ಸಾವರ್ಕರ್‌ ಫ್ಲೆಕ್ಸ್ ಹರಿದವರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ ಮಾಜಿ ಸಚಿವ

  • ಸ್ವಾತಂತ್ರ್ಯ ಸಂಭ್ರಮದ ಅಂಗವಾಗಿ ಹಾಕಲಾಗಿದ್ದ ಸಾವರ್ಕರ್‌ ಫ್ಲೆಕ್ಸ್‌
  • ಫ್ಲೆಕ್ಸ್‌ ಹರಿದವರಿಗೆ ಕಂಡಲ್ಲಿ ಗುಂಡಿಕ್ಕಬೇಕೆಂದು ವಿವಾದ ಸೃಷ್ಟಿಸಿದ ಮಾಜಿ ಸಚಿವ

ಶಿವಮೊಗ್ಗದಲ್ಲಿ ಸಾವರ್ಕರ್‌ ಫ್ಲೆಕ್ಸ್‌ ಹರಿದವರಿಗೆ ಕಂಡಲ್ಲಿ ಗುಂಡಿಕ್ಕಬೇಕು ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸೊಗಡು ಶಿವಣ್ಣ ಪ್ರಚೋದನಾತ್ಮಕ ಹೇಳಿಕೆ ನೀಡಿ, ವಿವಾದಕ್ಕೆ ಸಿಲುಕಿದ್ದಾರೆ. ಅವರ ಹೇಳಿಕೆಯ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸಾವರ್ಕರ್‌ ಅವರನ್ನು ವೀರ ಸ್ವಾತಂತ್ರ್ಯ ಹೋರಾಟಗಾರನೆಂದು ಬಿಂಬಿಸುವ ಫ್ಲೆಕ್ಸ್‌ಅನ್ನು ಶಿವಮೊಗ್ಗ ನಗರದ  ಅಶೋಕ ರಸ್ತೆಯ ಎಂಪ್ರೆಸ್ ಕಾಲೇಜಿನ ಮುಂಭಾಗ ಹಾಕಲಾಗಿತ್ತು. ಆದರೆ, ಫ್ಲೆಕ್ಸ್‌ಅನ್ನು ಹರಿದು ಹಾಕಲಾಗಿತ್ತು. ಇದರಿಂದಾಗಿ, ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಸೋಮವಾರ ಗಾಂಧಿ ಬಜಾರ್‌ ಬಳಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ. ನಗರದಲ್ಲಿ 144 ಸೆಕ್ಷನ್‌ (ನಿಷೇಧಾಜ್ಞೆ) ಜಾರಿಗೊಳಿಸಲಾಗಿದೆ. 

ಇಂತಹ ಉದ್ವಿಗ್ನ ಪರಿಸ್ಥಿತಿಯ ನಡುವೆ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸೊಗಡು ಶಿವಣ್ಣ, "ತುಮಕೂರು ಜಿಲ್ಲೆಯು ಕೆಜೆ ಹಳ್ಳಿ, ಡಿಜೆಹಳ್ಳಿ ಹಾಗೂ ಶಿವಮೊಗ್ಗದಂತಾಗುವುದು ಬೇಡ. ಸರ್ವರ್ಕರ್ ಫೋಟೋ‌ ಹರಿದವರು ಪಾಪಿಗಳು. ಅವರನ್ನು ಕೋಡಲೇ ಬಂಧಿಸಬೇಕು. ಕಿಡಿಗೇಡಿಗಳಿಗೆ ಕಂಡಲ್ಲಿ ಗುಂಡಿಕ್ಕಬೇಕು" ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. 

ಮಾಜಿ ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದ್ದು, "ತುಮಕೂರು ಬಹಳ ಶಾಂತನಗರ. ಅನ್ನದಾಸೋಹದ ಸಿದ್ದಗಂಗೆ ಮಠ ಮತ್ತು ಶಿಕ್ಷಣಕ್ಕೆ ಹೆಸರುವಾಸಿ.... ಇಲ್ಲ ಹಲವಾರು ಸೈದ್ಧಂತಿಕ ವಾದಿಗಳು, ವಿಚಾರವಂತರು ಜೀವಿಸಿದ್ದಾರೆ. ಇಂತಹ ನೆಲದಲ್ಲಿ ನಿಂತು, ಸೊಗಡು ಶಿವಣ್ಣ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ತುಮಕೂರಿಗೆ ಅಪಮಾನ" ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್