ಮತ್ತೆ ಮುನ್ನೆಲೆಗೆ ಒಳ ಮೀಸಲಾತಿ ಚರ್ಚೆ| ಈ ಬಾರಿ ಬಿಜೆಪಿಗೆ ಬೀಳಲಿದೆಯೇ ಆಕ್ರೋಶದ ಬರೆ?

ವಿಶ್ವ ಮಾದಿಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಸಮುದಾಯಕ್ಕೆ ಒಳಿತು ಮಾಡುವುದಾಗಿ ಹೇಳಿದರೇ ಹೊರತು, ವರದಿ ಜಾರಿಗಾಗಿ ಒಕ್ಕೂಟ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಹೇಳಿಲ್ಲ. ಅಡ್ಡಗೋಡೆ ಮೇಲೆ ದೀಪವಿಟ್ಟಂತಹ ಮುಖ್ಯಮಂತ್ರಿಗಳ ಈ ಹೇಳಿಕೆಯಿಂದ ಸಮುದಾಯದ ಮುಖಂಡರು ಅಸಮಾಧಾನಗೊಂಡಿದ್ದಾರೆ.

ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗಾಗಿ ರಚಿಸಲಾಗಿದ್ದ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗ ವರದಿ ನೀಡಿ ದಶಕವೇ ಕಳೆದಿದೆ. ಆದರೆ, ಸರ್ಕಾರಗಳು ಮಾತ್ರ ವರದಿಯನ್ನು ಬಹಿರಂಗ ಚರ್ಚೆಗೆ ಒಳಪಡಿಸಿ, ಕೇಂದ್ರಕ್ಕೆ ಶಿಫಾರಸು ಮಾಡುವ ಇಚ್ಚಾಶಕ್ತಿ ಪ್ರದರ್ಶಿಸುತ್ತಿಲ್ಲ. 

ಈ ಬಗ್ಗೆ ಶುಕ್ರವಾರ (ಮೇ 13) ಮಾತನಾಡಿರುವ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ, “ಎಸ್‌ಸಿ ಆಂತರಿಕ ಮೀಸಲು(ಒಳ ಮೀಸಲು) ಸಂಬಂಧ ಆರ್‌ಎಸ್‌ಎಸ್‌ ನಾಯಕರು, ಮುಖ್ಯಮಂತ್ರಿ ಹಾಗೂ ಬಿಜೆಪಿಯ ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡಲಾಗುತ್ತಿದೆ" ಎಂದು ತಿಳಿಸಿದ್ದಾರೆ. 

ವಿಶ್ವ ಮಾದಿಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಸಮುದಾಯಕ್ಕೆ ಒಳಿತು ಮಾಡುವುದಾಗಿ ಹೇಳಿದರೇ ಹೊರತು, ವರದಿ ಜಾರಿಗಾಗಿ ಒಕ್ಕೂಟ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಹೇಳಿಲ್ಲ. ಅಡ್ಡಗೋಡೆ ಮೇಲೆ ದೀಪವಿಟ್ಟಂತಹ ಮುಖ್ಯಮಂತ್ರಿಗಳ ಈ ಹೇಳಿಕೆಯಿಂದ ಸಮುದಾಯದ ಮುಖಂಡರು ಅಸಮಾಧಾನಗೊಂಡಿದ್ದಾರೆ.

ನ್ಯಾ. ಸದಾಶಿವ ಆಯೋಗ ವರದಿ ಜಾರಿ ಮಾಡದಿರುವ ಬಗ್ಗೆ ಈ ದಿನ.ಕಾಮ್ ಜತೆಗೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿ ಎಸ್ ದ್ವಾರಕನಾಥ್ ಮಾತನಾಡಿ, “2018ರ ಚುನಾವಣೆಯಲ್ಲಿ ಎಡಗೈ ಸಮುದಾಯ ಬಿಜೆಪಿಗೆ ಬೆಂಬಲಿಸಿದ್ದೇ ವರದಿಯನ್ನು ಕೇಂದ್ರಕ್ಕೆ ಶಿಪಾರಸು ಮಾಡುವ ಭರವಸೆಯಿಂದ. ಆದರೆ, ಅಧಿಕಾರ ವಹಿಸಿಕೊಂಡು ನಾಲ್ಕು ವರ್ಷಗಳಾಗುತ್ತಾ ಬಂದಿದ್ದರೂ ಯಾವ ಕ್ರಮವನ್ನೂ ಕೈಗೊಂಡಿಲ್ಲ” ಎಂದು ಹೇಳಿದರು.

“ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾದ ಪ್ರಮುಖ ಕಾರಣಗಳಲ್ಲಿ ಎಡಗೈ ಸಮುದಾಯದ ಒಳಮೀಸಲಾತಿ ನಿಲುವೂ ಒಂದು. ಅಧಿಕಾರ ವಹಿಸಿಕೊಂಡು ನಾಲ್ಕು ವರ್ಷವಾದ ಮೇಲೂ ಭರವಸೆ ಈಡೇರಿಸದೇ ಇದ್ದರೆ ಅದು ವಂಚನೆಯಾಗುತ್ತದೆ” ಎಂದರು.

ಈ ಸುದ್ದಿ ಓದಿದ್ದೀರಾ?: ಈ ದಿನ ವಿಶೇಷ |ʼಭಗತ್‌ ಸಿಂಗ್‌ʼ ಪಠ್ಯ ಕುರಿತು ಹಸಿ ಸುಳ್ಳು ನುಡಿದ ಕರ್ನಾಟಕ ಪಠ್ಯಪುಸ್ತಕ ಸಂಘ 

“ಸರ್ಕಾರವೇ ಆಯೋಗವನ್ನು ರಚನೆ ಮಾಡಿದೆ. ಆದ್ದರಿಂದ, ಸದಾಶಿವ ಆಯೋಗದ ವರದಿಯನ್ನು ಕೂಡಲೇ ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು. ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಒಳ ಮೀಸಲಾತಿ ವರದಿ ಬಗ್ಗೆ ಈಗ ಚರ್ಚೆಯಾಗುತ್ತಿರುವ ವಿಚಾರದಲ್ಲಿ ಹಲವು ಗೊಂದಲಗಳಿವೆ. ನ್ಯಾಯಮೂರ್ತಿ ಸದಾಶಿವ ಅವರ ಪತ್ರಿಕಾ ಹೇಳಿಯನ್ನಿಟ್ಟುಕೊಂಡು ಮಾತನಾಡಲಾಗುತ್ತಿದೆ. ಮೊದಲು ವರದಿ ಬಗ್ಗೆ ಸಾರ್ವಜನಿಕ ಚರ್ಚೆಯಾಗಬೇಕು” ಎಂದು ಹೇಳಿದರು.

ಸರ್ಕಾರದ ರಚಿಸಿರುವ ಹಲವು ಆಯೋಗಗಳ ವರದಿಗಳು ಹೀಗೆ ಆಗಿವೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “₹187 ಕೋಟಿ ಖರ್ಚು ಮಾಡಿ ಕಾಂತರಾಜು ಆಯೋಗ ಜಾತಿ ಗಣತಿ ನಡೆಸಿದೆ. ಇದಕ್ಕೆಲ್ಲ ಖರ್ಚಾಗಿರುವುದು ಶ್ರೀಸಾಮಾನ್ಯರ ತೆರಿಗೆ ಹಣ. ಮುಖ್ಯಮಂತ್ರಿ ಚಂದ್ರು ಮತ್ತು ಹಿಂದುಳಿದ ವರ್ಗಗಳ ಸಂಘಟನೆ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿ, ಕಾಂತರಾಜು ಆಯೋಗ ವರದಿಯನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸುವಂತೆ ಕೇಳಿಕೊಂಡಿದ್ದಾರೆ” ಎಂದರು.

“ನ್ಯಾ. ನಾಗಮೋಹನ್ ದಾಸ್ ವರದಿ ಕೂಡಾ ಜಾರಿಗೆ ಸರ್ಕಾರ ಮುಂದಾಗುತ್ತಿಲ್ಲ. ಜನಸಂಖ್ಯೆ ಆಧಾರದಲ್ಲಿ ಎಸ್‌ಟಿ ಮೀಸಲಾತಿ ಹೆಚ್ಚಿಸುವಂತೆ ಪ್ರಸನ್ನಾನಂದಪುರಿ ಸ್ವಾಮೀಜಿ ನೂರು ದಿನಗಳಿಂದ ಬೆಂಗಳೂರಿನಲ್ಲಿ ಧರಣಿ ನಡೆಸುತ್ತಿದ್ದಾರೆ. ನ್ಯಾ. ಸದಾಶಿವ ಆಯೋಗದ ವರದಿ ಎಲ್ಲಕ್ಕಿಂತಲೂ ಹಳೆಯದು. ಎಸ್‌ಸಿ-ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಬಗ್ಗೆ ಬಿಜೆಪಿಗಿರುವ ಕಾಳಜಿ ಎಷ್ಟೆಂಬುದು ಗೊತ್ತಾಗುತ್ತದೆ. ಬಿಜೆಪಿ ಯಾವತ್ತಿಗೂ ಬಲಿಷ್ಠವರ್ಗ ಮತ್ತು ಜಾತಿಯ ಪರವಾದ ಪಕ್ಷ” ಎಂದು ಹೇಳಿದರು.

