
- ಕಾಡಾನೆ ಹಾವಳಿಯಿಂದ ಬೆಳೆ ಹಾನಿ; ಭಯ, ಆರ್ಥಿಕ ಸಂಕಷ್ಟದಲ್ಲಿ ರೈತರು
- ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳು, ಅರಣ್ಯ ಇಲಾಖೆ ವಿರುದ್ಧ ಜನಾಕ್ರೋಶ
ಕಾಡಾನೆ ಹಾವಳಿಯಿಂದ ತತ್ತರಿಸಿರುವ ಸಕಲೇಶಪುರದ ಜನತೆ, ತಮ್ಮ ಸಂಕಷ್ಟಕ್ಕೆ ಸ್ಪಂದಿಸದ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನಗೊಂಡು ಚುನಾವಣೆ ಬಹಿಷ್ಕರಿಸುವ ಅಭಿಯಾನ ಆರಂಭಿಸಿದ್ದಾರೆ.
"ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಾದ್ಯಂತ ಕಾಡಾನೆಗಳು ನಿರಂತರ ಸಂಚಾರ, ಬೆಳೆ ಪ್ರದೇಶಕ್ಕೆ ದಾಳಿ ಮಾಡುತ್ತಿವೆ. ಕಾಫಿ, ಭತ್ತ ಸೇರಿದಂತೆ ಹಲವು ಬೆಳೆಗಳು ಸಂಪೂರ್ಣ ನಾಶವಾಗುತ್ತಿದ್ದು, ಜನರು ಸಂತ್ರಸ್ತರಾಗಿದ್ದಾರೆ. ಕಾಡಾನೆಗಳ ಹಾವಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಸ್ಥಳೀಯ ಶಾಸಕರು, ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ವಹಿಸುತ್ತಿಲ್ಲ" ಎಂಬುದು ಜನರ ಆರೋಪವಾಗಿದೆ.
"ಜನವಸತಿ ಪ್ರದೇಶಗಳಲ್ಲೂ ಆನೆಗಳು ಹಿಂಡಿಂಡಾಗಿ ಓಡಾಡುತ್ತವೆ. ಮನೆಯಿಂದ ಹೊರಬರಲು ಭಯವಾಗುತ್ತದೆ. ಕಾಡಾನೆಗಳ ಭಯಕ್ಕೆ ಕಾಫಿ, ಮೆಣಸು ತೋಟದ ಕೆಲಸಕ್ಕೆ ಕಾರ್ಮಿಕರು ಬರುತ್ತಿಲ್ಲ. ಇತ್ತ ಬೆಳೆ ಹಾನಿ ಪರಿಹಾರವೂ ಸಮರ್ಪಕವಾಗಿಲ್ಲ. ಕಾಡಾನೆಗಳನ್ನು ನಿಯಂತ್ರಿಸುತ್ತಿಲ್ಲ. ಹಾಗಾಗಿ ಕಾಡಾನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡಿ, ಇಲ್ಲವೇ 2023ರ ವಿಧಾನಸಭಾ ಚುನಾವಣೆ ಬಹಿಷ್ಕರಿಸುತ್ತೇವೆ" ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
"ಗೆದ್ದೆ ಗೆಲ್ಲುತ್ತೇವೆ ಈ ಬಾರಿ, ನಮ್ಮ ಮುಂದೆ ಇರುವುದು ಒಂದೇ ದಾರಿ"
