ಗುಲಾಮಗಿರಿಯಿಂದ ಹೊರಬಂದು ದೇಶದ ಸ್ಥಿತಿ ನೋಡಿ: ಪ್ರಲ್ಹಾದ್ ಜೋಶಿಗೆ ಸಿದ್ದರಾಮಯ್ಯ ತಿರುಗೇಟು

Siddaramaiah
  • ಸಿದ್ಧರಾಮಯ್ಯ ಪುಸ್ತಕ ಸುಳ್ಳಿನ ಕಂತೆ: ಪ್ರಲ್ಹಾದ್‌ ಜೋಶಿ ಹೇಳಿಕೆಗೆ ಸಿದ್ದರಾಮಯ್ಯ ಗುದ್ದು
  • ವಾಸ್ತವ ಅರ್ಥವಾದ ಮೇಲೆ ಶಾಶ್ವತವಾಗಿ ಅಧಿಕಾರದಿಂದ ಹೊರಗಿರುತ್ತೀರಿ: ಕುಟುಕು

ಪ್ರಲ್ಹಾದ್‌ ಜೋಶಿಯವರೆ, ನನ್ನನ್ನು ಹೀಗಳೆಯುವ ಮೊದಲು ತಾವು ಆರ್‌ಎಸ್‍ಎಸ್, ಮೋದಿ ಹಾಗೂ ಅಮಿತ್‌ ಶಾ ಗುಲಾಮಗಿರಿಯಿಂದ ಹೊರಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದ್ದಾರೆ.

ʼಮೋದಿ ಸರ್ಕಾರಕ್ಕೆ ವರುಷ ಎಂಟು; ಅವಾಂತರ ನೂರೆಂಟುʼ ಎಂಬ ಪುಸ್ತಕ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, “ಸಿದ್ಧರಾಮಯ್ಯ ಪುಸ್ತಕ ಸುಳ್ಳಿನ ಕಂತೆ” ಎಂಬ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಸಿದ್ದರಾಮಯ್ಯ ಸೋಮವಾರ ಪತ್ರಿಕಾ ಪ್ರಕಟಣೆ ಹೊರಡಿಸಿ, “ಜೋಶಿಯವರೇ, ಅದಾನಿ, ಅಂಬಾನಿಗಳ ಗುಲಾಮಗಿರಿಯಿಂದ ಹೊರಬಂದು, ಕನ್ನಡದ ಸ್ವಾಭಿಮಾನವನ್ನು ಎತ್ತಿ ಹಿಡಿಯಿರಿ” ಎಂದು ತಿವಿದಿದ್ದಾರೆ.

“ರಾಷ್ಟ್ರದ ಸಾಲದ ಬಗ್ಗೆ ನಾನು ವಿಶೇಷವಾಗಿ ವಿವರಿಸಿದ್ದೇನೆ. ಜೋಶಿಯವರು ಪಾರ್ಲಿಮೆಂಟಿನಲ್ಲಿ ಕೂರುವುದರಿಂದ, ಒಕ್ಕೂಟ ಸರ್ಕಾರದ ಸಚಿವರಾಗಿರುವುದರಿಂದ ಈ ಕುರಿತು ಮಾಹಿತಿ ತರಿಸಿಕೊಳ್ಳುವುದು ಕಷ್ಟದ ವಿಚಾರವಲ್ಲ. ಜೂನ್‌ 30ರಂದು ಭಾರತದ ರಿಸರ್ವ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಅವರು ವಿದೇಶಿ ಸಾಲದ ಬಗ್ಗೆ ಪ್ರೆಸ್ ಸ್ಟೇಟ್ ಮೆಂಟ್ ಬಿಡುಗಡೆ ಮಾಡಿದ್ದಾರೆ. ಅದರಂತೆ 2013 ರಲ್ಲಿ ಭಾರತದ ವಿದೇಶಿ ಸಾಲ 409.4 ಬಿಲಿಯನ್ ಡಾಲರುಗಳಷ್ಟಿತ್ತು [2013 ರಲ್ಲಿ ಸರಾಸರಿ ರೂಪಾಯಿ ಮೌಲ್ಯ 58.55 ರೂಗಳಷ್ಟಿತ್ತು ಆ ಲೆಕ್ಕದಲ್ಲಿ ನೋಡಿದರೆ 23.97 ಲಕ್ಷ ಕೋಟಿಗಳಷ್ಟು ವಿದೇಶಿ  ಸಾಲ ಯುಪಿಎ ಸರ್ಕಾರ ಅವಧಿಯಲ್ಲಿತ್ತು]. ಜೂನ್ 2022 ರಲ್ಲಿ  ವಿದೇಶಿ ಸಾಲ 620.7 ಬಿಲಿಯನ್ ಡಾಲರುಗಳಿಗೇರಿದೆ, ಅಂದರೆ 49004265000000 ಕೋಟಿ ರೂಪಾಯಿಗಳ[ 49.5 ಲಕ್ಷ ಕೋಟಿ ರೂಗಳು]ಷ್ಟಾಯಿತು. ರೂಪಾಯಿಯ ಮೌಲ್ಯ ಒಂದು ಡಾಲರಿಗೆ ಈಗ  79 ರೂಗೆ ಕುಸಿದಿದೆ. 2013-14 ರಲ್ಲಿ ಮೋದಿಯವರು ಸೇರಿದಂತೆ ಬಿಜೆಪಿ ಲೀಡರುಗಳು ಏನು ಮಾತಾಡಿದ್ದರು ಎಂಬುದು ನಿಮಗೆ ಮರೆತು ಹೋಯಿತೆ ಜೋಶಿಯವರೆ” ಎಂದು ಪ್ರಶ್ನಿಸಿದ್ದಾರೆ. 

