
- ʼಕಾಡಾನೆ ಸಂಪೂರ್ಣ ಸ್ಥಳಾಂತರ ಮಾಡಿ, ಇಲ್ಲವೇ ಚುನಾವಣೆ ಬಹಿಷ್ಕಾರ ಎದುರಿಸಿʼ
- ಉಸ್ತುವಾರಿ ಸಚಿವ, ಶಾಸಕರು, ಅಧಿಕಾರಿಗಳ ಕಾಟಾಚಾರದ ಬೆಳೆ ಹಾನಿ ವೀಕ್ಷಣೆ
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಕಾಡು ಪ್ರಾಣಿ-ಮಾನವ ಸಂಘರ್ಷಕ್ಕೆ ಕೊನೆ ಇಲ್ಲ ಎಂಬಂತಾಗಿದ್ದು, ಬುಧವಾರವೂ ಬೆಳಗೋಡು ಹೋಬಳಿ ಶಿಡಗಳಲೆ ಗ್ರಾಮದ ಹಲವು ರೈತರ ತೋಟಗಳನ್ನು ಕಾಡಾನೆಗಳು ನಾಶ ಮಾಡಿವೆ.
ಗ್ರಾಮದ ರವೀಂದ್ರ, ಜಗದೀಶ್, ಮಲ್ಲಣ್ಣ, ಧರ್ಮಶೇಖರ್ ಎಂಬ ರೈತರು ಸೇರಿದಂತೆ ಇನ್ನೂ ಹಲವು ರೈತರ ಗದ್ದೆ, ತೋಟಗಳು ಕಾಡಾನೆಗಳಿಂದ ಹಾನಿಯಾಗಿದ್ದು, ಭತ್ತ, ಕಾಫಿ, ಅಡಿಕೆ ಹಾಗೂ ಬಾಳೆ ಬೆಳೆಗಳು ನಾಶವಾಗಿವೆ. ಬೆಳೆ ಕಳೆದುಕೊಂಡ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಈ ಬಗ್ಗೆ ಶಿಡಗಳಲೆ ಗ್ರಾಮದ ರೈತ ರಾಮಚಂದ್ರ ಮಾತನಾಡಿ, "ಮಲೆನಾಡು ಪ್ರದೇಶ, ಕಾಫಿ ತೋಟಗಳಲ್ಲಿ ಕೆಲಸ ಮಾಡಿಸಲು ದುಬಾರಿ ಮೊತ್ತದ ಕೂಲಿ ಕೊಡಬೇಕು. ಭೂಮಿ ಹಾಳು ಬಿಡಲಾಗದೆ ಎಷ್ಟೇ ಖರ್ಚಾದರೂ ಕೂಲಿ ಕೊಟ್ಟು, ಬೆಳೆ ಮಾಡುತ್ತಿದ್ದೇವೆ. ಆದರೆ ಮಳೆಯಿಂದ ಬೆಳೆ ಕಳೆದುಕೊಂಡಿದ್ದೆವು, ಈಗ ನಿರಂತರವಾಗಿ ತಾಲೂಕಿನ ರೈತರು ಕಾಡಾನೆಗಳಿಂದ ಬೆಳೆ, ಮನೆ, ಜೀವ ಕಳೆದುಕೊಳ್ಳುವಂತಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಕೃಷಿಕ ಬಾಲು ಈ ದಿನ.ಕಾಮ್ನೊಂದಿಗೆ ಮಾತನಾಡಿ, "ನಿತ್ಯದ ಸಮಸ್ಯೆಯಾಗಿದೆ. ಬೆಳಿಗ್ಗೆ ಎದ್ದರೆ ತಾಲೂಕಿನ ಒಂದಲ್ಲ ಒಂದು ಕಡೆ ಕಾಡಾನೆಗಳಿಂದ ಬೆಳೆ ನಾಶವಾಗಿರುವ ಸುದ್ದಿ ಜೊತೆಗೆ ನಮ್ಮಂತ ರೈತರ ಅಸಹಾಯಕತೆ ಪ್ರತಿಧ್ವನಿಸುತ್ತಲೇ ಇದೆ. ಉಸ್ತುವಾರಿ ಸಚಿವರು, ಶಾಸಕರು, ಅರಣ್ಯಾಧಿಕಾರಿಗಳು ಕೇವಲ ಕಾಟಾಚಾರಕ್ಕೆ ಬಂದು ಹಾನಿಯಾದ ಕ್ಷೇತ್ರ ವೀಕ್ಷಣೆ ಮಾಡಿ ಹೋಗುತ್ತಾರೆಯೇ ಹೊರತು ಪರ್ಯಾಯ ವ್ಯವಸ್ಥೆ ಮಾಡುತ್ತಿಲ್ಲ. ಈ ಕಾಡಾನೆಗಳಿಂದ ತಾಲೂಕಿನ ಜನರಿಗೆ, ಕೃಷಿಕರಿಗೆ, ಕಾರ್ಮಿಕರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು" ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಸಕಲೇಶಪುರ | ಕಾಡಾನೆ ಸ್ಥಳಾಂತರಕ್ಕೆ ಆಗ್ರಹ; ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿರುವ ಜನತೆ!
ತಾಲೂಕಿನಲ್ಲಿ ಮಾನವ-ಕಾಡು ಪ್ರಾಣಿಗಳ ಸಂಘರ್ಷ ಮುಂದುವರಿದಿದ್ದು, ಬೆಳೆ- ಜೀವ ಹಾನಿ ಸಹಜವೆಂಬಂತೆ ಆಗಿದೆ. ಹಾಗಾಗಿ ಈ ಭಾಗದ ಜನರು ನಿತ್ಯ ಆತಂಕದ ವಾತಾವರಣದಲ್ಲಿ ಬದುಕುತ್ತಿದ್ದಾರೆ.
ಅಸಹಾಯಕತೆ, ಆಕ್ರೋಶ, ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಸ್ಥಳೀಯರು ಕಾಡಾನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡಿ, ಶಾಶ್ವತ ಪರಿಹಾರ ಒದಗಿಸಿ; ಇಲ್ಲವೇ ಚುನಾವಣೆ ಬಹಿಷ್ಕಾರ ಎದುರಿಸಿ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಆಲೂರು, ಕಟ್ಟಾಯ, ಸಕಲೇಶಪುರ ಕ್ಷೇತ್ರ ಚುನಾವಣೆ ಚಟುವಟಿಕೆಗಳಿಂದ ತಾಲೂಕಿನ ಜನರು ದೂರ ಉಳಿಯುವಂತೆ ಅಭಿಯಾನ ಆರಂಭಿಸಿದ್ದಾರೆ.