ಶರಾವತಿ ಮುಳುಗಡೆ ಸಂತ್ರಸ್ತರ ಪಾಲಿಗೆ ಕಾಂಗ್ರೆಸ್‌ ಇದ್ದೂ ಸತ್ತಂತೆ: ಗೃಹ ಸಚಿವ ಆರಗ ಜ್ಞಾನೇಂದ್ರ ಟೀಕೆ

ಆರಗ ಜ್ಞಾನೇಂದ್ರ
  • ʼಶರಾವತಿ ಮುಳುಗಡೆ ಸಂತ್ರಸ್ತರ ಪರ ಕಾಂಗ್ರೆಸ್ ಮತಗಳ ರಾಜಕಾರಣ ಮಾಡುತ್ತಿದೆʼ
  • ʼಡಿಸೆಂಬರ್ ಅಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ, ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆʼ

"ಕಾಂಗ್ರೆಸ್‌ ಪಕ್ಷ 60 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸದೇ ಅವರ ಪಾಲಿಗೆ ಇದ್ದೂ ಸತ್ತಂತಾಗಿದೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಟೀಕಿಸಿದರು.

ಶಿವಮೊಗ್ಗ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, "ಕಾಂಗ್ರೆಸ್‌ ತನ್ನ ಅಧಿಕಾರದ ಅವಧಿಯಲ್ಲಿ ಕೇಂದ್ರದ ಅನುಮತಿ ಪಡೆಯದೇ ಸಂತ್ರಸ್ತರಿಗೆ ಮಂಜೂರಾತಿ ಮಾಡಲು ಅರಣ್ಯ ಭೂಮಿ ಡಿನೋಟಿಫಿಕೇಷನ್ ಮಾಡಿದೆ. ಅದನ್ನು ಪರಿಶೀಲನೆ ನಡೆಸಿ ನಾವು ಸರಿಪಡಿಸಲು ಮುಂದಾಗಿದ್ದೇವೆ” ಎಂದರು.

"ಶರಾವತಿ ಮುಳುಗಡೆ ಸಂತ್ರಸ್ತರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ನಡೆಸುತ್ತಿರುವುದು ಮತಗಳ ರಾಜಕಾರಣವೇ ಹೊರತು ನೈಜ ಹೋರಾಟವಲ್ಲ” ಎಂದು ಹರಿಹಾಯ್ದರು.

“ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಸಂತ್ರಸ್ತರಿಗೆ ಮಂಜೂರಾತಿ ಮಾಡಿರುವ ಅರಣ್ಯ ಭೂಮಿಯ ಜಂಟಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ಅರಣ್ಯ ಭೂಮಿ ಮಂಜೂರಾತಿ ರದ್ದು ಪ್ರಶ್ನಿಸಿ ಈಗ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಪ್ರಶ್ನೆಯೇ ಇಲ್ಲ. ಡಿಸೆಂಬರ್ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಅನುಮತಿ ಪಡೆದು ಸಂತ್ರಸ್ತರಿಗೆ ಹಕ್ಕುಪತ್ರ ಕೊಡಲಾಗುವುದು” ಎಂದರು.

ಆರೋಪಿಯ ಆರೋಗ್ಯ ಸುಧಾರಿಸಿದ ನಂತರ ತನಿಖೆ

“ಮಂಗಳೂರಿನಲ್ಲಿ ಆಟೋದಲ್ಲಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯ ಆರೋಗ್ಯ ಸುಧಾರಿಸಿದ ನಂತರ ಅವನ ಹೇಳಿಕೆ ಪಡೆದು ತನಿಖೆ ನಡೆಸಲಾಗುವದು. ಆರೋಪಿಯ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಇದರ ಆಧಾರದ ಮೇಲೆ ತನಿಖೆ ನಡೆಸಲಾಗುವುದು” ಎಂದರು.

ಈ ಸುದ್ದಿ ಓದಿದ್ದೀರಾ? ಈ ದಿನ ಎಕ್ಸ್‌ಕ್ಲೂಸಿವ್ । ಅಲ್ಪಸಂಖ್ಯಾತರಿಗೆ ಮತ್ತೊಂದು ಶಾಕ್: ಇನ್ನು ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗಿಲ್ಲ ಕೇಂದ್ರದ ಸ್ಕಾಲರ್‌ಶಿಪ್!

ಮಹಾರಾಷ್ಟ್ರದ 47 ಗ್ರಾಮಗಳು ಕರ್ನಾಟಕ ಸೇರಲು ಬೇಡಿಕೆ

“ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಭಾಗದಲ್ಲಿ ಸಣ್ಣಪುಟ್ಟ ಘರ್ಷಣೆಯ ಘಟನೆಗಳು ನಡೆಯುತ್ತಿವೆ. ಮಹಾರಾಷ್ಟ್ರದ 47 ಗ್ರಾಮಗಳು ಕರ್ನಾಟಕ ಸೇರಲು ಬೇಡಿಕೆ ಇಟ್ಟಿದ್ದು, ಅದನ್ನು ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಎಡಿಜಿಪಿಗೆ ಸೂಚನೆ ನೀಡಿ ಗಡಿ ಭಾಗದ ಗ್ರಾಮಗಳಿಗೆ ರಕ್ಷಣೆ ನೀಡಲಾಗುವುದು” ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app