“ನರೇಂದ್ರ ಮೋದಿಯವರು ಆಗಸ್ಟ್ 24, 2013 ರಂದು ಗುಜರಾತಿನ ರಾಜ್ ಕೋಟೆಯಲ್ಲಿ ನಿಂತು ಮಾತನಾಡಿದ್ದರು. ಆ ದಿನ ಭಾರತದ ರೂಪಾಯಿಯ ಮೌಲ್ಯ ಡಾಲರಿನ ಎದುರಿಗೆ 63.76 ಬೆಲೆ ಇತ್ತು. ಇಂದು ರೂಪಾಯಿಯ ಮೌಲ್ಯ ಪಾತಾಳಕ್ಕೆ ಕುಸಿದಿದೆ 80 ರೂಪಾಯಿ ದಾಟುವ ಹಂತ ಬಂದಿದೆ. ಈಗ ದೇಶದ ಜನರು ಹೇಳಬೇಕಾದ ಪರಿಸ್ಥಿತಿ ಬಂದಿದೆ. ಆದರೆ. ಮೋದಿ ಸರ್ಕಾರದ ಪರವಾಗಿ ಪ್ರಹ್ಲಾದ್ ಜೋಶಿಯವರು ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ” ಎಂದು ಹರಿಹಾಯ್ದಿದ್ದಾರೆ. 

“ಜೋಶಿಯವರೆ ಒಮ್ಮೆ ದೇಶದ ಜಿಡಿಪಿ ಬೆಳವಣಿಗೆಯನ್ನು ಒಮ್ಮೆ ನೋಡಿ. 2014 ರಲ್ಲಿ ಶೇ.7.41 ರಷ್ಟಿದ್ದ ಜಿಡಿಪಿ ಬೆಳವಣಿಗೆ ದರ 2016 ರ ನಂತರ ಒಂದೆ ಸಮನೆ ಕುಸಿಯುತ್ತಿದೆ. 2017 ರಲ್ಲಿ ಶೇ.6.80, 2018 ರಲ್ಲಿ ಶೇ.6.53, 2019 ರಲ್ಲಿ ಶೇ.4.04 ರಷ್ಟು, 2021 ರಲ್ಲಿ ಮೈನಸ್ ಶೇ.7.96 ರಷ್ಟಾಗಿದೆ. ಈ ಮಾಹಿತಿಯನ್ನು ಕೇಂದ್ರ ಸರ್ಕಾರವೆ ಬಿಡುಗಡೆ ಮಾಡಿದೆ.  ಅದರ ಪ್ರಕಾರ ಯುಪಿಎ ನ ಮನಮೋಹನ್ ಸಿಂಗ್  ಸರ್ಕಾರದ ಜಿಡಿಪಿ ಬೆಳವಣಿಗೆ ದರ ಶೇ. 6.81 ರಷ್ಟಿತ್ತು. ಮೋದಿ ಸರ್ಕಾರದ ಜಿಡಿಪಿ ಬೆಳವಣಿಗೆ ದರ ಶೇ. 5.9 ನ್ನೂ ದಾಟುತ್ತಿಲ್ಲ. ಹಾಗಿದ್ದರೆ ಯಾರದ್ದು ಕೆಟ್ಟ ಆಡಳಿತ. ಯಾರು ದೇಶವನ್ನು ಬರ್ಬಾದು ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿದ್ದಾರೆ.

