಗ್ಗೆ ಮಾತನಾಡುತ್ತಾರೆ
  • ದೇಶದಲ್ಲಿ ಸಮೀಕ್ಷೆಗಳೇ ನಡೆಯದಂತೆ ಮೋದಿ ಸಂಸ್ಥೆಗಳ ಕುತ್ತಿಗೆ ಹಿಸುಕುತ್ತಿದ್ದಾರೆ

“ಆರ್‌ಎಸ್‌ಎಸ್‌ ಈ ದೇಶದ್ದಾ? ಅವರೇನು ದ್ರಾವಿಡರಾ? ದ್ರಾವಿಡರು ಈ ದೇಶದವರು. ಇದನ್ನೆಲ್ಲಾ ಪ್ರಶ್ನಿಸುತ್ತಾ ಹೋದರೆ ಏನಾಗುತ್ತದೆ ಗೊತ್ತಾ? ಅದಕ್ಕೆ ಚರಿತ್ರೆಯನ್ನು ಕೆದಕಲು ಹೋಗಬಾರದು” ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ದಿವಂಗತ ಜವಾಹರ್‌ಲಾಲ್‌ ನೆಹರು ಪುಣ್ಯಸ್ಮರಣೆಯಲ್ಲಿ ಅವರು ಮಾತನಾಡಿದರು.

“ಯುವಕರು, ದುಡಿಯುವ ಜನ ಸಮುದಾಯಗಳು ಈ ದೇಶದ ನಿಜವಾದ ಚರಿತ್ರೆ ಓದಬೇಕು. ನಿಜವಾದ ಚರಿತ್ರೆಯನ್ನು ಅರಿತುಕೊಂಡರೆ ಏನಾಗಬಹುದು ಎನ್ನುವುದು ಆರ್‌ಎಸ್‌ಎಸ್‌ ನವರಿಗೆ ಗೊತ್ತಿದೆ ಮತ್ತು ನಿಜವಾದ ಚರಿತ್ರೆ ಬಗ್ಗೆ ಅವರಿಗೆ ಭಯವಿದೆ. ಈ ಕಾರಣಕ್ಕಾಗಿಯೇ ಇತಿಹಾಸವನ್ನು ತಿರುಚುತ್ತಾರೆ. ಪಠ್ಯ ಪುಸ್ತಕಗಳ ಸಮಿತಿಗೆ ಚಕ್ರತೀರ್ಥ ಅಂತರವನ್ನು ಹಾಕಿರುವುದೇ ಈ ಉದ್ದೇಶಗಳಿಗೆ” ಎಂದು ದೂರಿದರು.

“ರೋಹಿತ್ ಚಕ್ರತೀರ್ಥ ಎನ್ನುವ ಒಬ್ಬನಿಗೆ ಮಕ್ಕಳ ಪಠ್ಯಪುಸ್ತಕ ರೂಪಿಸುವ ಜವಾಬ್ದಾರಿ ನೀಡಲಾಗಿದೆ. ಇದಕ್ಕಿಂತ ಮೂರ್ಖತನವನ್ನು ನಾನು ನೋಡಿಲ್ಲ. ಈತ ಹೆಡಗೇವಾರ್‌ಗಿಂತ ಒಂದು ಹೆಜ್ಜೆ ಮುಂದಿದ್ದಾನೆ. ಅಪ್ರತಿಮ ದೇಶಭಕ್ತ ಭಗತ್‌ಸಿಂಗ್‌ ಪಠ್ಯವನ್ನು ತೆಗೆದು ಹೆಡಗೇವಾರ್ ಭಾಷಣ ಹಾಕಿದ್ದಾನೆ. ಭಗತ್‌ಸಿಂಗ್‌ ಗಿಂತ ದೇಶಭಕ್ತ ಬೇಕಾ” ಎಂದು ಪ್ರಶ್ನಿಸಿದರು.

