ಸಕಲೇಶಪುರ | ಕಾಡಾನೆ ದಾಳಿಗೆ ಎಸ್ಟೇಟ್ ಕಾರ್ಮಿಕ ಸಾವು

  • ಮಲೆನಾಡಿನಲ್ಲಿ ನಿಲ್ಲದ ಪ್ರಾಣಿ- ಮನುಷ್ಯ ಸಂಘರ್ಷ
  • ಕಾಡಾನೆ ದಾಳಿಗೆ ಅಸುನೀಗಿದ ಎಸ್ಟೇಟ್‌ನ ಕೂಲಿ ಕಾರ್ಮಿಕ 

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಗಾಳಿಗುಡ್ಡ ಗ್ರಾಮದ ದಿವಾನ್ ಎಸ್ಟೇಟ್‍ನಲ್ಲಿ ಕಾಡಾನೆ ದಾಳಿಗೆ ಕಾರ್ಮಿಕನೋರ್ವ ಸಾವನ್ನಪ್ಪಿದ್ದಾನೆ.

ಮೃತಪಟ್ಟವರನ್ನು ತಾಲೂಕಿನ ಕೆಂಪನಾಲೆ ಗ್ರಾಮದ ರವಿ (40) ಎಂದು ಗುರುತಿಸಲಾಗಿದೆ. ದಿವಾನ್ ಎಸ್ಟೇಟ್‍ನಲ್ಲಿ ಸುಮಾರು 4 ಜನ ಕಾರ್ಮಿಕರು ಯಂತ್ರದ ಮೂಲಕ ಗುಂಡಿ ತೋಡುವ ಕೆಲಸದಲ್ಲಿ ನಿರತರಾಗಿದ್ದರು. ಇದೇ ವೇಳೆ ಸಮೀಪದ ತೋಟದಲ್ಲಿ ಕಾಡಾನೆಗಳ ಹಿಂಡು ಸೇರಿತ್ತು.

ಆನೆಗಳ ಹಿಂಡಿನಲ್ಲಿದ್ದ ಪುಂಡಾನೆಯೊಂದು ಕಾರ್ಮಿಕರ ಮೇಲೆ ದಾಳಿ ನಡೆಸಿದ್ದು, ಇತರೆ ಕಾರ್ಮಿಕರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಆದರೆ, ತಪ್ಪಿಸಿಕೊಳ್ಳಲು ಸಾಧ್ಯವಾಗದ ರವಿ ಅವರ ಎದೆಗೆ ತುಳಿದ ಪರಿಣಾಮವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  

ಪ್ರತಿಭಟನೆ:

ಕಾಡಾನೆಗೆ ದಾಳಿಯ ವಿಷಯವನ್ನರಿತ ಬೆಳಗೋಡು ಹೋಬಳಿಯ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು.

ಸಕಲೇಶಪುರ ತಾಲೂಕಿನಲ್ಲಿ ಬೆಳೆ ಮಾತ್ರವಲ್ಲದೆ, ಪದೇಪದೇ ಮನುಷ್ಯರ ಮೇಲೂ ಕಾಡಾನೆ ದಾಳಿ ಮಾಡುತ್ತಿದೆ. ಇದುವರೆಗೂ ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ತೋಟದಲ್ಲಾಗಲಿ, ರಸ್ತೆಯಲ್ಲಾಗಲಿ ಮುಕ್ತವಾಗಿ ಓಡಾಡುವಂತಿಲ್ಲ. ನಿತ್ಯವೂ ಜೀವ ಕೈಯಲ್ಲಿ ಹಿಡಿದು ಆತಂಕದಲ್ಲಿ ಬದುಕುವಂತಾಗಿದೆ. ಆದರೆ ಅಧಿಕಾರಿಗಳು, ಸರ್ಕಾರದವರು ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸುವುದರಲ್ಲಿ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ಕಾಡಾನೆಗಳನ್ನು ಮಾತ್ರ ಹಿಡಿಯುವುದರಿಂದ,  ರೇಡಿಯೋಕಾಲರ್ ಅಳವಡಿಕೆ ಅಥವಾ ರೈಲ್ವೆ ಬ್ಯಾರಿಕೇಡ್ ನಿರ್ಮಾಣದಿಂದಾಗಲಿ ಸಮಸ್ಯೆ ಬಗೆಹರಿಯವುದಿಲ್ಲ. ಕಾಡಾನೆಗಳನ್ನು ಸಂಪೂರ್ಣ ಸ್ಥಳಾಂತರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಬಾಲ್ಯವಿವಾಹಕ್ಕೆ ಬಲಿಯಾದ ಬಾಲೆಯರು, ಹದಿಹರೆಯದಲ್ಲೇ ತಾಯ್ತನದ ಹೊರೆ

ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸುವವರಗೆ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ಈ ವೇಳೆ ಸ್ಥಳಕ್ಕೆ ಬಂದ ತಹಶೀಲ್ದಾರ್ ಜಯಕುಮಾರ್ ಮತ್ತು ಅರಣ್ಯಾಧಿಕಾರಿಗಳೊಂದಿಗೆ ಸ್ಥಳೀಯರು ವಾಗ್ವಾದ ನಡೆಸಿದರು. ಜತೆಗೆ ಬಾಳ್ಳುಪೇಟೆಯ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಆನೆಯಿಂದಾದ ಸಾವುಗಳು ಮತ್ತು ಇಲಾಖೆಯ ಕಾರ್ಯವೈಖರಿ

ಕಳೆದ ಒಂದು ತಿಂಗಳ ಹಿಂದೆ ಕಡೆಗರ್ಜೆ ಗ್ರಾಮದಲ್ಲಿ ಇಬ್ಬರು ಕಾರ್ಮಿಕರು ಆನೆ ದಾಳಿಯಿಂದ ಸಾವನ್ನಪ್ಪಿದ್ದರು.  ಆ ವೇಳೆ ಎರಡು ಕಾಡಾನೆ ಹಿಡಿಯುವುದರ ಜತೆಗೆ ಮತ್ತೆರಡು ಕಾಡಾನೆಗೆ ರೇಡಿಯೋಕಾಲರ್ ಆಳವಡಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಕಾರ್ಯಗತವಾಗಿಲ್ಲ.

ಆಸ್ಪತ್ರೆಗೆ ಶಾಸಕರ ಭೇಟಿ:
ಆನೆ ದಾಳಿಗೆ ಬಡ ಕಾರ್ಮಿಕ ರವಿ ಮೃತಪಟ್ಟ ಸುದ್ದಿ ತಿಳಿದು ಸ್ಥಳೀಯ ಶಾಸಕ ಹೆಚ್ ಕೆ ಕುಮಾರಸ್ವಾಮಿ ನಗರದ ಕ್ರಾಫರ್ಡ್ ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಆನೆಗಳ ದಾಳಿಯಿಂದ ಈ ಭಾಗದ ಜನರು ನಿರಂತರವಾಗಿ ಜೀವ ಮತ್ತು ಬೆಳೆಗಳನ್ನು ಕಳೆದುಕೊಂಡು ಪರಿತಪಿಸುವಂತಾಗಿದೆ. ನಿರ್ಭೀತಿಯಿಂದ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಸರ್ಕಾರ ಗಮನ ಸೆಳೆಯಲು ಪ್ರತಿಭಟನೆ ಮಾಡಲಾಗುವುದು. ಸ್ಥಳೀಯರು ಮತ್ತು ಪ್ರಗತಿಪರ ಸಂಘಟನೆಗಳೊಂದಿಗೆ ಶೀಘ್ರವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು" ಎಂದರು.

ಮೇ 16ರಂದು ಪ್ರತಿಭಟನೆ

ಕಾಡಾನೆ ಹಾವಳಿ ತಡೆಗಟ್ಟಲು ಶಾಶ್ವತ ಪರಿಹಾರಕ್ಕಾಗಿ ಮೇ 16 ರ ಸೋಮವಾರ ಬಾಳ್ಳುಪೇಟೆಯಲ್ಲಿ ಪಕ್ಷಾತೀತವಾಗಿ ತಾಲೂಕಿನ ಎಲ್ಲಾ ಸಂಘಟನೆಗಳನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ. ರಾಜ್ಯ ಹಾಗೂ ಕೆಂದ್ರ ಸರ್ಕಾರ ಕಾಡಾನೆ ಹಾವಳಿ  ನಿಯಂತ್ರಿಸಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕಳೆದ 6 ಅರಣ್ಯ ಮಂತ್ರಿಗಳು ಹಾಗೂ ಉಸ್ತುವಾರಿ ಮಂತ್ರಿಗಳು ಕೇವಲ ಹಾರಿಕೆಯ ಉತ್ತರ ನೀಡಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇವರ ಬೇಜವಾಬ್ದಾರಿಯಿಂದ ಈ ಭಾಗದಲ್ಲಿ ಅಮಾಯಕರು ಬಲಿಯಾಗುತಿದ್ದಾರೆ ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180