ಕರೋನಾ ಆತಂಕ| ಕೋವಿಡ್ ಸೋಂಕು ದೃಢಪಟ್ಟರೂ ಶಾಲೆ-ಕಚೇರಿ ಮುಚ್ಚಬೇಕಿಲ್ಲ: ಆರೋಗ್ಯ ಇಲಾಖೆ

  • ನಗರದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಳ
  • ರಾಜ್ಯದಲ್ಲಿ ಮಂಗಳವಾರ 968 ಕೋವಿಡ್ ಪ್ರಕರಣ ದಾಖಲು

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶಾಲೆ ಮತ್ತು ಕಚೇರಿಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ದೃಢಪಟ್ಟರೂ ಶಾಲೆ ಮುಚ್ಚುವಂತಿಲ್ಲ. ಆದರೆ, ಸೋಂಕಿನ ಲಕ್ಷಣ ಹೊಂದಿರುವವರನ್ನು ಶಾಲೆ ಮತ್ತು ಕಚೇರಿಗಳಿಗೆ ಬರದಂತೆ ನಿರ್ಬಂಧಿಸಿ, ಸ್ವಯಂ ನಿಗಾ ವ್ಯವಸ್ಥೆಗೆ ಒಳಪಡಿಸಬೇಕು ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಿಸಿದೆ.

ಬೆಂಗಳೂರು ನಗರ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆರೋಗ್ಯ ಇಲಾಖೆ ಆಯುಕ್ತ ಡಿ ರಂದೀಪ್ ಹೊರಡಿಸಿರುವ ಸುತ್ತೋಲೆಯಲ್ಲಿ ಈ ಸೂಚನೆ ನೀಡಲಾಗಿದೆ.

“ಕೊವೀಡ್ ಸೋಂಕು ಕಂಡು ಬಂದರೆ ಶಾಲೆಗಳನ್ನು ಮುಚ್ಚುವ ಅಥವಾ ಅಪಾರ್ಟ್‌ಮೆಂಟ್‌ಗಳನ್ನು ಸೀಲ್ ಡೌನ್ ಮಾಡುವ ಅಗತ್ಯವಿಲ್ಲ. ಶಾಲೆಗಳಲ್ಲಿ ಕೋವಿಡ್ ಸೋಂಕಿನ ಲಕ್ಷಣ ಹೊಂದಿರುವ ಮಕ್ಕಳನ್ನು ಶಾಲೆಗೆ ಹಾಜರಾಗದಂತೆ ಸೂಚಿಸಬೇಕು” ಎಂದು ಅವರು ಹೇಳಿದ್ದಾರೆ.

"ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಕೋವಿಡ್ ಲಕ್ಷಣ ಕಾಣಿಸಿಕೊಂಡಾಗ ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕಿತರಾಗಿಲ್ಲ ಎಂಬ ವರದಿ ಬಂದಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಲಯ ಮಟ್ಟದಲ್ಲಿ ಪ್ರಕರಣಗಳು ವರದಿಯಾದ ಶಿಕ್ಷಣ ಸಂಸ್ಥೆಗಳು ಕೊಠಡಿಗಳನ್ನು ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಛಗೊಳಿಸಬೇಕು" ಎಂದು ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

AV Eye Hospital ad

"ಅಪಾರ್ಟ್‌ಮೆಂಟ್ ಅಥವಾ ವಸತಿ ಸಮುಚ್ಚಯದಲ್ಲಿ ಮೂರರಿಂದ ಐದು ಕೋವಿಡ್ ಪ್ರಕರಣಗಳು ವರದಿಯಾದಲ್ಲಿ ಸಣ್ಣ ವಲಯ ಎಂದು ಪರಿಗಣಿಸಿ, ನಿಗದಿತ ಬ್ಲಾಕ್‌ನಲ್ಲಿ ಲಕ್ಷಣ ಹೊಂದಿರುವವರನ್ನು ಪರೀಕ್ಷೆಗೆ ಒಳಪಡಿಸಬೇಕು. ಐದಕ್ಕಿಂತ ಹೆಚ್ಚು ಪ್ರಕರಣಗಳು ದೃಢಪಟ್ಟರೆ ದೊಡ್ಡ ವಲಯ ಎಂದು ಪರಿಗಣಿಸಬೇಕು. 15 ಅಥವಾ ಅದಕ್ಕಿಂತ ಹೆಚ್ಚಿನ ಪ್ರಕರಣಗಳು ವರದಿಯಾದಲ್ಲಿ ಅಪಾರ್ಟ್‌ಮೆಂಟ್ ವಸತಿ ಸಮುಚ್ಚಯದಲ್ಲಿ ಲಕ್ಷಣ ಹೊಂದಿರುವ ಎಲ್ಲರನ್ನೂ ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ಒಳಪಡಿಸಬೇಕು. ಸೋಂಕಿತರಾದಲ್ಲಿ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಆಸ್ಪತ್ರೆ, ಆರೈಕೆ ಕೇಂದ್ರ ಅಥವಾ ಮನೆ ಚಿಕಿತ್ಸೆ ಪಡೆಯಲು ನಿರ್ಧರಿಸಬೇಕು" ಎಂದು ತಿಳಿಸಿದ್ದಾರೆ.

"60 ವರ್ಷ ಮೇಲ್ಪಟ್ಟವರು ಹಾಗೂ ಗಂಭೀರ ಅನಾರೋಗ್ಯ ಸಮಸ್ಯೆ ಇರುವವರಿಗೆ ಕೋವಿಡ್ ಲಕ್ಷಣಗಳು ಕಂಡುಬಂದರೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕು" ಎಂದಿದ್ದಾರೆ.

ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಏರಿಕೆ

ಬೆಂಗಳೂರಿನಲ್ಲಿ 887 ಕೋವಿಡ್‌ ಪ್ರಕರಣಗಳು ಸೇರಿ ಒಟ್ಟು ರಾಜ್ಯದಲ್ಲಿ 968 ಕೋವಿಡ್ ಪ್ರಕರಣಗಳು ಮಂಗಳವಾರ ದಾಖಲಾಗಿವೆ. ಇದರಲ್ಲಿ ಹಳೆಯ ಪ್ರಕರಣಗಳು ಸೇರಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಚಾಮರಾಜಪೇಟೆ ಈದ್ಗಾ ಮೈದಾನದ ಆಸ್ತಿಗೆ ಖಾತಾ ಪ್ರಮಾಣ ಪತ್ರ ನೀಡಿಲ್ಲ : ಬಿಬಿಎಂಪಿ

24 ಗಂಟೆಗಳಲ್ಲಿ 17,784 ಕೋವಿಡ್ ಪರೀಕ್ಷೆ ಮಾಡಲಾಗಿದೆ. ಸೋಂಕು ದೃಢ ಪ್ರಮಾಣ ಶೇ 5.44ರಷ್ಟಿದೆ. ಕೋವಿಡ್ ಪೀಡಿತರಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ 78 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ 4,918 ಕೊವೀಡ್ ಸಕ್ರಿಯ ಪ್ರಕರಣಗಳಿದ್ದು, ಬೆಂಗಳೂರಿನಲ್ಲಿಯೇ 4,682 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಈವರೆಗೆ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 39.66 ಲಕ್ಷಕ್ಕೆ ಏರಿಕೆಯಾಗಿದೆ. 39.21 ಲಕ್ಷಕ್ಕೂ ಹೆಚ್ಚು ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್‌ಗೆ ಈವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 40,073ಕ್ಕೆ ಏರಿಕೆಯಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app