ಸ್ಯಾಂಟ್ರೋ ರವಿಯನ್ನು ಬಿಜೆಪಿಯವರೇ ಗುಜರಾತಿಗೆ ಕಳಿಸಿ, ಕಣ್ಣೊರೆಸಲು ಹಿಡಿದುಕೊಂಡು ಬಂದರು : ಸಿದ್ದರಾಮಯ್ಯ

ಸಿದ್ದರಾಮಯ್ಯ
  • ಬಿಜೆಪಿಯವರು ಸ್ಯಾಂಟ್ರೋ ರವಿ ಜೊತೆ ಶಾಮೀಲಾಗದಿದ್ದರೆ ಆತ ವರ್ಗಾವಣೆ ಮಾಡಿಸಲು ಸಾಧ್ಯವಾಗುತ್ತಿತ್ತಾ?
  • ʼಕುಮಾರಸ್ವಾಮಿ ಏನು ಮಹಾನ್‌ ಪರೋಪಕಾರಿ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಬೆಂಬಲ ನೀಡಿದ್ದಲ್ಲʼ

ಸ್ಯಾಂಟ್ರೋ ರವಿಯನ್ನು ಬಿಜೆಪಿಯವರೇ ಗುಜರಾತಿಗೆ ಕಳಿಸಿ, ಕಣ್ಣೊರೆಸಲು ಇವರೇ ಹಿಡಿದುಕೊಂಡು ಬಂದರು. ಬಿಜೆಪಿಯವರು ಅವನ ಜೊತೆ ಶಾಮೀಲಾಗದಿದ್ದರೆ ಪೊಲೀಸ್‌ ಅಧಿಕಾರಿಗಳನ್ನು ಆತ ವರ್ಗಾವಣೆ ಮಾಡಿಸಲು ಸಾಧ್ಯವಾಗುತ್ತಿತ್ತಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ತುಮಕೂರಿನಲ್ಲಿ ಮಂಗಳವಾರ ಕಾಂಗ್ರೆಸ್‌ ಪಕ್ಷ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಅವರು ಮಾತನಾಡಿ, ಸ್ಯಾಂಟ್ರೋನನ್ನು ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಿ ಪೊಲೀಸ್‌ ಕಸ್ಟಡಿಗೆ ಪಡೆಯಲು ಅರ್ಜಿಯನ್ನೂ ಹಾಕಲಿಲ್ಲ. ಇದೆಲ್ಲ ಒಂದು ನಾಟಕ ಅಷ್ಟೆ ಎಂದು ರಾಜ್ಯ ಸರ್ಕಾರದ ಬಂಡವಾಳವನ್ನು ಬಯಲಿಗೆಳೆದರು.

“ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಸಾವಿಗೆ ಸಚಿವ ಈಶ್ವರಪ್ಪ ಕಾರಣ. ತುಮಕೂರಿನ ಗುತ್ತಿಗೆದಾರ ಪ್ರಸಾದ್‌ ಅವರು ದೇವರಾಯನದುರ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡರು, ಇದಕ್ಕೆ ಯಾರು ಕಾರಣ? ಬೆಂಗಳೂರಿನ ಮಹದೇವಪುರದ ಪ್ರದೀಪ್‌ ಎಂಬುವ ವ್ಯಕ್ತಿ ಗುಂಡುಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ, ಶಾಸಕ ಅರವಿಂದ ಲಿಂಬಾವಳಿ ಅವರು ಪ್ರದೀಪ್‌ಗೆ ಅನ್ಯಾಯ ಮಾಡಿದ್ದ ಜನರ ಜೊತೆ ಸೇರಿಕೊಂಡಿದ್ದು ಆತ ಸಾಯಲು ಕಾರಣ” ಎಂದು ಆರೋಪಿಸಿದರು.

“ಕೆ ಆರ್‌ ಪುರಂನ ಇನ್ಸ್‌ಪೆಕ್ಟರ್‌ ಆತ್ಮಹತ್ಯೆ ಮಾಡಿಕೊಂಡಾಗ ಶವ ನೋಡಲು ಹೋದ ಸಚಿವ ಎಂಟಿಬಿ ನಾಗರಾಜ್‌ ಅವರು 70-80 ಲಕ್ಷ ಲಂಚ ಕೊಟ್ಟು ವರ್ಗಾವಣೆ ಮಾಡಿಕೊಂಡು ಬಂದರೆ ಸಾಯದೆ ಇನ್ನೇನು ಎಂದಿದ್ದರು. ಶಿವಕುಮಾರ್‌ ಎಂಬ ಗುತ್ತಿಗೆದಾರ ತನಗೆ ದಯಾಮರಣ ಕೊಡಿ ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ಶೇ. 40 ಕಮಿಷನ್‌ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಸುಮಾರು 20 ರಿಂದ 30 ಸಾವಿರ ಕೋಟಿ ಬಿಲ್‌ ಹಣವನ್ನು ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ನೀಡದೆ ಬಾಕಿ ಉಳಿಸಿಕೊಂಡಿದೆ” ಎಂದು ಕಿಡಿಕಾರಿದರು. 