ಇಂಥದ್ದೊಂದು ಘೋಷವಾಕ್ಯದಡಿ ಸಕಲೇಶಪುರ, ಆಲೂರು, ಕಟ್ಟಾಯ ಜನರು ವಿಧಾನಸಭಾ ಚುನಾವಣೆ ಬಹಿಷ್ಕಾರದ ಹೋರಾಟಕ್ಕೆ ಸಜ್ಜಾಗಿದ್ದಾರೆ. ಕಾಡಾನೆ ಮಾನವ ಸಂಘರ್ಷದಿಂದ ಇಡೀ ಆಲೂರು-ಸಕಲೇಶಪುರ ತಾಲೂಕಿನ ರೈತರು, ಕಾರ್ಮಿಕರು, ಕೃಷಿ ಕಾರ್ಮಿರು ಹಾಗೂ ಜನಸಾಮಾನ್ಯರ ಬದುಕು ಕಳೆದು ಹೋಗುತ್ತಿದೆ. ಸರ್ಕಾರ, ಅರಣ್ಯ ಇಲಾಖೆಯ ವ್ಯವಸ್ಥೆ ಹಾಳಾಗಿದ್ದು, ನಮ್ಮ ಉಳಿವಿಗೆ ನಾವೇ ದಾರಿ ಹುಡುಕಬೇಕಾಗಿದೆ" ಎಂದು ಕರೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ಕಾಡಾನೆ ದಾಳಿ ಮಾಡಿದರೆ ಗುಂಡು ಹೊಡೆಯುತ್ತೇನೆ: ಮಾಜಿ ಶಾಸಕ ವಿಶ್ವನಾಥ ಆಕ್ರೋಶ
ಈ ಬಗ್ಗೆ ತಾಲೂಕಿನ ಹೆತ್ತೂರು ಹೋಬಳಿಯ ಚಿನ್ನಹಳ್ಳಿ ಕೃಷಿಕ ಬಾಲು ಅವರು ಈ ದಿನ.ಕಾಮ್ಗೆ ಪ್ರತಿಕ್ರಿಯೆ ನೀಡಿದ್ದು, "ನಮ್ಮ ತೋಟದಿಂದ ಐದಾರು ಕಿ.ಮೀ ದೂರದಲ್ಲೇ 10 ಕಾಡಾನೆಗಳಿವೆ. ಅವುಗಳು ಒಂದೇ ಕಡೆ ಇರುವುದಿಲ್ಲ. ನಿರಂತರವಾಗಿ ಎಲ್ಲ ತೋಟಗಳ ಮೇಲೂ ದಾಳಿ ಮಾಡುತ್ತವೆ. ಮತ್ತೆ ಪ್ರತಿ ಬಾರಿ ಬಂದಾಗಲೂ ಬೆಳೆ ಹಾನಿ, ಪಂಪ್ಸೆಟ್, ಮನೆ ಹಾನಿ, ಜೀವ ಹಾನಿ ಎಲ್ಲವೂ ಸಂಭವನೀಯ. ಕಾಫಿ ಗಿಡ ನೆಟ್ಟು ಫಲಾರಂಭವಾಗುವುದಕ್ಕೆ 15 ವರ್ಷ ಸಮಯ ಬೇಕು. ಕಾಡಾನೆಗಳಿಂದ ಒಮ್ಮೆ ಬೆಳೆ ಹಾನಿಯಾದರೆ ರೈತರಿಗೆ ದೊಡ್ಡ ಹೊಡೆತ" ಎಂದು ಅಸಹಾಯಕತೆ ತೋಡಿಕೊಂಡರು.

"ಸ್ಥಳೀಯ ಶಾಸಕರಿಗೂ ಮನವಿ ಮಾಡಿದ್ದು, ಈ ಬಗ್ಗೆ ಸದನದಲ್ಲಿಯೂ ಮಾತನಾಡಿದ್ದಾರೆ. ಆದರೆ ಕೇಂದ್ರ ಸರ್ಕಾರದ ಮೇಲೆ ಆನೆ ಸ್ಥಳಾಂತರಕ್ಕೆ ಒತ್ತಡ ತಂದರೂ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಹೇಳುತ್ತಾರೆ. ಅರಣ್ಯ ಇಲಾಖೆಯಿಂದ ಆನೆ ದಾಳಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಹಾಗಾಗಿ ಬೇಸತ್ತು ಚುನಾವಣಾ ಬಹಿಷ್ಕಾರದ ಅಭಿಯಾನ ಆರಂಭಿಸಿದ್ದೇವೆ. ನಮಗೆ ಸರ್ಕಾರ ಕೊಡುವ ₹3- ₹4 ಸಾವಿರ ಪರಿಹಾರ ಬೇಕಿಲ್ಲ, ಶಾಶ್ವತ ಪರಿಹಾರ ಘೋಷಿಸಲಿ" ಎಂದು ಆಗ್ರಹಿಸಿದರು.