Image

ಹೈಕೋರ್ಟ್ ವಕೀಲ ಅನಂತ್ ನಾಯ್ಕ್ ಮಾತನಾಡಿ, “ನ್ಯಾ. ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಪಾರಸು ಮಾಡಬೇಕೆನ್ನುವುದೇ ಅಸಂವಿಧಾನಿಕ. ಮೊದಲು ವರದಿಯ ದೃಢೀಕೃತ ಪ್ರತಿಗಳನ್ನು ಬಾಧಿತ ಎಲ್ಲಾ ಜಾತಿಗಳಿಗೆ ನೀಡಬೇಕು. ಅವರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡ ನಂತರ, ವರದಿಯನ್ನು ಕೇಂದ್ರಕ್ಕೆ ಶಿಪಾರಸು ಮಾಡಬೇಕೆ? ಬೇಡವೇ? ಎನ್ನುವ ಬಗ್ಗೆ ತೀರ್ಮಾನ ಮಾಡಬೇಕು” ಎಂದು ಹೇಳಿದರು.

“ನ್ಯಾ. ಸದಾಶಿವ ಆಯೋಗದ ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಎಲ್ಲಾ ವರದಿಗಳನ್ನು ಸರ್ಕಾರ ಒಪ್ಪಬೇಕಿಲ್ಲ. ಅದನ್ನು ಒಪ್ಪುವ, ಭಾಗಶಃ ಒಪ್ಪುವ ಮತ್ತು ತಿರಸ್ಕರಿಸುವ ಎಲ್ಲ ಹಕ್ಕು ಸರ್ಕಾರಕ್ಕಿದೆ. ಅದಕ್ಕೂ ಮೊದಲು ವರದಿಗಳು ಸಾರ್ವಜನಿಕವಾಗಿ ಚರ್ಚೆಗೆ ಒಳಪಡಬೇಕು” ಎಂಬುದು ಅವರ ವಾದ.

ಮಾದಿಗ ದಂಡೋರ ರಾಜ್ಯಾಧ್ಯಕ್ಷರಾದ ಬಿ ನರಸಪ್ಪ ದಂಡೋರ ಮಾತನಾಡಿ, “ನ್ಯಾ. ಸದಾಶಿವ ಆಯೋಗದ ವರದಿಯನ್ನು ತುರ್ತಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಪಾರಸು ಮಾಡಬೇಕಿದೆ. ನಾವು ಈ ಬಗ್ಗೆ ಕಳೆದ 25 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ” ಎಂದು ಹೇಳಿದರು.

ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಪಾರಸು ಮಾಡುವಂತೆ ನಾವು ಎಲ್ಲಾ ಸರ್ಕಾರಗಳಿಗೆ ಮನವಿ ನೀಡಿದ್ದೇವೆ. ಪರಿಶಿಷ್ಟ ಜಾತಿಯಲ್ಲಿ ಒಟ್ಟು 101 ಜಾತಿಗಳಿದ್ದು, ಇದರಲ್ಲಿ ಮಾದಿಗ ಮತ್ತು ಇತರೆ ಸಣ್ಣ ಜಾತಿಗಳಿಗೆ ಅನ್ಯಾಯವಾಗುತ್ತಿದೆ” ಎಂದು ಹೇಳಿದರು.

"ಪರಿಶಿಷ್ಟ ಜಾತಿಯಲ್ಲಿ ಸೇರಿಕೊಂಡಿರುವ ಲಂಬಾಣಿ, ಕೊರಚ, ಭೋವಿ ಜಾತಿಗಳಿಂದ ಮೂಲ ಅಸ್ಪೃಶ್ಯ ಜಾತಿಗಳಿಗೆ ಅನ್ಯಾಯವಾಗುತ್ತಿದೆ. ಸರ್ಕಾರಿ ನೌಕರಿ ಹಾಗೂ ರಾಜಕೀಯ ಮೀಸಲಾತಿಯಲ್ಲಿ ಇವರೇ ಸಿಂಹಪಾಲನ್ನು ಪಡೆಯುತ್ತಿದ್ದಾರೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿರುವ ನಮಗೆ ಅನ್ಯಾಯವಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.  