“ಬೆಂಗಳೂರಿಗೆ ಕೇವಲ 70 ಕಿಮೀ ದೂರದಲ್ಲಿದ್ದರೂ ತುಮಕೂರು ಎಷ್ಟು ಅಭಿವೃದ್ಧಿ ಆಗಬೇಕಿತ್ತು ಆ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸಿಲ್ಲ. ಡಾ. ನಂಜುಂಡಪ್ಪ ಅವರ ವರದಿ ಪ್ರಕಾರ ತುಮಕೂರಿನ 10 ತಾಲೂಕುಗಳಲ್ಲಿ 8 ತಾಲೂಕುಗಳು ಹಿಂದುಳಿದವು. ನಾವು ಅಧಿಕಾರಕ್ಕೆ ಬಂದಾಗ 2013 ರಲ್ಲಿ ತುಮಕೂರಿನ ಜನರ ತಲಾ ಆದಾಯ 43,687 ರೂ. ಇತ್ತು. ನಾವು ಅಧಿಕಾರದಿಂದ ಇಳಿಯುವಾಗ ತಲಾ ಆದಾಯ 1,74.884 ರೂ. ಆಗಿತ್ತು. ಈಗಿನ ತಲಾ ಆದಾಯ 1,84,000 ರೂ. ಇದೆ. ಕಳೆದ 5 ವರ್ಷಗಳಲ್ಲಿ 9,200 ರೂ. ಜಾಸ್ತಿಯಾಗಿದೆ. ಇದು ತುಮಕೂರು ಜಿಲ್ಲೆಗೆ ಬಿಜೆಪಿ ಸರ್ಕಾರದ ಕೊಡುಗೆ, ಈ ಅಂಕಿಅಂಶಗಳನ್ನು ರಾಜ್ಯ ಬಿಜೆಪಿ ಸರ್ಕಾರವೇ ನೀಡಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ʼಆಪರೇಷನ್ ಕಮಲʼದ ಅಭ್ಯರ್ಥಿಗಳನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ; ಡಿ ಕೆ ಶಿವಕುಮಾರ್

“ಬಿಜೆಪಿ ಪಕ್ಷ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿರುವುದಲ್ಲ, ಆಪರೇಷನ್‌ ಕಮಲ ಮಾಡಿ ಶಾಸಕರನ್ನು ಖರೀದಿಸಿ ಅನೈತಿಕ ಮಾರ್ಗದ ಮೂಲಕ ಸರ್ಕಾರ ರಚಸಿರುವುದು. ಬಿಜೆಪಿ ಪಕ್ಷ ಕಳೆದ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗೆದ್ದಿದ್ದರೂ ಕಾಂಗ್ರೆಸ್‌ ಪಕ್ಷ ಪಡೆದ ಒಟ್ಟು ಮತಗಳ ಪ್ರಮಾಣ ಬಿಜೆಪಿಗಿಂತ ಹೆಚ್ಚಿದೆ. ನಮಗೆ ಶೇ. 38.15 ಮತಗಳು ಬಂದಿದ್ದರೆ, ಬಿಜೆಪಿಗೆ ಶೇ. 36.42% ಮತ ಬಂದಿತ್ತು. ಅಂದರೆ ಜನರ ಆಶೀರ್ವಾದ ಯಾರ ಪರವಾಗಿದೆ ಎಂದು ಅರ್ಥ? ನಮ್ಮ ಪರವಾಗಿದೆ ಅಲ್ಲವೇ?” ಎಂದರು.

ಕುಮಾರಸ್ವಾಮಿ ಮಹಾನ್‌ ಪರೋಪಕಾರಿ ಸಿಎಂ ಅಲ್ಲ!

“ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ಜೆಡಿಎಸ್‌ ಗೆ ಬೇಷರತ್‌ ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು, ಇದನ್ನೇ ಕುಮಾರಸ್ವಾಮಿ ಅವರು ಆಗಾಗ ಕಾಂಗ್ರೆಸ್‌ ನವರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು ಎನ್ನುತ್ತಾರೆ. ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಏಕೈಕ ಕಾರಣಕ್ಕೆ ಕುಮಾರಸ್ವಾಮಿಗೆ ಬೆಂಬಲ ನೀಡಿದ್ದು, ಕುಮಾರಸ್ವಾಮಿ ಏನು ಮಹಾನ್‌ ಪರೋಪಕಾರಿ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಬೆಂಬಲ ನೀಡಿದ್ದಲ್ಲ” ಎಂದು ಹರಿಹಾಯ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app