ಈ ಸುದ್ದಿ ಓದಿದ್ದೀರಾ? ಸಚಿವಾಲಯ ಸಿಬ್ಬಂದಿ ಬಂದ್‌ ಯಶಸ್ವಿ: ವಿಧಾನಸೌಧ ಬಿಕೋ

“ಪಂಡಿತ್ ಜವಾಹರಲಾಲ್ ನೆಹರೂ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಪ್ರಜಾತಂತ್ರದ ಆಧಾರದಲ್ಲಿ ದೇಶವನ್ನು ಕಟ್ಟಿ ನಿಲ್ಲಿಸಿದ್ದು ಮಾತ್ರವಲ್ಲದೆ, ಪ್ರಜಾಪ್ರಭುತ್ವದ ಬೇರುಗಳು ದೇಶದಲ್ಲಿ ಆಳವಾಗಿ ಬೇರೂರಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡರು. ಸಂವಿಧಾನ ಬದ್ಧವಾದ ಸಂಸ್ಥೆಗಳನ್ನು ರೂಪಿಸಿ ಅವುಗಳಿಗೆ ಶಕ್ತಿ ತುಂಬಿದರು. ಹೀಗಾಗಿ ದೇಶ ಈ ಮಟ್ಟದ ಪ್ರಗತಿ ಪಥದಲ್ಲಿ ಮುನ್ನಡೆದು ಬರಲು ಸಾಧ್ಯವಾಯಿತು” ಎಂದು ವಿವರಿಸಿದರು.

“ಬ್ರಿಟಿಷರು ಭಾರತ ಬಿಟ್ಟು ಹೊರಟಾಗ ಇಲ್ಲಿ ಏನಿತ್ತು? ಶಿಕ್ಷಣ, ಆರೋಗ್ಯ, ನೀರಾವರಿ, ಕೃಷಿ, ತಂತ್ರಜ್ಞಾನ, ವಿಜ್ಞಾನ ಸೇರಿ ಪ್ರತಿ ಕ್ಷೇತ್ರವನ್ನೂ ಸೊನ್ನೆಯಿಂದ ಆರಂಭಿಸಿ ಹೊಸದಾಗಿ ನಿರ್ಮಿಸಿದರು. ಆಗ ದೇಶದ ಸಾಕ್ಷರತಾ ಪ್ರಮಾಣ ಶೇ.15ರಿಂದ 18ರಷ್ಟು ಇತ್ತು. ಇಂದು ಸಾಕ್ಷರತಾ ಪ್ರಮಾಣ ಶೇ.75ರಿಂದ 80ಕ್ಕೆ ತಲುಪಲು ಅಂದು ನೆಹರೂ ಹಾಕಿಕೊಟ್ಟ ಅಡಿಪಾಯಗಳೇ ಮುಖ್ಯ ಕಾರಣ. ಆದರೆ, ಈಗಿನ ಪ್ರಧಾನಿ ನರೇಂದ್ರ ಮೋದಿ ಇದಕ್ಕೆಲ್ಲಾ ತದ್ವಿರುದ್ಧ” ಎಂದು ಪ್ರತಿಪಾದಿಸಿದರು.

“ದೇಶದ ನಿರುದ್ಯೋಗ, ಕೃಷಿ, ಆರ್ಥಿಕತೆ ಪ್ರತಿಯೊಂದನ್ನೂ ಸಮೀಕ್ಷೆ ನಡೆಸಿ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲ ಆಗುವಂತಹ ಸಂಸ್ಥೆಗಳನ್ನು ನೆಹರೂ ಮತ್ತು ನಂತರದವರು ರೂಪಿಸಿದ್ದರು. ಆದರೆ ಮೋದಿ ಅವರು ಎಲ್ಲಾ ಸಂಸ್ಥೆಗಳ ಕುತ್ತಿಗೆ ಹಿಸುಕುತ್ತಿದ್ದಾರೆ. ಸಮೀಕ್ಷೆಗಳೇ ನಡೆಯದಂತೆ, ಖಾಸಗಿ ಸಂಸ್ಥೆಗಳು ನಡೆಸುವ ಸಮೀಕ್ಷೆಗಳೂ ಬಹಿರಂಗಗೊಳ್ಳದಂತೆ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ” ಎಂದು ದೂರಿದರು.

“ದೇಶದ ಯುವ ಸಮೂಹ ಮತ್ತು ವಿದ್ಯಾರ್ಥಿ ಸಮೂಹಕ್ಕೆ ಅಗತ್ಯ ಶಿಕ್ಷಣ, ಉದ್ಯೋಗ, ಪ್ರಗತಿ ಈ ಯಾವುದರ ಬಗ್ಗೆಯು ಅವರು ಮಾತನಾಡುವುದಿಲ್ಲ. ಈ ಕ್ಷೇತ್ರಗಳಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಧರ್ಮ ಮತ್ತು ಜಾತಿ ಸಂಘರ್ಷಗಳ ಬಗ್ಗೆಯೇ ಮಾತನಾಡುತ್ತಾ ದೇಶದ ದಾರಿ ತಪ್ಪಿಸುತ್ತಿದ್ದಾರೆ” ಎಂದು ಆರೋಪಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್