“ಚುನಾವಣೆ ಪೂರ್ವ ಷರತ್ತಿನಂತೆ 2018ರಲ್ಲಿ ನಾವು ಬಿಜೆಪಿಗೆ ಭೇಷರತ್ ಬೆಂಬಲ ವ್ಯಕ್ತಪಡಿಸಿದ್ದೆವು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಾಕಷ್ಟು ಬಾರಿ ಗಮನಕ್ಕೆ ತಂದಿದ್ದೇವೆ. ಅವರು ಭರವಸೆ ನೀಡುವುದು ಬಿಟ್ಟರೆ ವರದಿ ಶಿಫಾರಸ್ಸಿನ ಬಗ್ಗೆ ಖಚಿತ ಭರವಸೆ ನೀಡುತ್ತಿಲ್ಲ. ಅವರ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದೇವೆ” ಎಂದರು.

ಉಪ ಚುನಾವಣೆಗೂ ಮುನ್ನ ಕಟೀಲ್ ಭರವಸೆ

“19980-85ರಲ್ಲಿ ಎನ್ ರಾಚಯ್ಯ, ಬಿ ರಾಜಣ್ಣ ಸೇರಿದಂತೆ 22 ಜನ ಶಾಸಕರಿದ್ದರು. ಈಗ ಆರು ಜನಕ್ಕೆ ಬಂದು ನಿಂತಿದ್ದೇವೆ. ಕೇಂದ್ರ ಸಚಿವ ನಾರಾಯಣಸ್ವಾಮಿ ಹೋದಲ್ಲೆಲ್ಲಾ ವರದಿ ಬಗ್ಗೆ ಮಾತನಾಡುತ್ತಾರೆ. ಆದರೆ, ವರದಿಯನ್ನು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಆ ಕೆಲಸವನ್ನು ಮೊದಲು ಮಾಡಲಿ” ಎಂದು ಬಿ ನರಸಪ್ಪ ದಂಡೋರ ಹೇಳಿದರು.

ಈ ಸುದ್ದಿ ಓದಿದ್ದೀರಾ?: ಮಹದೇವಪುರ| ಬಿಬಿಎಂಪಿ ಪೌರಕಾರ್ಮಿಕರ ಗುಡಿಸಲು ಮೇಲೆ ಕುಸಿದ ಸಿಮೆಂಟ್ ಕಾಂಪೌಂಡ್!

ಆರ್‌ಎಸ್‌ಎಸ್‌ ಹೇಳಿದಂತೆ ಕೇಳುವ ಸರ್ಕಾರ 

"ಈ ಸರ್ಕಾರ ಪ್ರತಿಯೊಂದು ವಿಚಾರದಲ್ಲೂ ಆರ್‌ಎಸ್‌ಎಸ್‌ ಮುಂದಿಟ್ಟುಕೊಳ್ಳುತ್ತದೆ. ಸಂಘಪರಿವಾರದ ಮಾತಿನಂತೆ ರಾಜ್ಯ ಬಿಜೆಪಿ ಸರ್ಕಾರ ನಡೆಯುತ್ತಿದೆ. ಮೀಸಲಾತಿ ವಿಚಾರ ಚರ್ಚಿಸಲು ನಾವೂ ಕೂಡಾ ಕೇಶವಕೃಪಾ ಕಚೇರಿಗೆ ಹೋಗಿದ್ದೆವು. ಅಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ ಹಾಗೂ ರಾಜ್ಯ ಸಚಿವ ಗೊಂವಿಂದ ಕಾರಜೋಳ ನಮಗೆ ವರದಿ ಶಿಪಾರಸು ಮಾಡುವ ಭರವಸೆ ನೀಡಿದ್ದರು. ಚುನಾವಣೆಗೆ ಇನ್ನೊಂದು ವರ್ಷ ಇದೆ, ಇನ್ಯಾವಾಗ ಎಂದು ನಾವು ಅಲ್ಲೇ ಪ್ರಶ್ನೆ ಮಾಡಿದ್ದೆವು. ವರದಿ ಶಿಫಾರಸು ಮಾಡಿದರೆ ನಮ್ಮ ಇಡೀ ಸಮುದಾಯ ಮುಂದೆಯೂ ಸಂಪೂರ್ಣವಾಗಿ ಬಿಜೆಪಿಗೆ ಬೆಂಬಲಿಸುತ್ತೇವೆ. ಇಲ್ಲದಿದ್ದರೆ ಅವರಿಗೆ ಪಾಠ ಕಲಿಸುತ್ತೇವೆ" ಎಂದು ಹೇಳಿದ್ದಾರೆ.