“ಮನಮೋಹನಸಿಂಗ್ ಅವರ ನೇತೃತ್ವದ ಸರ್ಕಾರ 2013-14 ರಲ್ಲಿ ಪೆಟ್ರೋಲ್ ಮೇಲೆ 9.21 ರೂಗಳಷ್ಟು ಮತ್ತು ಡೀಸೆಲ್ ಮೇಲೆ 3.45 ರೂ ತೆರಿಗೆ ವಿಧಿಸುತ್ತಿತ್ತು.  ಇದರಲ್ಲಿ ಸೆಸ್ ಇರಲಿಲ್ಲ. ಆದರೆ ಮೋದಿಯವರ ಸರ್ಕಾರ 2021 ರಲ್ಲಿ ಪೆಟ್ರೋಲ್, ಡೀಸೆಲ್ ದರಗಳನ್ನು ಪರಿಷ್ಕರಿಸಿದ ನಂತರವೂ ಸಹ ಪೆಟ್ರೋಲ್ ನಿಂದ 26.5 ರೂ ಹಾಗೂ ಡೀಸೆಲ್ ಮೇಲೆ 20 ರೂ ಸೆಸ್ ಅನ್ನು ಸಂಗ್ರಹಿಸಲಾಗುತ್ತಿದೆ. ಪೆಟ್ರೋಲ್, ಡೀಸೆಲ್ ಮುಂತಾದ ಸೆಸ್ ಗಳಿಂದಲೆ ಮೋದಿಯವರ ಸರ್ಕಾರ ಕಳೆದ 8 ವರ್ಷಗಳಿಂದ 26 ಲಕ್ಷ ಕೋಟಿ ರೂಗಳನ್ನು ಸಂಗ್ರಹಿಸಿದೆ” ಎಂದು ತಿಳಿಸಿದ್ದಾರೆ.

“ಮೋದಿ ಸರ್ಕಾರದ ಮಹಾ ಜನದ್ರೋಹವೆಂದರೆ ಅದಾನಿ, ಅಂಬಾನಿ ಮುಂತಾದ ಕಾರ್ಪೋರೇಟ್ ಧಣಿಗಳ ಆದಾಯದ ಮೇಲಿನ ತೆರಿಗೆಯನ್ನು ಶೇ.30 ರಿಂದ ಶೇ. 22 ಕ್ಕೆ ಇಳಿಸಲಾಗಿದೆ. ಜನರ ಮೇಲೆ ತೆರಿಗೆ ಹೊರೆಯನ್ನು 2013 ಕ್ಕಿಂತ 2.7 ಪಟ್ಟು ಹೆಚ್ಚಿಸಲಾಗಿದೆ. ರಾಜ್ಯಕ್ಕೆ ಉದಾರವಾಗಿ ಅನುದಾನಗಳನ್ನು ಕೊಟ್ಟು ಉದ್ಧಾರ ಮಾಡಿದ್ದೇವೆ ಎಂದು ಬೇರೆ ಹೇಳಿಕೆ ಕೊಟ್ಟಿದ್ದೀರಿ. ಅಂದರೆ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯದ ಮೇಲೆ ಮಾಡುತ್ತಿರುವ ಆರ್ಥಿಕ, ರಾಜಕೀಯ ದಬ್ಬಾಳಿಕೆಗಳನ್ನು ರಾಜ್ಯದ ಸಂಸದರಾದ ನೀವೆ ಸಮರ್ಥಿಸುತ್ತಿದ್ದೀರಿ. ಹಾಗಾಗಿ ರಾಜ್ಯವು ಅನುಭವಿಸುತ್ತಿರುವ ಎಲ್ಲ ವೇದನೆ, ನೋವುಗಳಿಗೆ ನೀವೆ ಕಾರಣ.  ರಾಜ್ಯದ ಪರವಾಗಿ ಪ್ರತಿಭಟನೆಗಳನ್ನು ದಾಖಲಿಸಿ ನ್ಯಾಯಯುತವಾಗಿ ಕೊಡಿಸಬೇಕಾದ ಅನುದಾನಗಳನ್ನು, ತೆರಿಗೆ ಹಂಚಿಕೆಯನ್ನು ಕೊಡಿಸಬೇಕಾದ ಜವಾಬ್ಧಾರಿ ನಿಮ್ಮ ಮೇಲೆ ಇದೆಯಲ್ಲವೆ?” ಎಂದು ವಿವರಿಸಿದ್ದಾರೆ.

