
- ಹಿಂದುತ್ವವಾದಿಯಿಂದ ಕುಂ. ವೀರಭದ್ರಪ್ಪ ಅವರಿಗೆ ಕೊಲೆ ಬೆದರಿಕೆ ಪತ್ರ
- ನಿಮ್ಮ ಶವ ಸಂಸ್ಕಾರಕ್ಕೆ ಈಗಲೇ ತಯಾರಿ ನಡೆಸಿಕೊಳ್ಳಿ ಎಂದು ಎಚ್ಚರಿಕೆ
ಹಿಂದುತ್ವವಾದಿಯೊಬ್ಬ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾನೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ವಿರೋಧಿಸಿ 61 ಸಾಹಿತಿಗಳು ಕಳೆದ ವಾರ ಸರ್ಕಾರಕ್ಕೆ ಪತ್ರ ಬರೆದು ಶಾಂತಿ ಕಾಪಾಡುವಂತೆ ಒತ್ತಾಯಿಸಿದ್ದರು. ಕುಂ ವೀರಭದ್ರಪ್ಪ ಕೂಡ ಆ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಆದರೆ, ಸಾಹಿತಿಗಳ ಈ ನಡೆಯನ್ನು ವಿರೋಧಿಸಿರುವ ಓರ್ವ ಹಿಂದುತ್ವವಾದಿ ಕುಂ. ವೀರಭದ್ರಪ್ಪ ಅವರಿಗೆ ಕೊಲೆ ಬೆದರಿಕೆ ಪತ್ರ ಬರೆದಿದ್ದಾನೆ.
ಪತ್ರದಲ್ಲಿ ಸಾಹಿತಿ ಕುಂ. ವೀರಭದ್ರಪ್ಪ ಜೊತೆಗೆ 61 ಸಾಹಿತಿಗಳು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್ ಡಿ ಕುಮಾರಸ್ವಾಮಿ ಅವರಿಗೂ ಕೊಲೆ ಬೆದರಿಕೆ ಹಾಕಿದ್ದಾನೆ.
ಕೊಲೆ ಬೆದರಿಕೆ ಪತ್ರದಲ್ಲಿ ಏನಿದೆ?
"ಹಿಜಾಬ್ ಮತ್ತು ಮುಸ್ಲಿಮರ ಪರವಾಗಿ, ಭಗವದ್ಗೀತೆ ವಿರುದ್ಧವಾಗಿ ನೀವು 61 ಸಾಹಿತಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೀರಿ. ನಿಮ್ಮ ಜೊತೆಗೆ ಸಿದ್ದರಾಮಯ್ಯ ಮತ್ತು ಎಚ್ ಡಿ ಕುಮಾರಸ್ವಾಮಿ ಸಹ ಇದ್ದಾರೆ. ನಿಮ್ಮಂತಹ ಹೊಲಸು ಮನಸ್ಥಿತಿ ಇರುವವರಿಗೆ ಪತ್ರ ಬರೆಯುತ್ತಿರುವ ಸಹಿಷ್ಣು ಹಿಂದು ನಾನು. ನಿಮಗೆ ನಾನು ಹೇಳುವುದು ಇಷ್ಟೆ. ಉಡುಪಿಯಲ್ಲಿ ಮತಾಂಧ ಮುಸ್ಲಿಂ ವ್ಯಾಪಾರಸ್ಥರು ಹಿಂದೂ ಮೀನು ಮಾರಾಟಗಾರರಿಂದ ಮೀನು ಖರೀದಿಸುವುದನ್ನು ಬಹಿಷ್ಕರಿಸಿದ್ದರು. ಶಿವಮೊಗ್ಗದಲ್ಲಿ ಹಿಂದೂ ಹೋರಾಟಗಾರ ಹರ್ಷನ ಕೊಲೆಯಾಯಿತು. ಆದರೆ, ಆಗೆಲ್ಲಾ ಬಾಯಿ ಬಿಡದ ಊಸರವಳ್ಳಿ ಸಾಹಿತಿಗಳು ಈಗ ಮತಾಂಧರ ಪರವಾಗಿ ಮಾತನಾಡುತ್ತಿದ್ದೀರ" ಎಂದು ಬರೆಯಲಾಗಿದೆ.