ಒತ್ತಡದಿಂದ ಸಿದ್ದರಾಮಯ್ಯ ಶಿಪಾರಸು ಮಾಡಲಿಲ್ಲ

"ಕಾಂಗ್ರೆಸ್‌ನ ಕೆಲ ಮಾಜಿ ಮತ್ತು ಹಾಲಿ ಶಾಸಕರು ನಮ್ಮ ಮೀಸಲಾತಿ ಹೋರಾಟ ಬೆಂಬಲಿಸುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೆಲ ಪರಿಶಿಷ್ಟ ಶಾಸಕರು ವರದಿ ಶಿಫಾರಸು ಮಾಡದಂತೆ ಒತ್ತಡ ಹೇರಿದ್ದರು. ಈ ವಿಚಾರವನ್ನು ಸಿದ್ದರಾಮಯ್ಯ ಅವರೇ ನಮಗೆ ತಿಳಿಸಿದ್ದರು” ಎಂದರು. 

"ಕಾಂಗ್ರೆಸ್‌ನ ಎಚ್‌ಸಿ ಮಹದೇವಪ್ಪ, ಬಿಜೆಪಿಯ ಪಿ ರಾಜೀವ್, ಅರವಿಂದ ಲಿಂಬಾವಳಿ ಕೂಡಾ ವರದಿ ಶಿಪಾರಸು ಮಾಡದಂತೆ ವಿರೋಧಿಸಿದ್ದಾರೆ. ಸದಾಶಿವ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡದ ಕಾರಣಕ್ಕೆ 2018ರಲ್ಲಿ ನಾವು ಕಾಂಗ್ರೆಸ್ ಸೋಲಿಸಿದ್ದೇವೆ. ಈ ಬಾರಿಯೂ ಬಿಜೆಪಿ ಕೇಂದ್ರಕ್ಕೆ ಶಿಫಾರಸು ಮಾಡದಿದ್ದರೆ ನಾವು ಮತ್ತೆ ರಾಜ್ಯಾದ್ಯಂತ ಹೋರಾಟ ಕೈಗೆತ್ತಿಕೊಳ್ಳುತ್ತೇವೆ" ಎಂದು ನರಸಪ್ಪ ಎಚ್ಚರಿಕೆ ನೀಡಿದ್ದಾರೆ.

ಪ್ರತಿ ಬಾರಿ ಚುನಾವಣೆ ಸಮಯದಲ್ಲಿ ಹೆಡೆ ಎತ್ತುವ ಎಡಗೈ- ಬಲಗೈ ವಿವಾದ ಮತ್ತು ಅದಕ್ಕೆ ಸಂಬಂಧಿಸಿದಂತೆ ನ್ಯಾ ಎ ಜೆ ಸದಾಶಿವ ಆಯೋಗದ ವರದಿಯ ವಿಷಯ, ಈ ಬಾರಿಯೂ ಹೆಡೆ ಎತ್ತಿದೆ. 2018ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಪಕ್ಷದ ಸೋಲಿಗೆ ಕಾರಣವಾದ ಪ್ರಮುಖ ಸಂಗತಿಗಳಲ್ಲಿ ಈ ಎಡಗೈ- ಬಲಗೈ ವಿವಾದವೂ ಒಂದು. ಈ ಬಾರಿಯ ಚುನಾವಣೆಯಲ್ಲಿಯೂ ಅಂತಹದ್ದೇ ಪೆಟ್ಟು ಬಿಜೆಪಿಗೆ ಬೀಳಲಿದೆಯೇ? ಅಥವಾ ಬಿಜೆಪಿ ತನ್ನದೇ ಕೇಂದ್ರ ಸರ್ಕಾರವನ್ನು ಬಳಸಿಕೊಂಡು ದಶಕಗಳ ಈ ವಿವಾದಕ್ಕೆ ಅಂತ್ಯ ಹಾಡುವುದೆ? ಎಂಬುದು ಸದ್ಯದ ಕುತೂಹಲ.

ನಿಮಗೆ ಏನು ಅನ್ನಿಸ್ತು?
1 ವೋಟ್