“ಕೋವಿಡ್ ಅನ್ನು ಸಮರ್ಥವಾಗಿ ನಿಭಾಯಿಸಿದ್ದೇವೆಂದು ಜೋಶಿಯವರು ಹೇಳಿದ್ದಾರೆ. ಹಾಗಿದ್ದರೆ ಕಳೆದ ವರ್ಷ ಕೋವಿಡ್ ಅನ್ನು ಅತ್ಯಂತ ಕೆಟ್ಟದಾಗಿ ನಿಭಾಯಿಸಿದ ವಿಶ್ವದ 5 ಜನ ಅತಿ ಕೆಟ್ಟ ನಾಯಕರಲ್ಲಿ ಮೋದಿಯವರು ಮೊದಲ ಸ್ಥಾನದಲ್ಲಿದ್ದಾರೆ ಎಂದು ಭಾರತದ, ವಿಶ್ವದ ಅನೇಕ ಪತ್ರಿಕೆಗಳು ವರದಿ ಮಾಡಿದ್ದೇಕೆ? ನಿಮ್ಮ ಸರ್ಕಾರಕ್ಕೆ ಕನಿಷ್ಟ ಆಕ್ಸಿಜನ್, ಬೆಡ್, ವೆಂಟಿಲೇಟರುಗಳನ್ನು ಸರಿಯಾದ ಸಮಯಕ್ಕೆ ಕೊಡಲಾಗಲಿಲ್ಲ. ಪಿಎಂ ಕೇರ್ಸ್ ಎಂಬ ಹಣ ಸಂಗ್ರಹಿಸುವ ಹೊಸ ಉಪಾಯವನ್ನೂ ಮಾಡಿದಿರಿ. ಅದರಲ್ಲಿ ರಾಜ್ಯಕ್ಕೆ ಎಷ್ಟು ಕೊಟ್ಟಿದ್ದೀರಿ ಹೇಳಿ?” ಎಂದು ಕೇಳಿದ್ದಾರೆ.  

“ಜೋಶಿಯವರೆ ನಿಮ್ಮ ಸರ್ಕಾರದ ದ್ರೋಹಗಳ ಪಟ್ಟಿ ಮುಗಿಯುವುದೆ ಇಲ್ಲ. ದೇಶದ ಆರ್ಥಿಕ ಪರಿಸ್ಥಿತಿ ವಿಪರೀತ ಹದಗೆಟ್ಟಿದೆ. ದೇಶದಲ್ಲಿ ಸಂತೋಷವೆಂಬುದು ತುಂಬಿ ತುಳುಕಾಡುತ್ತಿದ್ದರೆ ಅದು ನಿಮ್ಮ ಸರ್ಕಾರಗಳ ಮಂತ್ರಿಗಳಲ್ಲಿ, ನಿಮ್ಮ ತಾಳಕ್ಕೆ ಕುಣಿಯುವ ಅಧಿಕಾರಿಗಳಲ್ಲಿ ಹಾಗೂ 100 ಜನ ಕಾರ್ಪೊರೇಟ್ ಬಂಡವಾಳಿಗರಲ್ಲಿ, ಹೆಚ್ಚೆಂದರೆ ಶೇ.1 ರಷ್ಟು ಜನರಲ್ಲಿ ಮಾತ್ರ. ಆದರೂ ಶೇ. 30 ರಷ್ಟು ಅಮಾಯಕ ಜನರು ನಿಮ್ಮ ದ್ವೇಷದ ರಾಜಕಾರಣ, ಉನ್ಮಾದಕಾರಿ ಮಾತುಗಳ ಕಾರಣಕ್ಕೆ ಮತ ನೀಡುತ್ತಿದ್ದಾರೆ. ವಾಸ್ತವಾಂಶ ಅರ್ಥವಾದ ಕೂಡಲೆ ನೀವು ಶಾಶ್ವತವಾಗಿ ಅಧಿಕಾರದಿಂದ ಹೊರಗಿರುತ್ತೀರಿ ಎಂಬುದು ತಿಳಿದಿರಲಿ” ಎಂದು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್