"ಈ ದೇಶದ ಸಂವಿಧಾನಕ್ಕೆ ನಯಾಪೈಸೆ ಬೆಲೆ ನೀಡದ ನರಹಂತಕ ಮುಸ್ಲಿಮರ ಪರವಾಗಿ, ಮುಸ್ಲಿಂ ಹೆಣ್ಣು ಮಕ್ಕಳ ಹಿಜಾಬ್ ಪರವಾಗಿ, ಈ ದೇಶದ ಮೂಲಗ್ರಂಥ ಭಗವದ್ಗೀತೆ ವಿರುದ್ಧವಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೀರ. ಹೀಗೆ ಪತ್ರ ಬರೆದ 61 ಸಾಹಿತಿಗಳೇ, ಬುದ್ಧಿಜೀವಿಗಳೇ ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ನೀವು ಸರ್ವನಾಶವಾಗಿದ್ದೀರಿ. ನಿಮ್ಮ ಸಾಹಿತ್ಯವನ್ನು ಅಧ್ಯಯನ ಮಾಡಲು ಯಾರೂ ಸಿಗಲಿಲ್ಲ ಎಂದಾಕ್ಷಣ ಈ ರೀತಿ ದೇಶದ್ರೋಹಿ ಕೆಲಸಕ್ಕೆ ಮುಂದಾಗಿದ್ದೀರಿ" ಎಂಬ ವಿವರ ಪತ್ರದಲ್ಲಿದೆ.
"ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರೇ ಈಗಾಗಲೇ ನೀವು ರಾಜಕೀಯವಾಗಿ ಸರ್ವನಾಶವಾಗಿದ್ದೀರಿ. ಈಗ ದೇಶದ್ರೋಹಿಗಳ ಜೊತೆ ನಿಂತು ಅನ್ನ ಹಾಕಿದ ಮನೆಗೆ ಕನ್ನ ಹಾಕಲು ಹವಣಿಸುತ್ತಿದ್ದೀರ. ಯಾರು ಏನೇ ಮಾಡಿದರು ಹಿಂದುಗಳನ್ನು, ಹಿಂದೂ ಸಂಪ್ರದಾಯ-ಸಂಸ್ಕೃತಿಯನ್ನು ನಾಶ ಮಾಡಲು ಸಾಧ್ಯವಿಲ್ಲ. ಆದರೆ, ನಿಮ್ಮ ಎಲ್ಲರ ಸರ್ವನಾಶ ಖಚಿತ. ನಿಮ್ಮೆಲ್ಲರ ಸಾವು ಯಾವಾಗ ಹೇಗಾಗುತ್ತೆ? ಎಂದು ಯಾರಿಗೂ ಗೊತ್ತಿಲ್ಲ. ಆದರೆ, ನೀವೆಲ್ಲರೂ ಖಚಿತವಾಗಿ ಸಾಯುತ್ತೀರಿ. ನಿಮ್ಮ ಸಾವು ಹತ್ತಿರವಾಗಿದೆ. ಕುಟುಂಬಸ್ಥರಿಗೆ ಹೇಳಿ ಈಗಲೇ ಶವ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಿ” ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.
ಇದನ್ನು ಓದಿದ್ದೀರಾ?: ರಾಮನ ಹೆಸರು ಹೇಳಿ ರಾವಣ ರಾಜ್ಯ ಸೃಷ್ಟಿಸಬೇಡಿ: ಎಚ್ ಡಿ ಕುಮಾರಸ್ವಾಮಿ
ಈ ಹಿಂದೆ ಹಿಂದುತ್ವವಾದಿಗಳು ಇದೇ ರೀತಿ ಆರೋಪಿಸಿದ ನಂತರ ಹಿರಿಯ ಸಾಹಿತಿ ಪ್ರೊ. ಎಂ ಎಂ ಕಲಬುರ್ಗಿ ಮತ್ತು ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿನೇಟಿಗೆ ಬಲಿಯಾಗಿದ್ದರು. ಅಲ್ಲದೆ, ಸಾಹಿತಿ ಚಿತ್ರ ನಿರ್ದೇಶಕ ಯೊಗೇಶ್ ಮಾಸ್ಟರ್ ಅವರಿಗೂ ಕೊಲೆ ಬೆದರಿಕೆ ಬಂದಿತ್ತು. ಇದೀಗ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪನವರಿಗೂ ಕೊಲೆ ಬೆದರಿಕೆ ಪತ್ರ ಬಂದಿರುವುದು ಚಿಂತಕರ ವಲಯದಲ್ಲಿ ಆತಂಕ ಸೃಷ್ಟಿಸಿದೆ.